ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಯ ಯಶೋಗಾಥೆ | ಆತ್ಮಸ್ಥೈರ್ಯಕ್ಕೆ ಸಂದ ಜಯ

Last Updated 7 ಜುಲೈ 2020, 19:30 IST
ಅಕ್ಷರ ಗಾತ್ರ
ADVERTISEMENT
"ಚೆಫ್‌ಟಾಕ್‌ ತಂಡದೊಂದಿಗೆ ಗೋವಿಂದ ಬಾಬು ಪೂಜಾರಿ"

ದೃಢ ಸಂಕಲ್ಪ ಇದ್ದಾಗ, ಗುರಿ ಸಾಧನೆಯ ದಾರಿಯಲ್ಲಿ ಅಡೆತಡೆಗಳು ಎದುರಾದರೂ ಧೃತಿಗೆಡದೆ ಮುಂದೆ ಸಾಗಬಹುದು ಎನ್ನುವುದಕ್ಕೆ ಯಶಸ್ವಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರ ಬದುಕು ಮತ್ತು ವಹಿವಾಟು ನಿದರ್ಶನವಾಗಿದೆ.

ಸಾಧನೆಯ ಕನಸು ನನಸಾಗಿಸಿಕೊಳ್ಳಲು ಬಡತನ ಅಡ್ಡಿಯಲ್ಲ. ಸ್ಥೈರ್ಯ ಇದ್ದಾಗ ಸವಾಲುಗಳನ್ನು ಅವಕಾಶಗಳಾಗಿ ಬಳಸಿಕೊಂಡು ಬೆಳೆಯಲು ಸಾಧ್ಯ ಎನ್ನುವುದನ್ನು ಯಶಸ್ವಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟಿದ್ದಾರೆ

ಬಿಜೂರಿನ ಕೃಷಿ ಕುಟುಂಬವೊಂದರಲ್ಲಿ 1977ರಲ್ಲಿ ಜನಿಸಿದ ಗೋವಿಂದ ಬಾಬು ಪೂಜಾರಿ ಅವರು ಬಡತನದಲ್ಲಿಯೇ ಬಾಲ್ಯ ಕಳೆದವರು. ದುಡಿಮೆಗಾಗಿ 13ನೇ ವಯಸ್ಸಿನಲ್ಲಿ ಮುಂಬೈ ಸೇರಿದಾಗ ಅವರಲ್ಲಿ ಕನಸೊಂದಿತ್ತು. ಮುಂದೊಂದು ದಿನ ಸ್ವಂತ ಉದ್ದಿಮೆ ಆರಂಭಿಸಿ, ಕೆಲವರಿಗಾದರೂ ಉದ್ಯೋಗ ನೀಡಬೇಕು ಎನ್ನುವ ಆ ಕನಸೇ, ಮುಂಬೈ ಜೀವನದ ಕಷ್ಟದ ಸಾಗರ ಈಜಿ ಸಾಧನೆಯ ದಡ ಸೇರಲು ಅವರಿಗೆ ಪ್ರೇರಣೆಯಾಗಿತ್ತು.

ಮೊದಲಿಗೆ ಹೋಟೆಲ್ ಒಂದರಲ್ಲಿ ಚಹಾ ಮಾಡುವ ಕೆಲಸಕ್ಕೆ ಸೇರಿದ ಪೂಜಾರಿ ಅವರು ನಂತರದ ವರ್ಷಗಳಲ್ಲಿ ಬಿಎಸ್‌ಟಿ ಕ್ಯಾಂಟೀನ್‌ನಲ್ಲಿ ಅಡುಗೆ ಸಹಾಯಕನಾಗಿ ಸೇರಿಕೊಂಡರು.

