ಮುಂಬೈ: ದೇಶದಲ್ಲಿ ಬ್ಲೂ ಕಾಲರ್ ಉದ್ಯೋಗಿಗಳ ಮಾಸಿಕ ವೇತನವು ₹20 ಸಾವಿರ ಅಥವಾ ಅದಕ್ಕಿಂತಲೂ ಕಡಿಮೆಯಿದೆ ಎಂದು ಉದ್ಯೋಗ ಪೋರ್ಟಲ್ ವರ್ಕ್‌ಇಂಡಿಯಾ ತಿಳಿಸಿದೆ.
ಕಚೇರಿಯ ವ್ಯವಸ್ಥೆ ಇಲ್ಲದೆ ಕಟ್ಟಡ ನಿರ್ಮಾಣ, ಡ್ರೈವಿಂಗ್, ಕಾರ್ಖಾನೆಗಳಲ್ಲಿ ದೈಹಿಕ ಕೆಲಸ ನಿರ್ವಹಿಸುವರರನ್ನು ಬ್ಲೂ ಕಾಲರ್ ಉದ್ಯೋಗಿಗಳೆಂದು ಕರೆಯಲಾಗುತ್ತದೆ.
ಕಡಿಮೆ ಸಂಬಳದಿಂದಾಗಿ ಈ ಉದ್ಯೋಗಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೈನಂದಿನ ಅಗತ್ಯತೆ ಪೂರೈಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಮನೆ ಬಾಡಿಗೆ, ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಹಣವನ್ನು ಸರಿದೂಗಿಸಿಕೊಳ್ಳಲು ಪರದಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಶೇ 57.63ರಷ್ಟು ಬ್ಲೂ ಕಾಲರ್ ಉದ್ಯೋಗಿಗಳ ಮಾಸಿಕ ಸಂಬಳವು ₹20 ಸಾವಿರ ಅಥವಾ ಅದಕ್ಕಿಂತಲೂ ಕಡಿಮೆಯಿದೆ. ಕೆಲವು ಉದ್ಯೋಗಿಗಳ ಸಂಬಳವು ಕನಿಷ್ಠ ವೇತನಕ್ಕಿಂತಲೂ ಕಡಿಮೆಯಿದೆ ಎಂದು ತಿಳಿಸಿದೆ.
ಈ ಉದ್ಯೋಗಿಗಳು ಪಡೆಯುವ ಸಂಬಳವು ಅವರ ದೈನಂದಿನ ಅಗತ್ಯತೆಯನ್ನು ಪೂರೈಸಿಕೊಳ್ಳಲು ಸಾಕಾಗಬಹುದಾಗಿದೆ. ಆದರೆ, ಉಳಿತಾಯ ಅಥವಾ ಹೂಡಿಕೆ ದೃಷ್ಟಿಯಿಂದ ಚಿಕ್ಕ ಕೊಠಡಿಗಳಲ್ಲಿ ವಾಸಿಸುತ್ತಾರೆ. ಬಹುತೇಕ ಉದ್ಯೋಗಿಗಳ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂದು ತಿಳಿಸಿದೆ.
ಶೇ 29.34ರಷ್ಟು ಉದ್ಯೋಗಿಗಳ ಸಂಬಳವು ₹20 ಸಾವಿರದಿಂದ ₹40 ಸಾವಿರ ಇದೆ. ಶೇ 10.71ರಷ್ಟು ಮಂದಿಯ ಸಂಬಳ ₹40 ಸಾವಿರದಿಂದ ₹60 ಸಾವಿರ ಇದೆ. ಸಂಬಳ ₹60 ಸಾವಿರ ದಾಟಿರುವ ಉದ್ಯೋಗಿಗಳ ಸಂಖ್ಯೆ ಶೇ 2.31ರಷ್ಟು ಇದೆ. ಅತಿಹೆಚ್ಚಿನ ಸಂಬಳ ಮತ್ತು ಸೌಲಭ್ಯ ಪಡೆಯುವ ಉದ್ಯೋಗಿಗಳ ಸಂಖ್ಯೆ ತೀರಾ ಕಡಿಮೆಯಿದೆ ಎಂದು ಹೇಳಿದೆ.