ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆರಿಗೆದಾರರಿಗೂ ಎಪಿವೈ ಸೌಲಭ್ಯ ನೀಡಿ: ಭಾಸ್ಕರ್‌ ಚಕ್ರವರ್ತಿ

ಸಂಪರ್ಕ ಕಾರ್ಯಕ್ರಮದಲ್ಲಿ ಎಂ. ಭಾಸ್ಕರ್‌ ಚಕ್ರವರ್ತಿ ಸಲಹೆ
Published 10 ಆಗಸ್ಟ್ 2024, 10:21 IST
Last Updated 10 ಆಗಸ್ಟ್ 2024, 10:21 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರವು ಅಟಲ್‌ ಪಿಂಚಣಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಬಡವರಿಗೆ ಹೆಚ್ಚಿನ ಸಹಾಯಧನ ಸೌಲಭ್ಯ ನೀಡಬೇಕು. ಆದಾಯ ತೆರಿಗೆ ಪಾವತಿಸುವವರಿಗೂ ಈ ಯೋಜನೆಯಡಿ ಸೌಲಭ್ಯ ಒದಗಿಸಬೇಕು. ಇದರಿಂದ ಹೆಚ್ಚಿನ ಜನರು ಯೋಜನೆಗೆ ಸೇರ್ಪಡೆಯಾಗಲಿದ್ದಾರೆ’ ಎಂದು ಎಸ್‌ಎಲ್‌ಬಿಸಿ ಕರ್ನಾಟಕದ ಉಪ ಸಂಚಾಲಕ ಮತ್ತು ಕೆನರಾ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಎಂ. ಭಾಸ್ಕರ್‌ ಚಕ್ರವರ್ತಿ ಅಭಿಪ್ರಾಯಪಟ್ಟರು. 

ಅಟಲ್ ಪಿಂಚಣಿ ಯೋಜನೆ (ಎಪಿವೈ) ವ್ಯಾಪ್ತಿ ವಿಸ್ತರಿಸಲು ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ), ಕರ್ನಾಟಕ ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (ಪಿಎಫ್‌ಆರ್‌ಡಿಎ) ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಸಂಪರ್ಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2022ರ ಅಕ್ಟೋಬರ್‌ನಿಂದ ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗೆ ಸೇರಲು ಅರ್ಹರಾಗಿರುವುದಿಲ್ಲ. ಈ ನಿಯಮಕ್ಕೆ ತಿದ್ದುಪಡಿ ತಂದರೆ ಯೋಜನೆಯ ಗುರಿ ಸಾಧನೆಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈಗಾಗಲೇ, ಕರ್ನಾಟಕವು ಅಟಲ್‌ ಪಿಂಚಣಿ ಯೋಜನೆಯಲ್ಲಿ ದೇಶದಲ್ಲಿ 5ನೇ ಸ್ಥಾನದಲ್ಲಿದೆ. ಪಿಂಚಣಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಬ್ಯಾಂಕ್‌ನ ಶಾಖೆಗಳು ತಿಂಗಳಿಗೊಮ್ಮೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ ಎಂದು ತಿಳಿಸಿದರು.

‘ದೇಶದ ಅಸಂಘಟಿತ ವಲಯವು ನಿವೃತ್ತಿಯ ಆದಾಯವನ್ನು ಭದ್ರಪಡಿಸಿಕೊಳ್ಳಬೇಕಿದೆ. ಸರ್ಕಾರದ ಅಟಲ್‌ ಪಿಂಚಣಿ ಯೋಜನೆ ಇದಕ್ಕೆ ನೆರವಾಗಲಿದೆ’ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ಪೂರ್ಣ ಕಾಲಿಕ ಸದಸ್ಯೆ (ಅರ್ಥಶಾಸ್ತ್ರ) ಮಮತಾ ಶಂಕರ್‌ ಹೇಳಿದರು.

ರಾಜ್ಯದಲ್ಲಿ ಎಪಿವೈ ಗುರಿ ಸಾಧಿಸುವಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತಲುಪಿಲ್ಲ. ಯೋಜನೆಯಲ್ಲಿ ಮಹಿಳೆಯರ ನೋಂದಣಿ ಪ್ರಮಾಣವೂ ಕಡಿಮೆ ಇದೆ. ಈಗ ಶೇ 85ರಷ್ಟು ಗ್ರಾಹಕರು ಮಾಡುತ್ತಿರುವ ಮೊತ್ತವೂ ಅತಿ ಕಡಿಮೆ ಪ್ರಮಾಣದಲ್ಲಿದೆ. ಇದರಿಂದ ಅವರಿಗೆ ಪಿಂಚಣಿ ಬರುವುದೂ ಸಹ ಕಡಿಮೆ. ಅದಕ್ಕಾಗಿ ಅವರಿಗೆ ಯೋಜನೆಯ ಬಗ್ಗೆ ಅರಿವು ಮೂಡಿಸಿ, ಹೆಚ್ಚು ಮೊತ್ತದ ಪಿಂಚಣಿ ಮಾಡಿಸಬೇಕು ಎಂದು ಹೇಳಿದರು.

ಪಿಂಚಣಿ ಯೋಜನೆಗೆ ಎಪಿವೈ ಆ್ಯಪ್‌ ಇದೆ. ಇದರಲ್ಲಿ ಎಲ್ಲ ಮಾಹಿತಿಯಿದ್ದು, ಇದರ ಮೂಲಕವೂ ಪಿಂಚಣಿದಾರರು ಸೇರ್ಪಡೆಯಾಗಲು ಸಹಕಾರಿಯಾಗಲಿದೆ. ಸಣ್ಣ ವ್ಯಾಪಾರಿಗಳು, ಅಸಂಘಟಿಕ ಕಾರ್ಮಿಕರು ಯೋಜನೆಯ ಫಲಾನುಭವಿಗಳಾಗಬೇಕು ಎಂದರು ಹೇಳಿದರು.

‘ಅಸಂಘಟಿತ ವಲಯದ ಕಾರ್ಮಿಕರಿಗೆ ಸುರಕ್ಷತೆ ಇಲ್ಲ. ಅದಕ್ಕಾಗಿ ಸರ್ಕಾರವು ಅವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಅಟಲ್‌ ಪಿಂಚಣಿ ಯೋಜನೆ ರೂಪಿಸಿದೆ. ಹಣಕಾಸಿನ ಒಳಗೊಳ್ಳುವಿಕೆ ಅಗತ್ಯ’ ಎಂದು ಆರ್‌ಬಿಐನ ಎಫ್‌ಐಡಿಡಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಅರುಣ್‌ಕುಮಾರ್‌ ಪಿ. ಹೇಳಿದರು.

‘ಹಣಕಾಸು ಸಾಕ್ಷರತೆ ಎಲ್ಲರಿಗೂ ಅಗತ್ಯ. ಎಪಿವೈಗೆ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ನೋಂದಣಿ ಆಗುತ್ತಿವೆ. ಆದರೆ, ಮಹಿಳೆಯರ ಪ್ರಮಾಣ ಕಡಿಮೆ ಇದೆ. ಈ ಸಂಖ್ಯೆ ಏರಿಕೆಯಾಗಬೇಕು. ಯುವಜನತೆಗೂ ಯೋಜನೆಯ ಅರಿವು ಮೂಡಿಸುವ ಅಗತ್ಯವಿದೆ’ ಎಂದು ನಬಾರ್ಡ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶ್ರೀಜಾ ಪಿ. ನಾಯರ್‌ ತಿಳಿಸಿದರು.‌

‘ಎಪಿವೈ ಅಡಿ ಕರ್ನಾಟಕದಲ್ಲಿ 2023-24ನೇ ಸಾಲಿನಲ್ಲಿ 8.47 ಲಕ್ಷ ನೋಂದಣಿ ಗುರಿ ಹೊಂದಲಾಗಿತ್ತು. ಆದರೆ, 5.95 ಲಕ್ಷ ನೋಂದಣಿಯಾಗಿದ್ದು, ಶೇ 70ರಷ್ಟು ಸಾಧನೆಯಾಗಿದೆ’ ಎಂದು ಎಸ್‌ಎಲ್‌ಬಿಸಿ ಕರ್ನಾಟಕದ ಸಂಚಾಲಕ ಮತ್ತು ಕೆನರಾ ಬ್ಯಾಂಕ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಕೆ.ಜೆ. ಶ್ರೀಕಾಂತ್ ಹೇಳಿದರು.

2023-24ನೇ ಸಾಲಿನ ಪ್ರಮುಖ ಜಿಲ್ಲಾ ವ್ಯವಸ್ಥಾಪಕರ ವಾರ್ಷಿಕ ಪ್ರಶಸ್ತಿಗಳನ್ನು ಚಾಮರಾಜನಗರ, ಬೀದರ್, ಕಲಬುರ್ಗಿ, ಯಾದಗಿರಿ, ದಾವಣಗೆರೆ, ಚಿತ್ರದುರ್ಗ, ವಿಜಯಪುರ ಮತ್ತು ಗದಗ ಜಿಲ್ಲೆಯ ಎಲ್‌ಡಿಎಂಗಳಿಗೆ ಪ್ರದಾನ ಮಾಡಲಾಯಿತು. 

2023-24ನೇ ರಾಜ್ಯ ನಿಯಂತ್ರಣ ಮುಖ್ಯಸ್ಥರ ವಾರ್ಷಿಕ ಪ್ರಶಸ್ತಿಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್, ಸೌತ್ ಕೆನರಾ ಡಿಸಿಸಿ ಬ್ಯಾಂಕ್ ಮತ್ತು ಕರ್ಣಾಟಕ ಬ್ಯಾಂಕ್‌ನ ಬ್ಯಾಂಕ್‌ಗಳಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಎಲ್‌ಬಿಸಿ ಕರ್ನಾಟಕದ ಸಂಚಾಲಕ ಮತ್ತು ಕೆನರಾ ಬ್ಯಾಂಕ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಕೆ.ಜೆ. ಶ್ರೀಕಾಂತ್, ವಿವಿಧ ಬ್ಯಾಂಕ್‌ನ ಅಧಿಕಾರಿಗಳು, ಆರ್‌ಬಿಐ, ನಬಾರ್ಡ್‌, ಎಸ್‌ಎಲ್‌ಬಿಸಿ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT