ಶುಕ್ರವಾರ, ಫೆಬ್ರವರಿ 28, 2020
19 °C

ಇಎಸ್‌ಜಿ ಮ್ಯೂಚುವಲ್‌ ಫಂಡ್‌; ಕಂಪನಿಯ ಪರಿಸರ, ಸಾಮಾಜಿಕ, ಆಡಳಿತ ವೈಖರಿಯೇ ಆಧಾರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮ್ಯೂಚುವಲ್‌ ಫಂಡ್‌ಗಳು

ಮ್ಯೂಚುವಲ್‌ ಫಂಡ್‌ ವಲಯದಲ್ಲಿ ಗಮನ ಸೆಳೆಯುತ್ತಿರುವ 'ಇಎಸ್‌ಜಿ' ಫಂಡ್‌ಗಳ ಕಡೆಗೆ ಹಲವು ಸಂಸ್ಥೆಗಳು ಆಸಕ್ತಿ ವಹಿಸಿವೆ. ಹೂಡಿಕೆದಾರರಿಗೂ ಹೊಸ ಅನುಭವ ನೀಡುತ್ತಿರುವ ಇಂಥ ಫಂಡ್‌ಗಳಿಗೆ ಕಂಪನಿಗಳ ನೀತಿ, ನಿಯಮ ಮತ್ತು ನಡೆದುಕೊಳ್ಳುತ್ತಿರುವ ರೀತಿಯೇ ಬಹುಮುಖ್ಯ ಆಧಾರವಾಗುತ್ತದೆ.

ಪರಿಸರ, ಸಾಮಾಜಿಕ ಮತ್ತು ಆಡಳಿತ (Environment, Social and Governance–ESG) ಮೂರು ವಿಭಾಗಗಳಲ್ಲಿ ಕಂಪನಿ ವಹಿಸಿರುವ ಕಾಳಜಿಯ ಆಧಾರದಲ್ಲಿ ಫಂಡ್‌ ಮೌಲ್ಯ ಬೆಳವಣಿಗೆ ಕಾಣುತ್ತದೆ. 2018ರಲ್ಲೇ ಎಸ್‌ಬಿಐ ಮ್ಯೂಚುವಲ್‌ ಫಂಡ್‌ ತನ್ನ ಈಕ್ವಿಟಿ ಫಂಡ್‌ಗಳನ್ನು 'ಇಎಸ್‌ಜಿ ಫಂಡ್‌' ಆಗಿ ಮರುವರ್ಗಿಕರಿಸಿತು. ಕ್ವಾಂಟಮ್‌ ಮ್ಯೂಚುವಲ್ ಫಂಡ್‌ 2019ರ ಜುಲೈನಲ್ಲಿ ಇಎಸ್‌ಜಿ ಫಂಡ್‌ ಪ್ರಾರಂಭಿಸಿತು. ಈಗ ಆಕ್ಸಿಸ್‌ ಫಂಡ್‌ ಸಹ ಅಂಥದ್ದೇ ಪ್ರಯತ್ನ ಮಾಡಿದ್ದು, ನ್ಯೂ ಫಂಡ್‌ ಆಫರ್‌ ಅರ್ಜಿ ಸಲ್ಲಿಸಲು ಫೆ.5 ಕೊನೆಯ ದಿನವಾಗಿದೆ. 

ಆಕ್ಸಿಸ್‌ ಇಎಸ್‌ಜಿ ಫಂಡ್‌ ಶೇ 30ರಷ್ಟು ಸಂಗ್ರಹವನ್ನು ವಿದೇಶಿ ಷೇರುಗಳಲ್ಲಿ ಹೂಡಿಕೆ ಮಾಡಲಿದೆ. ಇದರಿಂದಾಗಿ ವಿದೇಶಿ ಕಂಪನಿಗಳ ಬೆಳವಣಿಗೆಯ ಲಾಭವನ್ನು ಭಾರತದ ಹೂಡಿಕೆದಾರರೂ ಪಡೆಯಲು ಸಾಧ್ಯವಾಗುತ್ತದೆ. ಫೆ.5ರ ಬಳಿಕವೂ ಈ ಫಂಡ್‌ನಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. 

ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲ ಬಳಕೆ, ಉತ್ಪನ್ನದ ಸುರಕ್ಷತೆ ಹಾಗೂ ಉದ್ಯಮದಲ್ಲಿ ಅನುಸರಿಸುತ್ತಿರುವ ನೀತಿ ಮತ್ತು ಪಾರದರ್ಶಕತೆ ಅಂಶಗಳನ್ನು ಜಿಎಸ್‌ಜಿ ಒಳಗೊಂಡಿರುತ್ತದೆ.  

ಕಂಪನಿಯು ಗಳಿಸುತ್ತಿರುವ ಲಾಭ, ನಡೆಸುತ್ತಿರುವ ವಹಿವಾಟು ಹಾಗೂ ಹೂಡಿಕೆಯನ್ನಷ್ಟೇ ಅವಲಂಬಿಸದೆ, ಕಂಪನಿಯ ಪರಿಸರ ಕಾಳಜಿಯನ್ನೂ ಪರಿಗಣಿಸಲಾಗುತ್ತದೆ. ಕಂಪನಿ ತಯಾರಿಕೆಯಿಂದ ಹೊರಬರುವ ತ್ಯಾಜ್ಯವನ್ನು ನಿರ್ವಹಿಸುತ್ತಿರುವ ರೀತಿ, ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ, ತಾಪಮಾನ ಹೆಚ್ಚಳದಂತಹ ಸಮಸ್ಯೆ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳು, ಪುನರ್ಬಳಕೆ,...ಇನ್ನೂ ಹಲವು ಅಂಶಗಳನ್ನು 'ಪರಿಸರ' ವಿಭಾಗದಲ್ಲಿ ಪರಿಗಣಿಸಲಾಗುತ್ತದೆ. 

ವಹಿವಾಟು, ಉದ್ಯಮದಲ್ಲಿ ಕಂಪನಿ ಸೃಷ್ಟಿಸಿಕೊಂಡಿರುವ ಸಂಬಂಧಗಳು. ಲಾಭಾಂಶದಲ್ಲಿ ಸ್ವಲ್ಪ ಪಾಲನ್ನು ಸ್ಥಳೀಯ ಸಮುದಾಯಕ್ಕೆ ಹಂಚಲಾಗುತ್ತಿದೆಯೇ ಅಥವಾ ಸಂಸ್ಥೆಯ ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸ್ವಯಂ ಸೇವೆಗಳಲ್ಲಿ ತೊಡಗುವಂತೆ ಮಾಡುತ್ತಿದೆಯೇ? ಕಾರ್ಮಿಕರು, ನೌಕರರ ಆರೋಗ್ಯ ಮತ್ತು ಸುರಕ್ಷತೆಯ ಕಡೆಗೆ ಗಮನಹರಿಸಿದೆಯೇ? ಷೇರುದಾರರನ್ನು ಗಣನೆಗೆ ತೆಗೆದುಕೊಂಡು ನಿರ್ಣಯಗಳನ್ನು ಕೈಗೊಳ್ಳತ್ತದೆಯೇ ಎಂಬಂತಹ ಅಂಶಗಳು ಸಂಸ್ಥೆಯ 'ಸಾಮಾಜಿಕ' ನಿಲುವನ್ನು ಹೇಳುತ್ತವೆ. 

ಕಂಪನಿಯ ವ್ಯವಹಾರ, ಲೆಕ್ಕಾಚಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು, ಹೂಡಿಕೆದಾರರಿಗೆ ಅದರ ಬಗ್ಗೆ ಮಾಹಿತಿ ಪಡೆಯುವ ಅವಕಾಶ ನೀಡುತ್ತಿದೆ? ಪ್ರಮುಖ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳಲು ಷೇರುದಾರರು ಮತ ಹಾಕುವ ಅವಕಾಶ ನೀಡಿದೆಯೇ? ನಿಯಮಬಾಹಿರ ಕಾರ್ಯವಿಧಾನಗಳಿಂದ ದೂರವಿದೆಯೇ? ಸರ್ಕಾರ ಮತ್ತು ಸಾರ್ವಜನಿಕ ನಿಯಮಗಳನ್ನು ಅನುಸರಿಸುತ್ತಿರುವ ಬಗ್ಗೆ ಖಾತ್ರಿ ಇರುವುದನ್ನು ಉತ್ತಮ 'ಆಡಳಿತ‘ದ ಅಂಶಗಳು ಒಳಗೊಂಡಿರುತ್ತವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು