ನವದೆಹಲಿ: 19 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿ ‘ಆಕ್ಸೆಂಚರ್’ ಗುರುವಾರ ಹೇಳಿದೆ.
ವಾರ್ಷಿಕ ಆದಾಯ ಮತ್ತು ಲಾಭದ ಮುನ್ಸೂಚನೆ ಆಧಾರದ ಮೇಲೆ ಉದ್ಯೋಗಿಗಳನ್ನು ಕಡಿತಗೊಳಿಸಲು ಕಂಪನಿ ಮುಂದಾಗಿದೆ ಎಂದು ಸುದ್ದಿಸಂಸ್ಥೆ ‘ಎಎಫ್‌ಪಿ’ ವರದಿ ಮಾಡಿದೆ.
ಆಕ್ಸೆಂಚರ್ ಕಂಪನಿ ವಾರ್ಷಿಕ ಆದಾಯದ ಪ್ರಮಾಣ ಶೇ 8ರಿಂದ ಶೇ 10ರಷ್ಟಿದೆ ಎಂದು ಅಂದಾಜಿಸಲಾಗಿದೆ.
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಮುಖ ಇ–ಕಾಮರ್ಸ್ ಕಂಪನಿ ಅಮೆಜಾನ್ ಸೇರಿದಂತೆ ಎಚ್‌ಪಿ, ಫಿಲಿಪ್ಸ್, ಡಿಸ್ನಿ, ಝುಮ್, ಮೆಟಾ, ಮತ್ತು ಟ್ವಿಟರ್‌ನಂತಹ ಕಂಪನಿಗಳು ಕೂಡ ವೆಚ್ಚ ಕಡಿತದ ಮೊರೆ ಹೋಗಿವೆ.
ಗೂಗಲ್ ಕಂಪನಿಯು ಒಟ್ಟು 12 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಇತ್ತೀಚೆಗೆ ಘೋಷಿಸಿತ್ತು. ಜಾಗತಿಕವಾಗಿ ಆರ್ಥಿಕ ಹಿಂಜರಿತ ಎದುರಾಗಬಹುದು ಎಂಬ ಭೀತಿಯ ನಡುವೆ ನೌಕರರನ್ನು ಕೆಲಸದಿಂದ ತೆಗೆಯುತ್ತಿರುವ ತಂತ್ರಜ್ಞಾನ ಕಂಪನಿಗಳ ಸಾಲಿಗೆ ಈಗ ಗೂಗಲ್ ಕೂಡ ಸೇರಿದೆ.
ಫೇಸ್‌ಬುಕ್ ಮಾಲೀಕತ್ವದ ಮೆಟಾ ಕಂಪನಿಯು 11 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಹೇಳಿತ್ತು. ಟ್ವಿಟರ್ ಕಂಪನಿಯು ಉದ್ಯಮಿ ಇಲಾನ್ ಮಸ್ಕ್ ಅವರ ತೆಕ್ಕೆಗೆ ಸೇರಿದ ನಂತರದಲ್ಲಿ ಶೇಕಡ 50ರಷ್ಟು ನೌಕರರನ್ನು ಕೆಲಸದಿಂದ ತೆಗೆದುಹಾಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.