'ಕಲಿಯುವ ಹಂಬಲದಿಂದಾಗಿ ಇರ್ಲಾದ ಸನ್ನಿ ಬಾರ್ ಎನ್ನುವಲ್ಲಿ ಬಾಣಸಿಗನಾದೆ. ನಂತರ ಸ್ವಂತವಾಗಿ ಕೆಲಸ ಮಾಡಬೇಕೆಂದು, ಜನರಲ್ ಸ್ಟೋರ್ ತೆರೆದೆ. ಆದರೆ ಸಾಕಷ್ಟು ನಷ್ಟ ಅನುಭವಿಸಿದೆ. ಅದೇ ವೇಳೆಯಲ್ಲಿ ಫ್ರಾನ್ಸಿಸ್ ಎನ್ನುವ ಕಾರ್ಮಿಕ ನಾಯಕರೊಬ್ಬರ ಪರಿಚಯವಾಯಿತು. ಅವರ ಸಹಾಯದಿಂದ ಮುಂಬೈನ ಒಂದು ಪಂಚತಾರಾ ಹೋಟೆಲ್‌ನಲ್ಲಿ ಕ್ಲೀನಿಂಗ್ ವಿಭಾಗದಲ್ಲಿ ಕೆಲಸ ದೊರಕಿತು. ಆದರೆ ಅಡುಗೆ ಕುರಿತ ನನ್ನ ಆಸಕ್ತಿ ಗುರುತಿಸಿದ ಹೋಟೆಲ್‌ನವರು, ಅಡುಗೆ ಮನೆಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ನೀಡಿದರು. ಹಂತ ಹಂತವಾಗಿ ಕಲಿತ ಬಳಿಕ ಷೆಫ್ ಸ್ಥಾನ ಗಳಿಸಿದೆ' ಎಂದು ತಮ್ಮ ಜೀವನದ ಹಾದಿ ಸ್ಮರಿಸಿಕೊಳ್ಳುತ್ತಾರೆ ಪೂಜಾರಿ ಅವರು.

ನನಸಾದ ಕನಸು
7 ಮಂದಿ ನೌಕರರೊಂದಿಗೆ 2007ರಲ್ಲಿ 'ಷೆಫ್ ಟಾಕ್ ಕೇಟರಿಂಗ್ ಸರ್ವಿಸಸ್ ' ಸಂಸ್ಥೆ ಆರಂಭಿಸಿದರು. ಬಳಿಕ 'ಷೆಫ್ ಟಾಕ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ. ಲಿ.' ಆಗಿ ಅದನ್ನು ಬದಲಾಯಿಸಿದರು.

ಪ್ರಸ್ತುತ ಪೂಜಾರಿ ಅವರು ತಮ್ಮ ಸಂಸ್ಥೆ ಮೂಲಕ 5,000 ಜನರಿಗೆ ಉದ್ಯೋಗ ನೀಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್, ಗುಜರಾತ್‌ನಲ್ಲಿ ಸಂಸ್ಥೆ ಅತ್ಯಾಧುನಿಕ ಕಿಚನ್‌ಗಳನ್ನು ಹೊಂದಿದ್ದು, ವಿವಿಧ ಕಾರ್ಪೊರೇಟ್ ಕಂಪನಿಗಳಿಗೆ ಕೇಟರಿಂಗ್ ಸೇವೆ ಒದಗಿಸುತ್ತಿದೆ.ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ 25,000 ಚದರ ಅಡಿ ವಿಸ್ತೀರ್ಣದಲ್ಲಿ ಇರುವ ಅತ್ಯಾಧುನಿಕ ಕಿಚನ್, ‘ಐಎಸ್ಒ’ ಮಾನ್ಯತೆಯನ್ನೂ ಪಡೆದಿದೆ.

ಸೇವಾ ಕ್ಷೇತ್ರದಲ್ಲಿ ಒಲವು

ಉದ್ದಿಮೆಯ ಹೊರತಾಗಿ, ಶ್ರೀವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿರುವ ಇವರು ಈ ಮೂಲಕ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಉಪ್ಪುಂದದಲ್ಲಿ ಶ್ರೀ ವರಲಕ್ಷ್ಮೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದಾರೆ.

ಹುಟ್ಟೂರಲ್ಲಿ ಶಾಲೆ ಕಟ್ಟಬೇಕು, ಉದ್ದಿಮೆಯನ್ನು ವಿಸ್ತರಿಸಿ ಮತ್ತಷ್ಟು ಜನರಿಗೆ ಉದ್ಯೋಗ ನೀಡಬೇಕು ಎಂದು ತಮ್ಮ ಭವಿಷ್ಯದ ಕನಸುಗಳನ್ನು ಪೂಜಾರಿ ಅವರು ಹಂಚಿಕೊಳ್ಳುತ್ತಾರೆ

ಮೀನಿನ ಚಿಪ್ಸ್‌
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ಮತ್ಸ್ಯಬಂಧನ ಕಂಪನಿಯ ಸಹಯೋಗದಲ್ಲಿರಾಣಿ ಮೀನು (ಮದಿಮಲ್‌), ಬೂತಾಯಿ ಮೀನುಗಳಿಂದ ಸಿದ್ಧಗೊಂಡ ಚಿಪ್ಸ್‌ಗಳನ್ನು ತಯಾರಿಸಲು ಕಂಪನಿಯು ಚಾಲನೆ ನೀಡಿದೆ. ಚಿಪ್ಸ್‌ ಪೊಟ್ಟಣದ ಬೆಲೆ ₹ 30 ಇದೆ.

‘ಮೀನು ಅತ್ಯಂತ ಆರೋಗ್ಯದಾಯಕ ಖಾದ್ಯ. ಯಾವುದೇ ರಾಸಾಯನಿಕ ಬಳಸದೆ ತಾಜಾ ರೀತಿಯಲ್ಲೇ ಚಿಪ್ಸ್ ತಯಾರಿಕೆ ನಡೆಯುತ್ತಿದೆ. ದೇಶದಲ್ಲೇ ಮೀನು ಉತ್ಪಾದನೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಇಂತಹ ಉಪ ಉತ್ಪನ್ನಗಳಿಂದ ಮೀನಿನ ಮೌಲ್ಯವರ್ಧನೆ ಅಧಿಕವಾಗುತ್ತದೆ’ ಎಂದುಮತ್ಸ್ಯ ಬಂಧನ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಗೋವಿಂದ ಬಾಬು ಪೂಜಾರಿ ಹೇಳುತ್ತಾರೆ.

ಪ್ರಮುಖ ಜವಾಬ್ದಾರಿಗಳು
ಆಡಳಿತ ನಿರ್ದೇಶಕ – ಷೆಫ್‌ಟಾಕ್‌ ಪುಡ್ & ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್
ಮಾಲಿಕ – ಷೆಫ್‌ಟಾಕ್‌ ಕೇಟರಿಂಗ್ ಸರ್ವಿಸಸ್
ಅಧ್ಯಕ್ಷ – ಶ್ರೀ ವರಲಕ್ಷ್ಮೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಉಪ್ಪುಂದ
ಮ್ಯಾನೇಜಿಂಗ್ ಟ್ರಸ್ಟಿ – ಶ್ರೀ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಉಪ್ಪುಂದ
ಫಂಡ್ ರೈಸಿಂಗ್ ಸೆಕ್ರೆಟರಿ – ಶನಿಮಹಾತ್ಮ ಪೂಜಾ ಸಮಿತಿ ಕೋಟೆ ನಲ್ಲಸೊಪರ
ಉಪಾಧ್ಯಕ್ಷ – ಬಿಲ್ಲವ ಅಸೋಸಿಯೇಷನ್ ನಲ್ಲಸೊಪರ
ಟ್ರಸ್ಟಿ – ನಾರಾಯಣ ಚಾರಿಟಬಲ್ ಟ್ರಸ್ಟ್ ಬೆಂಗಳೂರು
ಕಾರ್ಯಕಾರಿ ಸಮಿತಿ ಸದಸ್ಯ – ಭಾರತೀಯ ಸೇವಾದಳ, ಬೈಂದೂರು
ಸದಸ್ಯ – ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್‌ ಇಂಡಸ್ಟ್ರಿ,ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್‌ ಆಫ್ ಕಾಮರ್ಸ್ ಆ್ಯಂಡ್‌ ಇಂಡಸ್ಟ್ರಿ, ಕೇಟರಿಂಗ್ ಅಸೋಸಿಯೇಷನ್ ಮುಂಬೈ,ಬೆಂಗಳೂರು ಮಹಾನಗರ ಹೋಟೆಲ್ ಅಸೋಸಿಯೇಷನ್

ಪ್ರಶಸ್ತಿ – ಗೌರವಗಳು
ಯಶಸ್ವಿ ಉದ್ಯಮಿಯಾಗಿ ಬೆಳೆದಿರುವ ಇವರನ್ನು ಹುಡುಕಿಕೊಂಡು ಅನೇಕ ಪ್ರಶಸ್ತಿಗಳು ಬಂದಿವೆ.
ಫಾಸ್ಟೆಸ್ಟ್‌ಗ್ರೋವಿಂಗ್ ಪುಡ್ ಸರ್ವೀಸ್‌ ಕಂಪನಿ – ಎಐಎಫ್ 2017
ಮೋಸ್ಟ್ ಹೈಜಿನಿಕ್ ಕೆಫೆಟೇರಿಯಾ – ಬಿಎಆರ್‌ಸಿ 2018
ಫಾಸ್ಟೆಸ್ಟ್‌ ಗ್ರೋವಿಂಗ್ ಎಂಟರ್‌ಪ್ರೈಸ್ – ಬಿಸಿಸಿಐ ಆ್ಯಂಡ್‌ ಎಚ್‌ಡಿಎಫ್‌ಸಿ ಬ್ಯಾಂಕ್ 2019

ಚೆಫ್‌ಟಾಕ್‌ ತಂಡದೊಂದಿಗೆ ಗೋವಿಂದ ಬಾಬು ಪೂಜಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT