ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂಎಸ್‌ಎಂಇ: ತಗ್ಗಿದ ಸಾಲ ನೀಡಿಕೆ

ಭಾರತೀಯ ರಿಸರ್ವ್‌ ಬ್ಯಾಂಕ್ ಮಾಹಿತಿ * ಇಳಿದ ಎನ್‌ಪಿಎ ಮೊತ್ತ
Published 6 ಆಗಸ್ಟ್ 2023, 16:37 IST
Last Updated 6 ಆಗಸ್ಟ್ 2023, 16:37 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ದಿಮೆ ವಲಯಕ್ಕೆ ಬ್ಯಾಂಕ್‌ಗಳು ನೀಡುವ ಸಾಲದ ಬೆಳವಣಿಗೆ ಪ್ರಮಾಣ ಕುಸಿತ ಕಂಡಿದೆ.

ದೇಶದಲ್ಲಿ ಅತಿಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಹೆಗ್ಗಳಿಕೆ ಎಂಎಸ್‌ಎಂಇ ವಲಯದ್ದು. ಬ್ಯಾಂಕ್‌ಗಳು ಹೆಚ್ಚಿನ ಸವಾಲನ್ನು ತಮ್ಮ ಮೇಲೆ ಎಳೆದುಕೊಳ್ಳಲು ಸಿದ್ಧವಿಲ್ಲದಿರುವ ಕಾರಣ, ಸಾಲ ನೀಡಲು ಮುಂದಾಗುತ್ತಿಲ್ಲ ಎಂದು ಎಂಎಸ್‌ಎಂಇ ವಲಯದ ಪ್ರಮುಖರು ಹೇಳಿದ್ದಾರೆ.

‘ಎಂಎಸ್‌ಎಂಇ ವಲಯದ ಉದ್ಯಮಗಳು ಸಾಲ ಪಡೆಯುವುದಕ್ಕೆ ಇರುವ ಅಡ್ಡಿಗಳು ಒಂದೆರಡಲ್ಲ. ಬ್ಯಾಂಕಿಂಗ್ ವ್ಯವಸ್ಥೆಯ ಧೋರಣೆಯೇ ನಿಜವಾದ ಅಡ್ಡಿ. ಬ್ಯಾಂಕಿಂಗ್ ವ್ಯವಸ್ಥೆಯು ಎಂಎಸ್‌ಎಂಇ ವಲಯಕ್ಕೆ ನೀಡುವ ಯಾವುದೇ ಸಾಲವನ್ನು ಅನುತ್ಪಾದಕ ಎಂಬಂತೆ ಕಾಣುತ್ತಿದೆ’ ಎಂದು ಭಾರತೀಯ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅನಿಲ್ ಭಾರದ್ವಾಜ್ ದೂರಿದ್ದಾರೆ.

ಎಂಎಸ್‌ಎಂಇ ವಲಯಕ್ಕೆ ನೀಡಿರುವ ಸಾಲದಲ್ಲಿ ₹1.31 ಲಕ್ಷ ಕೋಟಿ ಅನುತ್ಪಾದಕ ಆಗಿದೆ. ಇದು ಮಾರ್ಚ್‌ ಅಂತ್ಯದವರೆಗಿನ ಮಾಹಿತಿ. ಹಿಂದಿನ ವರ್ಷದ ಮಾರ್ಚ್‌ ಅಂತ್ಯದಲ್ಲಿ ಅನುತ್ಪಾದಕ ಸಾಲದ ಮೊತ್ತವು ₹1.54 ಲಕ್ಷ ಕೋಟಿ ಆಗಿತ್ತು.

ಅಡಮಾನ ಇರಿಸುವಲ್ಲಿ ಸಮಸ್ಯೆ, ಸಾಲ ಪಡೆದು ಅದನ್ನು ತೀರಿಸಿದ ದೀರ್ಘಾವಧಿ ದಾಖಲೆಗಳು ಇಲ್ಲದಿರುವುದು ಹಾಗೂ ಹೆಚ್ಚಿನ ಬಡ್ಡಿ ದರವು ದೇಶದ ಎಂಎಸ್‌ಎಂಇ ವಲಯಕ್ಕೆ ಸಾಲ ಪಡೆಯುವಲ್ಲಿ ಇರುವ ಸಮಸ್ಯೆಗಳು ಎಂದು ಬಿಜ್‌2ಕ್ರೆಡಿಟ್‌ ಸಿಇಒ ರೋಹಿತ್ ಅರೋರ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಈ ವರ್ಷದ ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ, ಎಂಎಸ್‌ಎಂಇ ವಲಯಕ್ಕೆ ಸಾಲ ಖಾತರಿ ಯೋಜನೆಯ ಅಡಿಯಲ್ಲಿ ₹5 ಕೋಟಿವರೆಗಿನ ಸಾಲಕ್ಕೆ ಖಾತರಿ ನೀಡುತ್ತಿದೆ. ಇದು ಈ ಮೊದಲು ₹2 ಕೋಟಿ ಮಾತ್ರ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT