ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಂಎಸ್‌ ಮೂಲಕ 15ಜಿ, 15ಎಚ್‌ ನಮೂನೆ ಸಲ್ಲಿಸಲು ಕೆನರಾ ಬ್ಯಾಂಕ್‌ ಅವಕಾಶ

Last Updated 21 ಏಪ್ರಿಲ್ 2023, 16:01 IST
ಅಕ್ಷರ ಗಾತ್ರ

ಬೆಂಗಳೂರು: ಬಡ್ಡಿ ವರಮಾನದ ಮೇಲೆ ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್) ಮಾಡಿಕೊಳ್ಳುವುದು ಬೇಡ ಎಂಬ ಕೋರಿಕೆಯನ್ನು ಬ್ಯಾಂಕ್‌ಗಳಿಗೆ ಸಲ್ಲಿಸಲು, ಹಿಂದೂ ಅವಿಭಕ್ತ ಕುಟುಂಬದವರು (ಎಚ್‌ಯುಎಫ್‌), ವ್ಯಕ್ತಿಗಳು ಹಾಗೂ ಹಿರಿಯ ನಾಗರಿಕರು ಬ್ಯಾಂಕ್‌ಗಳಿಗೆ ಕೊಡಬೇಕಿರುವ 15ಜಿ ಮತ್ತು 15ಎಚ್‌ ನಮೂನೆಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಸಲ್ಲಿಸುವ ಸೌಕರ್ಯವನ್ನು ಕೆನರಾ ಬ್ಯಾಂಕ್ ಆರಂಭಿಸಿದೆ.

ರಿಸರ್ವ್‌ ಬ್ಯಾಂಕ್‌ ಇನ್ನೊವೇಷನ್ ಹಬ್‌ (ಆರ್‌ಬಿಐಎಚ್‌) ಜೊತೆಗೂಡಿ ಈ ಸೌಲಭ್ಯವನ್ನು ಆರಂಭಿಸಿರುವುದಾಗಿ ಕೆನರಾ ಬ್ಯಾಂಕ್‌ ಪ್ರಕಟಣೆ ತಿಳಿಸಿದೆ.

ಹಣಕಾಸು ವರ್ಷದ ಆರಂಭದಲ್ಲಿ ಹಲವರು ಈ ನಮೂನೆಗಳನ್ನು ಬ್ಯಾಂಕ್‌ಗೆ ಸಲ್ಲಿಸುತ್ತಾರೆ. ಕೆನರಾ ಬ್ಯಾಂಕ್‌ಗೆ ಈ ಅರ್ಜಿಗಳನ್ನು ಆನ್‌ಲೈನ್‌ ಬ್ಯಾಂಕಿಂಗ್ ಮತ್ತು ಮೊಬೈಲ್‌ ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಸಲ್ಲಿಸಬಹುದಿತ್ತು. ಆದರೆ, ಹಿರಿಯ ನಾಗರಿಕರು ಇವುಗಳನ್ನು ಸಲೀಸಾಗಿ ಬಳಕೆ ಮಾಡದಿರುವ ಕಾರಣ, ಸರತಿ ಸಾಲಿನಲ್ಲಿ ನಿಂತು, ಖುದ್ದಾಗಿ ಅರ್ಜಿ ಸಲ್ಲಿಸುತ್ತಿದ್ದರು. ಇದನ್ನು ಗುರುತಿಸಿದ ಆರ್‌ಬಿಐಎಚ್‌, ಹಲವು ಬ್ಯಾಂಕ್‌ಗಳ ಜೊತೆ ಸಮಾಲೋಚನೆ ನಡೆಸಿ, ಸಮಸ್ಯೆ ಪರಿಹರಿಸಲು ನೀಲನಕ್ಷೆ ರೂಪಿಸಿತು.

ಈಗ ಠೇವಣಿದಾರರು ಈ ನಮೂನೆಗಳನ್ನು ಎಸ್‌ಎಂಎಸ್‌ ಮೂಲಕ ಮತ್ತು ವೆಬ್‌ಸೈಟ್‌ ಮೂಲಕ ಎಲ್ಲಿಂದಬೇಕಿದ್ದರೂ ಸಲ್ಲಿಸಬಹುದು. ಎಸ್‌ಎಂಎಸ್‌ ಮೂಲಕ ಸಲ್ಲಿಸಲು ಹೀಗೆ ಮಾಡಿ: ಕೆನರಾ ಬ್ಯಾಂಕ್‌ನಿಂದ ಸಿಗುವ ಬಡ್ಡಿಯಲ್ಲದೆ ಇತರ ಆದಾಯ ₹ 25 ಸಾವಿರ ಆಗಿದ್ದರೆ ನಮೂನೆಯನ್ನು ಎಸ್‌ಎಂಎಸ್‌ ಮೂಲಕ 7036000157 ಸಂಖ್ಯೆಗೆ ಹೀಗೆ ಸಲ್ಲಿಸಬೇಕು – ‘15GH 25000’. ಒಂದು ವೇಳೆ ವ್ಯಕ್ತಿಗೆ ಕೆನರಾ ಬ್ಯಾಂಕ್‌ನಿಂದ ಸಿಗುವ ಬಡ್ಡಿ ಹೊರತುಪಡಿಸಿ, ಬೇರೆ ಯಾವ ಆದಾಯವೂ ಇಲ್ಲದಿದ್ದರೆ ಆತ ಎಸ್‌ಎಂಎಸ್‌ನಲ್ಲಿ ‘15GH’ ಎಂದಷ್ಟೇ ಬರೆದು, 7036000157 ಸಂಖ್ಯೆಗೆ ಕಳುಹಿಸಬೇಕು.

ವೆಬ್‌ಸೈಟ್‌ ಮೂಲಕ ಇದನ್ನು ಸಲ್ಲಿಸುವವರು https://canarabank.net.in/TDSWaiver/Home/index ಪುಟಕ್ಕೆ ಭೇಟಿ ನೀಡಬೇಕು. ಅಲ್ಲಿ ಗ್ರಾಹಕರ ಐಡಿ ಅಥವಾ ಪ್ಯಾನ್ ಸಂಖ್ಯೆ ನಮೂದಿಸಿ, ನಂತರ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಬೇಕು. ನಂತರದಲ್ಲಿ 15ಜಿ ಅಥವಾ 15ಎಚ್‌ ನಮೂನೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT