ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದಲ್ಲಿ ಶಿಕ್ಷಣಕ್ಕಿಂತಲೂ 2 ಪಟ್ಟು ಮದುವೆಗೆ ಖರ್ಚು: ವರದಿ

ಸರಾಸರಿ ವಿವಾಹ ವೆಚ್ಚ ₹12.50 ಲಕ್ಷ: ಜೆಫರಿಸ್‌
Published 30 ಜೂನ್ 2024, 15:53 IST
Last Updated 30 ಜೂನ್ 2024, 15:53 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಪ್ರಾಥಮಿಕದಿಂದ ಪದವಿವರೆಗೆ ವಧು ಅಥವಾ ವರನ ಶಿಕ್ಷಣಕ್ಕೆ ಪೋಷಕರು ವ್ಯಯಿಸುವ ಖರ್ಚಿಗಿಂತಲೂ ವಿವಾಹದ ವೆಚ್ಚವು ಎರಡು ಪಟ್ಟು ಹೆಚ್ಚಿದೆ ಎಂದು ಜಾಗತಿಕ ಬ್ರೋಕರೇಜ್‌ ಸಂಸ್ಥೆ ಜೆಫರಿಸ್‌ ವರದಿ ತಿಳಿಸಿದೆ.

ದೇಶದಲ್ಲಿ ಮದುವೆಯೊಂದರ ಸರಾಸರಿ ವೆಚ್ಚ ₹12.50 ಲಕ್ಷ ಆಗಿದೆ. ವಿವಾಹ ಮಾರುಕಟ್ಟೆ ಮೌಲ್ಯವು ಅಂದಾಜು ₹10 ಲಕ್ಷ ಕೋಟಿಯಷ್ಟಿದೆ ಎಂದು ಹೇಳಿದೆ.

ವಾರ್ಷಿಕವಾಗಿ 80 ಲಕ್ಷದಿಂದ 1 ಕೋಟಿ ಮದುವೆಗಳು ನಡೆಯುತ್ತವೆ. ಚೀನಾ ಮತ್ತು ಅಮೆರಿಕದಲ್ಲಿ ನಡೆಯುವ ಮದುವೆಗಳಿಂತಲೂ ಹೆಚ್ಚಿದೆ. ಚೀನಾದಲ್ಲಿ 70 ಲಕ್ಷದಿಂದ 80 ಲಕ್ಷ ಹಾಗೂ ಅಮೆರಿಕದಲ್ಲಿ 20 ಲಕ್ಷದಿಂದ 25 ಲಕ್ಷ ವಿವಾಹ ಸಮಾರಂಭಗಳು ನಡೆಯುತ್ತವೆ ಎಂದು ವಿವರಿಸಿದೆ.  

ಭಾರತದಲ್ಲಿ ಉಪಭೋಗ ವರ್ಗದ ಪೈಕಿ ಆಹಾರ ಮತ್ತು ತರಕಾರಿ ಮಾರುಕಟ್ಟೆಯ ಮೌಲ್ಯವು ₹56.76 ಲಕ್ಷ ಕೋಟಿಯಿದ್ದು, ಮೊದಲ ಸ್ಥಾನದಲ್ಲಿದೆ. ಆ ನಂತರದ ಸ್ಥಾನದಲ್ಲಿ ವಿವಾಹ ಮಾರುಕಟ್ಟೆ ಇದೆ ಎಂದು ಹೇಳಿದೆ. 

ಭಾರತದಲ್ಲಿ ಮದುವೆ ಸಮಾರಂಭ ಮತ್ತು ಅದಕ್ಕೆ ಮಾಡುವ ವೆಚ್ಚದ ವ್ಯಾಪ್ತಿಯು ವಿಸ್ತಾರವಾದುದು. ಇದರಿಂದ ಚಿನ್ನಾಭರಣ, ಸಿದ್ಧಉಡುಪು ಉದ್ಯಮಕ್ಕೆ ಹೆಚ್ಚು ಅನುಕೂಲವಾಗುತ್ತಿದೆ. ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದ್ದರೂ, ವಿದೇಶಗಳಲ್ಲಿ ಭಾರತೀಯರ ವೈಭವೋಪೇತ ಮದುವೆಗಳು ನಡೆಯುತ್ತಿವೆ ಎಂದು ಹೇಳಿದೆ.‌

ಅಖಿಲ ಭಾರತ ವರ್ತಕರ ಒಕ್ಕೂಟದ (ಸಿಎಐಟಿ) ಮಾಹಿತಿ ಪ್ರಕಾರ ಅಮೆರಿಕಕ್ಕಿಂತಲೂ ಭಾರತದ ಮದುವೆ ಮಾರುಕಟ್ಟೆ ಮೌಲ್ಯವು ಎರಡು ಪಟ್ಟು ದೊಡ್ಡದಾಗಿದೆ ಎಂದು ತಿಳಿಸಿದೆ.

ಹಲವು ದಿನಗಳವರೆಗೆ ಮದುವೆ ಮಹೋತ್ಸವ ಆಯೋಜಿಸಲಾಗುತ್ತದೆ. ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಇದಕ್ಕಾಗಿ ಯಥೇಚ್ಛವಾಗಿ ಹಣ ಖರ್ಚು ಮಾಡಲಾಗುತ್ತಿದೆ. ಕುಟುಂಬದ ಆದಾಯಕ್ಕಿಂತಲೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT