ಮಲ್ಯರಿಂದ ಗರಿಷ್ಠ ಬಾಕಿ ವಸೂಲಿಗೆ ಕ್ರಮ:ಎಸ್‌ಬಿಐ

7

ಮಲ್ಯರಿಂದ ಗರಿಷ್ಠ ಬಾಕಿ ವಸೂಲಿಗೆ ಕ್ರಮ:ಎಸ್‌ಬಿಐ

Published:
Updated:

ನವದೆಹಲಿ: ಬ್ರಿಟನ್‌ಗೆ ಪಲಾಯನಗೈದಿರುವ ಉದ್ದೇಶಪೂರ್ವಕ ಸುಸ್ತಿದಾರ ವಿಜಯ್‌ ಮಲ್ಯ ಅವರಿಗೆ ಸೇರಿದ ಆಸ್ತಿಪಾಸ್ತಿಗಳಿಂದ ಗರಿಷ್ಠ ಪ್ರಮಾಣದ ಸಾಲ ಬಾಕಿ ವಸೂಲಿಗೆ ದೇಶಿ ಬ್ಯಾಂಕ್‌ಗಳು ವಿವಿಧ ಸಂಸ್ಥೆಗಳ ಜತೆ ಸಮನ್ವಯತೆಯಿಂದ ಕೆಲಸ ಮಾಡುತ್ತಿವೆ.

‘ಮಲ್ಯ ಅವರಿಗೆ ಸೇರಿದ ಆಸ್ತಿಗಳ ಪರಿಶೀಲನೆ ನಡೆಸಿ ವಶಪಡಿಸಿಕೊಳ್ಳಲು ಬ್ರಿಟನ್ನಿನ ಕೋರ್ಟ್‌ ಅನುಮತಿ ನೀಡಿರುವುದರಿಂದ ಬಾಕಿ ವಸೂಲಿ ಸಾಧ್ಯವಾಗಲಿದೆ’ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ವ್ಯವಸ್ಥಾಪಕ ನಿರ್ದೇಶಕ ಅರಿಜಿತ್‌ ಬಸು ಹೇಳಿದ್ದಾರೆ.

‘ಬಾಕಿ ವಸೂಲಿಗಾಗಿ ಕೇಂದ್ರ ಸರ್ಕಾರವೂ ಒಳಗೊಂಡಂತೆ ವಿವಿಧ ಸಂಸ್ಥೆಗಳ ಜತೆ ಬ್ಯಾಂಕ್‌ಗಳು ಸಮನ್ವಯತೆಯಿಂದ ಕೆಲಸ ಮಾಡುತ್ತಿರುವುದರಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಬ್ರಿಟನ್ನಿನ ಕೋರ್ಟ್‌ನ ಇತ್ತೀಚಿನ ಆದೇಶದಿಂದ ಮಲ್ಯ ಅವರಿಗೆ ಸೇರಿದ ಆಸ್ತಿ ವಶಪಡಿಸಿಕೊಳ್ಳಲು ಸಾಧ್ಯವಾಗಲಿದೆ. ನಮ್ಮ ಪ್ರಯತ್ನಗಳ ಫಲವಾಗಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗಲಿದೆ. ಸಾಲ ಸಂಪೂರ್ಣ ಮೊತ್ತ ಅಲ್ಲದಿದ್ದರೂ, ಗಮನಾರ್ಹ ಪ್ರಮಾಣದ ಬಾಕಿ ವಸೂಲಿ ಮಾಡಬಹುದಾಗಿದೆ.

‘ಬಾಕಿ ವಸೂಲಿಗೆ ಇನ್ನೂ ಕಾಲಮಿತಿ ನಿಗದಿಪಡಿಸಿಲ್ಲ. ಬ್ರಿಟನ್‌ ಹೈಕೋರ್ಟ್‌ನ ಜಾರಿ ಆದೇಶ ಕಾರ್ಯಗತಗೊಳಿಸುವ ಸಂಬಂಧ ವಿವಿಧ ಸಂಸ್ಥೆಗಳು ಮತ್ತು ವಕೀಲರ ಜತೆ ಬ್ಯಾಂಕ್‌ ಒಕ್ಕೂಟವು ಸಂಪರ್ಕದಲ್ಲಿ ಇದೆ. ಭಾರತದಲ್ಲಿನ ಆಸ್ತಿಗಳ ಹರಾಜಿನಿಂದ ಈಗಾಗಲೇ ₹ 963 ಕೋಟಿ ಮರಳಿ ಪಡೆಯಲಾಗಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬ್ರಿಟನ್‌ನಲ್ಲಿ ಮಲ್ಯ ನೆಲೆಸಿರುವ ಮನೆಯಲ್ಲಿ ಶೋಧ ನಡೆಸಿ ಅವರಿಗೆ ಸೇರಿದ ಸೊತ್ತುಗಳನ್ನು ನಿಯಂತ್ರಣಕ್ಕೆ ಪಡೆಯಲು ಹೈಕೋರ್ಟ್‌ನ ಜಾರಿ ಅಧಿಕಾರಿಗೆ ಅನುಮತಿ ನೀಡಲಾಗಿದೆ. ಅಗತ್ಯ ಬಿದ್ದರೆ ಭದ್ರತಾ ಪಡೆಯ ನೆರವು ಪಡೆಯಲೂ ಅವಕಾಶ ನೀಡಲಾಗಿದೆ.

ಮಲ್ಯ ಮನವಿ: ಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಲ್ಯ ಮನವಿ ಮಾಡಿಕೊಂಡಿದ್ದಾರೆ. ಅದಿನ್ನೂ ಇತ್ಯರ್ಥವಾಗಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !