ಗುರುವಾರ , ಅಕ್ಟೋಬರ್ 24, 2019
21 °C
ಬ್ಯಾಂಕಿಂಗ್‌ ವಲಯದ ಷೇರುಗಳ ಮಾರಾಟದ ಒತ್ತಡ

ಸೂಚ್ಯಂಕ 362 ಅಂಶ ಇಳಿಕೆ

Published:
Updated:

ಮುಂಬೈ: ವಾಹನ ಮಾರಾಟದಲ್ಲಿ ಇಳಿಕೆ, ಹಣಕಾಸು ವಲಯದ ಬಿಕ್ಕಟ್ಟು ಮತ್ತು ಮೂಲಸೌಕರ್ಯ ವಲಯದ ಬೆಳವಣಿಗೆಯಲ್ಲಿನ ಕುಸಿತದಿಂದಾಗಿ ಮಂಗಳವಾರ ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆ ಕಂಡಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 362 ಅಂಶಗಳಷ್ಟು ಇಳಿಕೆ ಕಂಡು 38,305 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಮಧ್ಯಾಹ್ನದ ವಹಿವಾಟಿನಲ್ಲಿ 737 ಅಂಶಗಳವರೆಗೂ ಕುಸಿತ ಕಂಡಿತ್ತಾದರೂ ವಹಿವಾಟಿನ ಅಂತ್ಯದ ವೇಳೆಗೆ ತುಸು ಚೇತರಿಕೆ ಕಂಡಿತು.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 115 ಅಂಶ ಇಳಿಕೆಯಾಗಿ 11,359 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಗರಿಷ್ಠ ನಷ್ಟ: ಯೆಸ್‌ ಬ್ಯಾಂಕ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಎಸ್‌ಬಿಐ, ಭಾರ್ತಿ ಏರ್‌ಟೆಲ್‌, ಒನ್‌ಜಿಸಿ, ಟಾಟಾ ಸ್ಟೀಲ್‌ ಮತ್ತು ಟಿಸಿಎಸ್ ಷೇರುಗಳು ಶೇ 6.30ರವರೆಗೂ ಇಳಿಕೆ ಕಂಡಿವೆ.

ಗಳಿಕೆ: ಎಚ್‌ಡಿಎಫ್‌ಸಿ, ಮಹೀಂದ್ರಾ, ಮಾರುತಿ ಸುಜುಕಿ, ಕೋಟಕ್‌ ಬ್ಯಾಂಕ್‌, ಎಚ್‌ಯುಎಲ್‌ ಮತ್ತು ಏಷ್ಯನ್ ಪೇಂಟ್ಸ್‌ ಷೇರುಗಳು ಗಳಿಕೆ ಕಂಡುಕೊಂಡಿವೆ.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 20 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 71.07ರಂತೆ ವಿನಿಮಯಗೊಂಡಿತು.

ಇಳಿಕೆಗೆ ಕಾರಣಗಳು ಹಲವು: ಪಂಜಾಬ್‌ ಮತ್ತು ಮಹಾರಾಷ್ಟ್ರ ಕೊ ಆಪರೇಟಿವ್ ಬ್ಯಾಂಕ್‌ (ಪಿಎಂಸಿ) ಬಿಕ್ಕಟ್ಟು ಮತ್ತು ಇಂಡಿಯಾಬುಲ್ಸ್‌ ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್‌ (ಐಎಚ್‌ಎಫ್‌ಎಲ್‌) ವಿರುದ್ಧದ ವಂಚನೆ ಆರೋ‍ಪದಿಂದಾಗಿ ಹೂಡಿಕೆ ಚಟುವಟಿಕೆ ಇಳಿಕೆಯಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮೂಲಸೌಕರ್ಯ ವಲಯದ 8 ಕೈಗಾರಿಕೆಗಳ ಬೆಳವಣಿಗೆ ಮೂರುವರೆ ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ತಯಾರಿಕಾ ವಲಯದ ಬೆಳವಣಿಗೆ ಸೆಪ್ಟೆಂಬರ್‌ನಲ್ಲಿಯೂ ಮಂದಗತಿಯಲ್ಲಿಯೇ ಇದೆ. ವಾಹನ ವಲಯದ ಮಾರಾಟ ಪ್ರಗತಿಯೂ ಇಳಿಮುಖವಾಗಿದೆ. ಈ ಅಂಶಗಳು ಸಹ ಷೇರುಪೇಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದವು.

ಸೆಪ್ಟೆಂಬರ್‌ ತಿಂಗಳಿನಲ್ಲಿಯೂ ಪ್ರಮುಖ ಕಂಪನಿಗಳ ವಾಹನ ಮಾರಾಟ ಎರಡಂಕಿಗಳಷ್ಟು ಇಳಿಕೆ ಕಂಡಿದೆ.

 **

₹2.37 ಲಕ್ಷ ಕೋಟಿ – ಎರಡು ದಿನದ ವಹಿವಾಟಿನಲ್ಲಿ ಕರಗಿರುವ ಹೂಡಿಕೆದಾರರ ಸಂಪತ್ತು

₹ 145.32 ಲಕ್ಷ ಕೋಟಿ  – ಷೇರುಪೇಟೆಯ ಬಂಡವಾಳ ಮೌಲ್ಯ

₹1,299 ಕೋಟಿ – ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವು

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)