ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಅಕ್ಕಿ ಮಾರಾಟ ಆರಂಭ: ವಾರದೊಳಗೆ ಜಿಲ್ಲೆಗಳಿಗೆ ಸೇವೆ ವಿಸ್ತರಣೆ

ಸಂಚಾರಿ ವಾಹನ ನಿಯೋಜನೆ
Published 6 ಫೆಬ್ರುವರಿ 2024, 23:30 IST
Last Updated 6 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳದಿಂದ (ನಾಫೆಡ್) ಸಂಚಾರಿ ವಾಹನಗಳ ಮೂಲಕ ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಮಾರಾಟಕ್ಕೆ ನಗರದಲ್ಲಿ ಮಂಗಳವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ. 

ಬೆಂಗಳೂರಿನ ವಿವಿಧೆಡೆ ಆರು ಸಂಚಾರಿ ವಾಹನಗಳ ಮೂಲಕ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ಕೆ.ಜಿಗೆ ₹29 ದರ ನಿಗದಿಪಡಿಸಲಾಗಿದ್ದು, 5 ಕೆ.ಜಿ ಮತ್ತು 10 ಕೆ.ಜಿ ಪ್ಯಾಕೆಟ್‌ಗಳಲ್ಲಿ ದೊರೆಯಲಿದೆ. ಇನ್ನೊಂದು ವಾರದೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಸೇವೆ ವಿಸ್ತರಣೆಯಾಗಲಿದೆ.  

‘ಮಾರಾಟ ವಾಹನಗಳಲ್ಲಿ ಅಕ್ಕಿಯ ಜೊತೆಗೆ ‘ಭಾರತ್‌ ಬ್ರ್ಯಾಂಡ್‌’ ಗೋಧಿ ಹಿಟ್ಟು ಮತ್ತು ಕಡಲೆ ಬೇಳೆ ಕೂಡ ದೊರೆಯಲಿದೆ. ಬೆಂಗಳೂರಿನಲ್ಲಿ ವಲಯವಾರು ಮಟ್ಟದಲ್ಲಿ ವಾಹನಗಳನ್ನು ನಿಯೋಜಿಸಲಾಗಿದೆ. ಪ್ರತಿ ದಿನವೂ ಇವು ಒಂದೊಂದು ಸ್ಥಳಕ್ಕೆ ತೆರಳಲಿವೆ’ ಎಂದು ನಾಫೆಡ್‌ನ ರಾಜ್ಯ ಮುಖ್ಯಸ್ಥೆ ಜ್ಯೋತಿ ಪಾಟೀಲ್ ‘ಪ್ರಜಾವಾಣಿ’ಗೆ ವಿವರಿಸಿದರು.

‘ಮೌಂಟ್‌ ಕಾರ್ಮೆಲ್‌ ಕಾಲೇಜಿನ ಬಳಿ ಇರುವ ಮಹಾಮಂಡಳದ ಕಚೇರಿಯಲ್ಲಿಯೂ ಒಂದು ಕೌಂಟರ್‌ ತೆರೆಯಲಾಗಿದೆ. ಗ್ರಾಹಕರು ಇಲ್ಲಿಗೆ ನೇರವಾಗಿ ಬಂದು ಅಕ್ಕಿ ಖರೀದಿಸಬಹುದಾಗಿದೆ’ ಎಂದು ತಿಳಿಸಿದರು. 

‘ಜಿಲ್ಲೆಗಳಲ್ಲಿ ಸ್ಥಳೀಯ ಚಿಲ್ಲರೆ ಮಾರಾಟಗಾರರ ಮೂಲಕವೂ ಭಾರತ್‌ ಬ್ರ್ಯಾಂಡ್‌ ಅಕ್ಕಿ ಮಾರಾಟಕ್ಕೆ ನಿರ್ಧರಿಸಲಾಗಿದೆ’ ಎಂದರು.

ಸದ್ಯ ಭಾರತೀಯ ಆಹಾರ ನಿಗಮದ ಮೂಲಕ ಅಕ್ಕಿಯನ್ನು ಎತ್ತುವಳಿ ಮಾಡಿದ ಬಳಿಕ ಸಂಸ್ಕರಿಸಲಾಗುತ್ತದೆ. ಬಳಿಕ ಪ್ಯಾಕೆಟ್‌ಗಳನ್ನು ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮೊದಲ ಹಂತದಲ್ಲಿ ಕೇಂದ್ರ ಸರ್ಕಾರವು ನಾಫೆಡ್‌ಗೆ 1.25 ಲಕ್ಷ ಟನ್ ಅಕ್ಕಿಯನ್ನು ಹಂಚಿಕೆ ಮಾಡಿದೆ. ಬೇಡಿಕೆಗೆ ಅನುಗುಣವಾಗಿ ಹಂಚಿಕೆ ಪ್ರಮಾಣವನ್ನು ಹೆಚ್ಚಿಸಲಿದೆ ಎಂದರು.

ರಾಜ್ಯದಲ್ಲಿ ಮಾರಾಟದ ವಿವರ 2,000 ಟನ್‌– ಕಡಲೆ ಬೇಳೆ  500 ಟನ್‌– ಗೋಧಿ ಹಿಟ್ಟು (2023ರ ಆಗಸ್ಟ್‌ನಿಂದ ಇಲ್ಲಿಯವರೆಗೆ) 

ಇ–ಕಾಮರ್ಸ್‌ನಲ್ಲೂ ಲಭ್ಯ ಚಿಲ್ಲರೆ ವ್ಯಾಪಾರ ವಲಯದ ಇ–ಕಾರ್ಮಸ್‌ ವೇದಿಕೆಗಳಲ್ಲೂ ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ದೊರೆಯಲಿದೆ. ಮೊದಲ ಹಂತದಲ್ಲಿ ರಿಲಯನ್ಸ್‌ ರಿಟೇಲ್‌ ಬ್ಲಿಂಕಿಟ್‌ ಹಾಗೂ ಬಿಗ್‌ಬಾಸ್ಕೆಟ್‌ ಜೊತೆಗೆ ನಾಫೆಡ್‌ ಒಪ್ಪಂದ ಮಾಡಿಕೊಂಡಿದೆ. ಇನ್ನೆರಡು ದಿನಗಳಲ್ಲಿ ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ಇರುವ ರಿಲಯನ್ಸ್‌ ರಿಟೇಲ್ ಮಳಿಗೆಗಳಲ್ಲಿ ದೊರೆಯಲಿದೆ.  ‘ಅಲ್ಲದೇ ಫ್ಲಿಪ್‌ಕಾರ್ಟ್‌ ಮತ್ತು ಸ್ಟಾರ್ ಬಜಾರ್‌ನಲ್ಲಿಯೂ ಅಕ್ಕಿ ಮಾರಾಟಕ್ಕೆ ನಿರ್ಧರಿಸಲಾಗಿದೆ. ಈ ಸಂಬಂಧ ಒಪ್ಪಂದ ಕುರಿತು ಚರ್ಚೆ ನಡೆಯುತ್ತಿದೆ’ ಎಂದು ಜ್ಯೋತಿ ಪಾಟೀಲ್‌ ತಿಳಿಸಿದರು.

ಅಕ್ಕಿ ಖರೀದಿಸಿದ ಸಚಿವ ಗೋಯಲ್: ‘ನಾನು ಭಾರತ್‌ ಬ್ರ್ಯಾಂಡ್‌ನ ಗೋಧಿ ಹಿಟ್ಟು ಕಡಲೆ ಬೇಳೆ ಬಳಸುತ್ತಿದ್ದೇನೆ. ಈ ಎರಡೂ ಪದಾರ್ಥಗಳು ರುಚಿಕರವಾಗಿವೆ. ಈಗ ಅಕ್ಕಿಯನ್ನೂ ಖರೀದಿಸಿದ್ದೇನೆ. ಅದರ ಗುಣಮಟ್ಟವೂ ಉತ್ತಮವಾಗಿದೆ’ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಪೀಯೂಷ್‌ ಗೋಯಲ್ ಹೇಳಿದರು. ಅಕ್ಕಿ ಮಾರಾಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ‘ಈ ಅಕ್ಕಿ ಮಾರಾಟದಿಮದ ದೇಶ ಮಧ್ಯಮ ವರ್ಗ ಮತ್ತು ಬಡಜನರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದರು.  ‘ಸರ್ಕಾರ ಕೈಗೊಂಡಿರುವ ಕ್ರಮಗಳಿಂದಾಗಿ ಟೊಮೆಟೊ ಹಾಗೂ ಈರುಳ್ಳಿ ದರ ಇಳಿಕೆಯಾಗಿದೆ. ಗೋಧಿ ಹಿಟ್ಟು ಮಾರಾಟದಿಂದಾಗಿ ಕಳೆದ ಆರು ತಿಂಗಳಿನಿಂದಲೂ ಗೋಧಿ ಹಣದುಬ್ಬರ ಕಡಿಮೆಯಾಗಿದೆ’ ಎಂಉ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT