ಬುಧವಾರ, ಜೂಲೈ 8, 2020
21 °C
ಎಸ್‌ಆ್ಯಂಡ್‌ಪಿ ಗ್ಲೋಬಲ್‌ ರೇಟಿಂಗ್ಸ್‌ ಅಂದಾಜು

ಕೋವಿಡ್ ಬಿಕ್ಕಟ್ಟು | ಬ್ಯಾಂಕ್‌ಗಳ ಚೇತರಿಕೆಗೆ ವರ್ಷ ವಿಳಂಬ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ದೇಶದ ಬ್ಯಾಂಕಿಂಗ್‌ ವಲಯದ ಚೇತರಿಕೆಗೆ ಒಂದು ವರ್ಷ ಹಿನ್ನಡೆಯಾಗಲಿದ್ದು, ವಸೂಲಾಗದ ಸಾಲವು (ಎನ್‌ಪಿಎ) ಭಾರಿ ಏರಿಕೆ ಕಾಣಲಿದೆ ಎಂದು ಜಾಗತಿಕ ರೇಟಿಂಗ್ಸ್‌ ಸಂಸ್ಥೆ ಎಸ್‌ಆ್ಯಂಡ್‌ಪಿ ಹೇಳಿದೆ.

ಲಾಕ್‌ಡೌನ್‌ನಿಂದಾಗಿ ನಗದು ಹರಿವು ಬಿಕ್ಕಟ್ಟು ಎದುರಾಗಿದ್ದು, ದೇಶದ ಆರ್ಥಿಕತೆಯೂ ಮಂದಗತಿಯ ಬೆಳವಣಿಗೆ ಸಾಧಿಸುತ್ತಿದೆ. ಹೀಗಾಗಿ ಚೇತರಿಕೆಯು ಕಷ್ಟವಾಗಲಿದೆ. 

ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ಗರಿಷ್ಠ ಮಟ್ಟಕ್ಕೆ ಏರಿಕೆಯಾಗಲಿದೆ. ಸಾಲದ ಮೇಲಿನ ವೆಚ್ಚವು ಹೆಚ್ಚಾಗಲಿದ್ದು, ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ  ಕುರಿತ ರೇಟಿಂಗ್ಸ್‌ ಮೇಲೆ ಒತ್ತಡ ಹೆಚ್ಚಿಸಲಿದೆ ಎಂದು ವಿಶ್ಲೇಷಣೆ ಮಾಡಿದೆ.

ಬ್ಯಾಂಕ್‌ಗಳ ಸಾಲಗಳನ್ನು ಮರುಹೊಂದಾಣಿಕೆ ಮಾಡುವ ಬಗ್ಗೆ ಆರ್‌ಬಿಐ ಮುಂದಾಗಿದೆ ಎನ್ನುವ ವರದಿಗಳು ಬರುತ್ತಿರುವಂತೆಯೇ , ‘ಸಾಲಗಳನ್ನು ಮರುಹೊಂದಾಣಿಕೆ ಮಾಡುವುದರಿಂದ ಎನ್‌ಪಿಎ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದು ಹೇಳಿದೆ.

ಕೋವಿಡ್‌ನಿಂದಾಗಿ ಸಾಲ ವಸೂಲಿ ಪ್ರಕ್ರಿಯೆಗೆ ಹಿನ್ನಡೆಯಾಗಲಿದ್ದು, ಎನ್‌ಪಿಎ ಹೆಚ್ಚಾಗಲು ಕಾರಣವಾಗಲಿದೆ ಎಂದಿದೆ.

‘2022ರ ಮಾರ್ಚ್‌ 31ರ ಅಂತ್ಯದ ವೇಳೆಗೆ ಎನ್‌ಪಿಎದಲ್ಲಿ ಶೇ 1ರಷ್ಟು ಚೇತರಿಕೆ ಕಾಣುವ ನಿರೀಕ್ಷೆ ಇದೆ’ ಎಂದು ಎಸ್‌ಆ್ಯಂಡ್‌ಪಿನ ವಿಶ್ಲೇಷಕಿ ದೀಪಾಲಿ ಸೇತ್ ಛಾಬ್ರಿಯಾ ಹೇಳಿದ್ದಾರೆ.

‘ಕೆಲವು ಹಣಕಾಸು ಸಂಸ್ಥೆಗಳು ಮರುಪಾವತಿಸುವ ಸಾಮರ್ಥ್ಯ ಇಲ್ಲದೇ ಇರುವ ಗ್ರಾಹಕರಿಗೆ ಮತ್ತು ಸಗಟು ನಿಧಿಯ ಮೇಲೆ ಅವಲಂಬಿಸಿರುವವರಿಗೆ ಸಾಲ ನೀಡುತ್ತಿವೆ. ಈ ಅಂಶಗಳೂ ಸಹ ಬೆಳವಣಿಗೆಗೆ ಅಡ್ಡಿಪಡಿಸಲಿವೆ’ ಎಂದಿದ್ದಾರೆ.

ಸಾಲ ಮನ್ನಾ, ವಸೂಲಾಗದ ಸಾಲದ ಏರಿಕೆ ನಿಧಾನವಾಗಿರುವುದು ಹಾಗೂ ದಿವಾಳಿ ಸಂಹಿತೆಯಿಂದಾಗಿ ಬ್ಯಾಂಕಿಂಗ್‌ ವ್ಯವಸ್ಥೆಯ ಆರ್ಥಿಕ ಸ್ಥಿತಿಯು 18 ತಿಂಗಳಿನಲ್ಲಿ ಸುಧಾರಣೆ ಕಂಡಿತ್ತು. ಆದರೆ, ಇದೀಗ ಕೋವಿಡ್‌ ಮತ್ತು ಲಾಕ್‌ಡೌನ್‌ ಕಾರಣಗಳಿಂದಾಗಿ ಬ್ಯಾಂಕಿಂಗ್‌ ವಲಯದ ಬೆಳವಣಿಗೆಗೆ ಅಡ್ಡಿಯಾಗಲಿದೆ.

ಎನ್‌ಪಿಎ ಹೆಚ್ಚಳ

13–14%: 2021ರ ಮಾರ್ಚ್‌ 31ರ ಅಂತ್ಯಕ್ಕೆ

8.5%:2020ರ ಮಾರ್ಚ್‌ 31ರ ಅಂತ್ಯಕ್ಕೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು