ವಿಐಎಸ್ಎಲ್ ಮಾರಾಟಕ್ಕೆ ಚಾಲನೆ

ಮಂಗಳವಾರ, ಜೂಲೈ 23, 2019
25 °C
ಖಾಸಗಿ ಕಂಪನಿಗಳಿಗೆ ಆಹ್ವಾನ ನೀಡಿದ ಉಕ್ಕು ಪ್ರಾಧಿಕಾರ

ವಿಐಎಸ್ಎಲ್ ಮಾರಾಟಕ್ಕೆ ಚಾಲನೆ

Published:
Updated:
Prajavani

ಭದ್ರಾವತಿ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (ವಿಐಎಸ್ಎಲ್) ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲು ಭಾರತೀಯ ಉಕ್ಕು ಪ್ರಾಧಿಕಾರವು ಗುರುವಾರ ಅಧಿಕೃತವಾಗಿ ಖಾಸಗಿ ಕಂಪನಿಗಳಿಗೆ ಆಹ್ವಾನ ನೀಡಿ, ಪ್ರಕಟಣೆ ಹೊರಡಿಸಿದೆ.

ಉಕ್ಕು ಪ್ರಾಧಿಕಾರ ವ್ಯಾಪ್ತಿಯ ದುರ್ಗಾಪುರ, ಸೇಲಂ ಹಾಗೂ ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗಳನ್ನು ಸಂಪೂರ್ಣವಾಗಿ ಖಾಸಗಿ ಕಂಪನಿ ಖರೀದಿಸುವ ಸಂಬಂಧ ಬಿಡ್‌ ಕರೆಯಲಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 1 ಕಡೆಯ ದಿನವಾಗಿದೆ.

ವಿಐಎಸ್ಎಲ್ ಕಾರ್ಖಾನೆ ಮಾರಾಟಕ್ಕೆ 2007ರಿಂದ ಪ್ರಕ್ರಿಯೆಯ ಅರಂಭವಾಗಿತ್ತು. 12 ವರ್ಷಗಳ ನಂತರ ಇದೀಗ ಅಧಿಕೃತವಾಗಿ ಮಾರಾಟಕ್ಕೆ ಚಾಲನೆ ದೊರೆತಿದೆ.

ಸಂಸದ ಬಿ.ವೈ. ರಾಘವೇಂದ್ರ ಅವರು ಮಂಗಳವಾರ ಸಂಸತ್ತಿನಲ್ಲಿ ಶೂನ್ಯವೇಳೆಯಲ್ಲಿ ಕಾರ್ಖಾನೆ ಹಾಗು ಕಾರ್ಮಿಕರ ರಕ್ಷಣೆಗಾಗಿ ಮಾಡಿದ ಮನವಿಯ 48 ಗಂಟೆಯೊಳಗೇ ಮಾರಾಟಕ್ಕೆ ಪ್ರಕಟಣೆ ಹೊರಬಿದ್ದಿದೆ.

‘ರಾಜ್ಯ ಸರ್ಕಾರ 1989 ರಲ್ಲಿ ವಿಐಎಸ್ಎಲ್ ಕಾರ್ಖಾನೆಯನ್ನು ಕೇಂದ್ರದ ಉಕ್ಕು ಪ್ರಾಧಿಕಾರಕ್ಕೆ ಕೇವಲ ₹1ಕ್ಕೆ ಹಸ್ತಾಂತರಿಸುವ ಮೂಲಕ ಸುಮಾರು ₹75,000 ಕೋಟಿ ಬಂಡವಾಳ ಹೂಡಿಕೆ ಭರವಸೆ ಪಡೆದಿತ್ತು. ಆದರೆ ಇಲ್ಲಿ ತನಕ ಸಿಕ್ಕಿರುವುದು ಕೇವಲ ₹125 ಕೋಟಿ ಮೊತ್ತ’ ಎಂಬ ಮಾತನ್ನು ಹೇಳಿದ ಮೊದಲ ಸಂಸದ ರಾಘವೇಂದ್ರ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಷಯ ಗುರುವಾರ ಮಧ್ಯಾಹ್ನದಿಂದ ಸ್ಥಗಿತವಾಗಿದೆ.

ಸಂಸತ್ತಿನಲ್ಲಿ ಸವಿಸ್ತಾರವಾಗಿ ಅಂದು ಮಾತನಾಡಿದ್ದ ಸಂಸದರು, ‘ಕಳೆದ 30 ವರ್ಷದಿಂದ ಯಾವುದೇ ಬಂಡವಾಳ ಹೂಡದೆ ಲಾಭ ನಿರೀಕ್ಷೆ ಮಾಡುವುದು ಸರಿಯಲ್ಲ. ಅಲ್ಲಿನ ಕಾರ್ಮಿಕರು ಹಾಗೂ ಗುತ್ತಿಗೆ ಕಾರ್ಮಿಕರ ಹಿತ ಕಾಪಾಡುವ ಸಲುವಾಗಿ ಬ್ಲಾಸ್ಟ್ ಫರ್ನೇಸ್ ಉತ್ಪಾದನೆ ಆರಂಭಿಸಿ’ಎಂದು ಆಗ್ರಹಿಸಿದ್ದರು.

ರಾಷ್ಟ್ರದ ಪ್ರಥಮ ಸಾರ್ವಜನಿಕ ಉದ್ದಿಮೆ ಎಂಬ ಕೀರ್ತಿಗೆ ಪಾತ್ರವಾಗಿ ನೂರನೇ ವರ್ಷದ ಸಂಭ್ರಮಾಚರಣೆ ನಡೆಸುವ ಹೊಸ್ತಿಲಲ್ಲಿ ಖಾಸಗಿ ಕಂಪನಿಗಳಿಗೆ ಆಹ್ವಾನ ನೀಡಿರುವುದು ಅಸಂತೋಷಕ್ಕೆ ಕಾರಣವಾಗಿದೆ.

ಸಾರ್ವಜನಿಕ ಉದ್ದಿಮೆ ಉಳಿಯಬೇಕು: ಟೆಂಡರ್ ಪ್ರಕ್ರಿಯೆಯನ್ನು ಈ ಕೂಡಲೇ ಹಿಂದಕ್ಕೆ ಪಡೆದು ಸಾರ್ವಜನಿಕ ಉದ್ದಿಮೆಯಾಗಿ ಉಳಿಸಬೇಕು. ಅದಕ್ಕೆ ಅಗತ್ಯ ಹೋರಾಟ ಮಾಡಲು ಸಿದ್ಧವಿದ್ದೇವೆ -ಬಿ.ಕೆ.ಸಂಗಮೇಶ್ವರ, ಭದ್ರಾವತಿ ಶಾಸಕ.

ಕಾರ್ಖಾನೆ ಮತ್ತು ಕಾರ್ಮಿಕರ ಹಿತ ಕಾಯುತ್ತೇವೆ: ಷೇರು ವಿಕ್ರಯದಿಂದ ಹೊರತರುವ ಪ್ರಯತ್ನವನ್ನು 10 ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ಕಾರ್ಖಾನೆ ಮತ್ತು ಕಾರ್ಮಿಕರ ಹಿತ ಕಾಯವ ಕೆಲಸ ಮಾಡುತ್ತೇವೆ - ಸಂಸದ ಬಿ.ವೈ.ರಾಘವೇಂದ್ರ

 

 

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !