ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಸಾಲಗಳು ಅಗ್ಗ

ಹೆಚ್ಚಿದ ನಗದು ಲಭ್ಯತೆ, ರೆಪೊ ಕಡಿತದ ಪ್ರಯೋಜನ
Last Updated 6 ಜುಲೈ 2020, 15:20 IST
ಅಕ್ಷರ ಗಾತ್ರ

ಬೆಂಗಳೂರು: ಹಣಕಾಸು ವ್ಯವಸ್ಥೆಯಲ್ಲಿನ ಹೆಚ್ಚುವರಿ ನಗದು ಲಭ್ಯತೆ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ನ ರೆಪೊ ದರ ಕಡಿತದ ಫಲವಾಗಿ ಬ್ಯಾಂಕ್‌ ಸಾಲಗಳು ಅಗ್ಗವಾಗಿ ಪರಿಣಮಿಸಿವೆ.

ಬ್ಯಾಂಕ್‌ ಸಾಲಗಳ ಮೇಲಿನ ಸರಾಸರಿ ಬಡ್ಡಿ ದರವು ಇದೇ ಮೊದಲ ಬಾರಿಗೆ ಏಪ್ರಿಲ್‌ನಲ್ಲಿ ಶೇ 10ಕ್ಕಿಂತ ಕಡಿಮೆಯಾಗಿ ಶೇ 9.89ಕ್ಕೆ ಇಳಿದಿರುವುದು ಆರ್‌ಬಿಐ ಪ್ರಕಟಿಸಿದ ದತ್ತಾಂಶದಿಂದ ತಿಳಿದು ಬರುತ್ತದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಹಾಲಿ ಸಾಲಗಳ ಮೇಲಿನ ಬಡ್ಡಿ ದರವು ಶೇ 9.33ಕ್ಕೆ ಮತ್ತು ವಿದೇಶಿ ಬ್ಯಾಂಕ್‌ಗಳ ಬಡ್ಡಿ ದರ ಶೇ 9.35ಕ್ಕೆ ಇಳಿದಿದೆ.

ತೀವ್ರ ಸ್ಪರ್ಧೆ ಎದುರಿಸುತ್ತಿರುವ ಮತ್ತು ಠೇವಣಿಗಳಿಗೆ ಹೆಚ್ಚು ಬಡ್ಡಿ ಪಾವತಿಸುವ ಖಾಸಗಿ ಬ್ಯಾಂಕ್‌ಗಳು ಈಗಿರುವ ಸಾಲಗಳಿಗೆ ಶೇ 10.9ರಷ್ಟು ಬಡ್ಡಿ ವಿಧಿಸುತ್ತಿವೆ.

‘ಮಂದಗತಿಯ ಆರ್ಥಿಕತೆಯಲ್ಲಿ ಬ್ಯಾಂಕಿಂಗ್‌ ವಹಿವಾಟು ಲಾಭದಾಯಕವಾಗಿರಲು ಖಾಸಗಿ ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿ ದರಕ್ಕೆ ಸಾಲ ನೀಡುತ್ತಿವೆ’ ಎಂದು ಕೆಎಸ್‌ ಲೀಗಲ್‌ನ ಮ್ಯಾನೇಜಿಂಗ್‌ ಪಾರ್ಟನ್ನರ್‌ ಸೋನಂ ಚಂದ್ವಾನಿ ಹೇಳುತ್ತಾರೆ.

ಮಾರ್ಚ್‌ನಲ್ಲಿ ಎಲ್ಲ ಬಗೆಯ ಸಾಲಗಳ ಮೇಲಿನ ಸರಾಸರಿ ಬಡ್ಡಿ ದರವು ಶೇ 10ರಷ್ಟಿತ್ತು. ಆರ್‌ಬಿಐ, ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಕಡಿಮೆ ಮಾಡಲು ಆರಂಭಿಸಿದ ನಂತರ ಸಾಲಗಳ ಮೇಲಿನ ಬಡ್ಡಿ ದರವು ಶೇ 0.37ರಷ್ಟು ಕಡಿಮೆಯಾಗಿರುವುದು ದತ್ತಾಂಶಗಳ ವಿಶ್ಲೇಷಣೆಯಿಂದ ತಿಳಿದು ಬರುತ್ತದೆ.

ಅಗ್ಗದ ರೆಪೊ ದರದ ಕಾರಣಕ್ಕೆ ಹೊಸ ಸಾಲಗಳ ಮೇಲಿನ ಬಡ್ಡಿ ದರವು ಇನ್ನಷ್ಟು ಅಗ್ಗವಾಗಿ ಪರಿಣಮಿಸಿದೆ. ಆರ್‌ಬಿಐ, ಬ್ಯಾಂಕ್‌ಗಳಿಗೆ ನೀಡುವ ಅಲ್ಪಾವಧಿ ಸಾಲಗಳ ಮೇಲಿನ ಬಡ್ಡಿ ದರವಾದ (ರೆಪೊ ) ದರವನ್ನು ಶೇ 2.50ರಷ್ಟು ತಗ್ಗಿಸಿದೆ. 2019ರ ಜನವರಿಯಲ್ಲಿ ಶೇ 6.5ರಷ್ಟಿದ್ದ ರೆಪೊ ದರ ಈಗ ಶೇ 4ಕ್ಕೆ ಇಳಿದಿದೆ. ಹೊಸ ಸಾಲಗಳ ಮೇಲಿನ ಸರಾಸರಿ ಬಡ್ಡಿ ದರವು ಏಪ್ರಿಲ್‌ನಲ್ಲಿ ಶೇ 8.3ಕ್ಕೆ ಇಳಿದಿತ್ತು.

‘ಸದ್ಯದ ಪರಿಸ್ಥಿತಿಯಲ್ಲಿ ವಸೂಲಾಗದ ಸಾಲದ ಪ್ರಮಾಣ ಹೆಚ್ಚಳಗೊಳ್ಳುವ ಕಾರಣಕ್ಕೆ ಅಗ್ಗದ ಬಡ್ಡಿ ದರಕ್ಕೆ ಸಾಲ ನೀಡಲು ಬ್ಯಾಂಕ್‌ಗಳು ತುಂಬ ಎಚ್ಚರಿಕೆ ವಹಿಸಿವೆ. ಹೀಗಾಗಿ ಬಡ್ಡಿ ದರಗಳು ಅಗ್ಗವಾಗಿದ್ದರೂ ಎಲ್ಲರಿಗೂ ಅದರ ಪ್ರಯೋಜನ ದೊರೆಯುವ ಸಾಧ್ಯತೆ ಇಲ್ಲ. ಕೋವಿಡ್‌ ಸೃಷ್ಟಿಸಿರುವ ವಹಿವಾಟಿನ ಅನಿಶ್ಚಿತತೆ ಕಾರಣಕ್ಕೆ ಬ್ಯಾಂಕ್‌ ಸಾಲಕ್ಕೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿಲ್ಲ’ ಎಂದು ಕೇರ್‌ ರೇಟಿಂಗ್ಸ್‌ನ ಹಿರಿಯ ಆರ್ಥಿಕತಜ್ಞೆ ಕವಿತಾ ಚಾಕೊ ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT