ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಐ ಬಳಸಿ ಹಣ ನೀಡುವ ಎಟಿಎಂ; ನಗದು ಪಡೆಯಲು ಇನ್ನು ಬೇಕಿಲ್ಲ ಡೆಬಿಟ್ ಕಾರ್ಡ್ !

Published 7 ಸೆಪ್ಟೆಂಬರ್ 2023, 8:55 IST
Last Updated 7 ಸೆಪ್ಟೆಂಬರ್ 2023, 8:55 IST
ಅಕ್ಷರ ಗಾತ್ರ

ಮುಂಬೈ: ಯೂನಿಫೈಡ್ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ) ಬಳಸಿ ಸ್ಮಾರ್ಟ್‌ಫೋನ್‌ಗಳ ನಡುವೆ ಸಾಧಿಸುವ ಸಂವಹನದಿಂದ ಹಣ ವರ್ಗಾವಣೆ ಮಾಡುವುದು ಗೊತ್ತೇ ಇದೆ. ಆದರೆ ಇದೇ ಮೊದಲ ಬಾರಿಗೆ ಎಟಿಎಂ ಕಾರ್ಡ್‌ ಇಲ್ಲದೆ ಯುಪಿಐ ಬಳಸಿ ಯಂತ್ರದಿಂದ ಹಣ ಪಡೆಯುವ ಪ್ರಯತ್ನವೊಂದು ಗ್ಲೋಬಲ್ ಫಿಂಟೆಕ್‌ ಫೆಸ್ಟ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ.

ಇದನ್ನು ದೇಶದ ಮೊದಲ ಯುಪಿಐ ಎಟಿಎಂ ಎಂದು ಕರೆಯಲಾಗಿದೆ. ಈ ತಂತ್ರಜ್ಞಾನದಿಂದಾಗಿ ಬೌತಿಕ ಎಟಿಎಂ ಕಾರ್ಡ್‌ ತೆಗೆದುಕೊಂಡು ಹೋಗುವ ಜರೂರು ಇಲ್ಲ. ಹೀಗಾಗಿ ಇದೊಂದು ಕ್ರಾಂತಿಕಾರಕ ಬದಲಾವಣೆ ಎಂದು ಅಂತರ್ಜಾಲ ಬಳಕೆದಾರರು ಹೇಳಿದ್ದಾರೆ. ಈ ನೂತನ ಸಾಧನದ ವಿಡಿಯೊ ತುಣುಕನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಫಿನ್‌ಟೆಕ್‌ ಇನ್‌ಫ್ಲುಯೆನ್ಸರ್‌ ಅನ್ನು ಬಳಸಿ ಹಣ ಪಡೆಯುವ ಪ್ರಕ್ರಿಯೆಯನ್ನು ರವಿಸುತಂಜನಿ ಎಂಬುವವರು ವಿಡಿಯೊ ಮೂಲಕ ತೋರಿಸಿದ್ದಾರೆ.

ಮೊದಲು ಪರದೆ ಮೇಲೆ ಮೂಡುವ ‘ಯುಪಿಐ ಕಾರ್ಡ್‌ ರಹಿತ ನಗದು ಪಡೆಯುವ ಪ್ರಕ್ರಿಯೆ’ಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನಮಗೆ ಅಗತ್ಯವಿರುವ ನಗದು ಎಷ್ಟು ಎಂಬುದನ್ನು ನಮೂದಿಸಬೇಕು. ನಂತರ ಪರದೆ ಮೇಲೆ ಕ್ಯೂಆರ್ ಕೋಡ್‌ ಬರಲಿದೆ. ಮೊಬೈಲ್‌ನಲ್ಲಿರುವ BHIM ಆ್ಯಪ್‌ ಬಳಸಿ ಸ್ಕ್ಯಾನ್ ಮಾಡಿ, ಯುಪಿಐ ಪಿನ್ ಹಾಕಿದರೆ ಸಾಕು ಹಣ ಸಿಗಲಿದೆ.

ಯುಪಿಐ ಆಧಾರಿತ ಈ ಹೊಸ ಎಟಿಎಂ ಅನ್ನು ಎನ್‌ಸಿಆರ್‌ ನಿಯಂತ್ರಿತ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ.

ಸಾಮಾನ್ಯ ಎಟಿಎಂನಂತೆಯೇ ಈ ಯುಪಿಐ ಎಟಿಎಂ ಕೆಲಸ ಮಾಡಲಿದೆ. ನಗದು ಪಡೆಯಲು ಇರುವ ಉಚಿತ ಬಳಕೆಯ ಮಿತಿ ನಂತರ ವಿಧಿಸಲಾಗುವ ಶುಲ್ಕಗಳು ಇದಕ್ಕೂ ಅನ್ವಯವಾಗಲಿವೆ. ಈ ಯುಪಿಐ ಎಟಿಎಂ BHIM ಯುಪಿಐ ಆ್ಯಪ್ ಬಳಸಿ ಬಳಕೆ ಮಾಡುವಂತೆ ವಿನ್ಯಾಸ ಮಾಡಲಾಗಿದೆ. ಆದರೆ ಸದ್ಯ ಇದು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿಲ್ಲ.

ಇತರ ಯುಪಿಐ ಆ್ಯಪ್‌ಗಳಾದ ಗೂಗಲ್ ಪೇ, ಫೋನ್ ಪೇ ಹಾಗೂ ಪೆಟಿಎಂಗಳನ್ನು ಬಳಸಿ ನಗದು ಪಡೆಯುವ ವ್ಯವಸ್ಥೆ ಶೀಘ್ರದಲ್ಲಿ ಬರಲಿದೆ ಎಂದು ಮೂಲಗಳು ತಿಳಿಸಿವೆ. 

ಈ ನೂತನ ತಂತ್ರಜ್ಞಾನವನ್ನು ಎಕ್ಸ್ ಖಾತೆಯಲ್ಲಿ ಕೆಲವರು ಪ್ರಶಂಸಿಸಿದ್ದಾರೆ. ‘ಯುಪಿಐ ಬಳಕೆ ಬಲ್ಲವರಿಗೆ ಇದು ಹೆಚ್ಚು ಪ್ರಯೋಜನಕಾರಿ’ ಎಂದಿದ್ದಾರೆ. 

‘ಇದೊಂದು ಅದ್ಭುತ ಅನ್ವೇಷಣೆ. ಬೌದ್ಧಿಕ ಕಾರ್ಡ್‌ ತೆಗೆದುಕೊಂಡು ಹೋಗುವ ಅಗತ್ಯವೇ ಇಲ್ಲ. ಇತರ ಎಟಿಎಂಗಳಲ್ಲೂ ಈ ವ್ಯವಸ್ಥೆ ಶೀಘ್ರದಲ್ಲಿ ಬರುವ ವಿಶ್ವಾಸವಿದೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.

ಯುಪಿಐ ವಹಿವಾಟು ಸಂಖ್ಯೆ ಇತ್ತೀಚೆಗೆ 10 ಶತಕೋಟಿ ದಾಟಿದೆ. ಆಗಸ್ಟ್‌ ತಿಂಗಳಲ್ಲಿ ಯುಪಿಐ ಒಟ್ಟು ವಹಿವಾಟು ಸಂಖ್ಯೆ ಸಾರ್ವಕಾಲಿಕ ಗರಿಷ್ಠ 10.58 ಶತಕೋಟಿಗೆ ಏರಿಕೆಯಾಗಿದೆ. ಮಾಸಿಕ 100 ಶತಕೋಟಿ ಯುಪಿಐ ನಗದು ವರ್ಗಾವಣೆಯನ್ನು ನಿರ್ವಹಿಸುವ ಸಾಮರ್ಥ್ಯ ಇದೆ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT