ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ರಿಟೇಲ್‌ ಮಾರಾಟ ಶೇ 37ರಷ್ಟು ಹೆಚ್ಚಳ: ಎಫ್‌ಎಡಿಎ

Last Updated 5 ಮೇ 2022, 13:03 IST
ಅಕ್ಷರ ಗಾತ್ರ

ನವದೆಹಲಿ: ವಾಹನಗಳ ರಿಟೇಲ್‌ ಮಾರಾಟವು ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್‌ನಲ್ಲಿ ಶೇಕಡ 37ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ವಾಹನ ವಿತರಕರ ಒಕ್ಕೂಟ (ಎಫ್‌ಎಡಿಎ) ಗುರುವಾರ ಮಾಹಿತಿ ನೀಡಿದೆ.

2021ರ ಏಪ್ರಿಲ್‌ನಲ್ಲಿ 11.87 ಲಕ್ಷ ವಾಹನಗಳು ಮಾರಾಟ ಆಗಿದ್ದವು. 2022ರ ಏಪ್ರಿಲ್‌ನಲ್ಲಿ 16.27 ಲಕ್ಷಕ್ಕೆ ಏರಿಕೆ ಆಗಿದೆ.

ಪ್ರಯಾಣಿಕ ವಾಹನ ಮಾರಾಟವು 2.10 ಲಕ್ಷದಿಂದ 2.64 ಲಕ್ಷಕ್ಕೆ, ಅಂದರೆ ಶೇ 25ರಷ್ಟು ಹೆಚ್ಚಾಗಿದೆ. ದ್ವಿಚಕ್ರ ವಾಹನ ಮಾರಾಟ ಶೇ 38ರಷ್ಟು, ತ್ರಿಚಕ್ರ ಮಾರಾಟದಲ್ಲಿ ಶೇ 96ರಷ್ಟು ಏರಿಕೆ ಆಗಿದೆ. ವಾಣಿಜ್ಯ ವಾಹನಗಳ ಮಾರಾಟ ಶೇ 52ರಷ್ಟು ಹೆಚ್ಚಾಗಿದೆ. ಟ್ರ್ಯಾಕ್ಟರ್‌ ಮಾರಾಟ ಶೇ 26ರಷ್ಟು ಹೆಚ್ಚಾಗಿದೆ.

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ 2020ರ ಏಪ್ರಿಲ್ ಮತ್ತು 2021ರ ಏಪ್ರಿಲ್‌ನಲ್ಲಿ ವಾಹನಗಳ ಮಾರಾಟ ಅತ್ಯಲ್ಪ ಪ್ರಮಾಣದಲ್ಲಿತ್ತು. 2021ರ ಏಪ್ರಿಲ್‌ಗೆ ಹೋಲಿಸಿದರೆ 2022ರ ಏಪ್ರಿಲ್‌ನಲ್ಲಿ ಎಲ್ಲಾ ವಿಭಾಗಗಳೂ ಉತ್ತಮ ಬೆಳವಣಿಗೆ ಕಂಡಿವೆ ಎಂದು ಒಕ್ಕೂಟದ ಅಧ್ಯಕ್ಷ ವಿಂಕೇಶ್‌ ಗುಲಾಟಿ ಹೇಳಿದ್ದಾರೆ.

2019ರ ಮಟ್ಟಕ್ಕೆ ಹೋಲಿಸಿದರೆ 2022ರ ಏಪ್ರಿಲ್‌ನಲ್ಲಿ ಶೇ 6ರಷ್ಟು ಕಡಿಮೆ ಮಾರಾಟ ಆಗಿದೆ ಎಂದು ಅವರು ತಿಳಿಸಿದ್ದಾರೆ.

ರಷ್ಯಾ–ಉಕ್ರೇನ್‌ ಸಂಘರ್ಷ ಮುಂದುವರಿದಿದ್ದು, ಚೀನಾದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಯಾಗಿರುವುದರಿಂದ ಸೆಮಿಕಂಡಕ್ಟರ್‌ ಚಿಪ್‌ ಕೊರತೆಯು ವಾಹನೋದ್ಯಮವನ್ನು ಇನ್ನಷ್ಟು ಕಾಡಲಿದೆ. ಲೋಹಗಳ ಬೆಲೆ ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ಕಂಟೈನರ್‌ ಕೊರತೆ ಸಹ ವಲಯದ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದು ಅವರು ಹೇಳಿದ್ದಾರೆ.

ಆರ್‌ಬಿಐ ಬಡ್ಡಿದರ ಹೆಚ್ಚಳ ಮಾಡಿರುವುದರಿಂದ ವ್ಯವಸ್ಥೆಯಲ್ಲಿ ಇರುವ ಹೆಚ್ಚುವರಿ ನಗದು ಲಭ್ಯತೆಯನ್ನು ಕಡಿಮೆ ಮಾಡಲಿದೆ. ಅಲ್ಲದೆ ವಾಹನ ಸಾಲವನ್ನು ದುಬಾರಿಯಾಗಿಸಲಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT