ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾಖಲೆಯ ಮಟ್ಟಕ್ಕೆ ಕ್ರೆಡಿಟ್ ಕಾರ್ಡ್‌ ಬಳಕೆ

ವೈಯಕ್ತಿಕ ಸಾಲ ಪಡೆಯುವಿಕೆ ಕೂಡ ಹೆಚ್ಚಳ
Published 16 ಜುಲೈ 2023, 14:15 IST
Last Updated 16 ಜುಲೈ 2023, 14:15 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ದೇಶದಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ವೆಚ್ಚಗಳು ಮೇ ತಿಂಗಳಲ್ಲಿ ₹1.4 ಲಕ್ಷ ಕೋಟಿಗೆ ತಲುಪಿವೆ. ಇದು ದಾಖಲೆಯ ಮಟ್ಟ. ಭಾರತೀಯ ರಿಸರ್ವ್‌ ಬ್ಯಾಂಕ್‌ ಬಿಡುಗಡೆ ಮಾಡಿರುವ ದಾಖಲೆಗಳು ಇದನ್ನು ಹೇಳುತ್ತಿವೆ.

ಕ್ರೆಡಿಟ್‌ ಕಾರ್ಡ್‌ ಬಳಸಿ ಮಾಡುವ ವೆಚ್ಚಗಳ ಮೊತ್ತವು ಕಳೆದ ಹಣಕಾಸು ವರ್ಷದಲ್ಲಿ ಬಹಳ ಏರಿಕೆಯನ್ನೂ ಕಾಣುತ್ತಿರಲಿಲ್ಲ, ತಗ್ಗುತ್ತಲೂ ಇರಲಿಲ್ಲ. ಆದರೆ ಈ ವರ್ಷದಲ್ಲಿ ತಿಂಗಳಿನಿಂದ ತಿಂಗಳಿಗೆ ಶೇಕಡ 5ರಷ್ಟು ಏರಿಕೆ ಕಾಣುತ್ತಿದೆ.

ಅದೇ ರೀತಿ, ಚಾಲ್ತಿಯಲ್ಲಿ ಇರುವ ಕ್ರೆಡಿಟ್ ಕಾರ್ಡ್‌ಗಳ ಸಂಖ್ಯೆಯು ಜನವರಿಯ ನಂತರದಲ್ಲಿ 50 ಲಕ್ಷಕ್ಕಿಂತ ಹೆಚ್ಚಿನ ಏರಿಕೆ ಕಂಡಿದ್ದು, 8.74 ಕೋಟಿಗೆ ತಲುಪಿದೆ. ಇದು ಕೂಡ ದಾಖಲೆಯ ಮಟ್ಟ. ಜನವರಿಯಲ್ಲಿ ದೇಶದಲ್ಲಿ 8.24 ಕೋಟಿ ಕ್ರೆಡಿಟ್ ಕಾರ್ಡ್‌ಗಳು ಬಳಕೆಯಲ್ಲಿ ಇದ್ದವು.

2022–23ನೆಯ ಹಣಕಾಸು ವರ್ಷದಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ ವೆಚ್ಚಗಳ ಮೊತ್ತವು ₹1.10 ಲಕ್ಷ ಕೋಟಿಯಿಂದ ₹1.20 ಲಕ್ಷ ಕೋಟಿಯ ನಡುವೆ ಇತ್ತು. ಆದರೆ, ಮೇ ತಿಂಗಳಲ್ಲಿ ದಾಖಲೆಯ ₹1.4 ಲಕ್ಷ ಕೋಟಿಗೆ ಹೆಚ್ಚಾಗಿದೆ. ಪ್ರತಿ ಕಾರ್ಡ್‌ ಬಳಸಿ ಸರಾಸರಿ ₹16,144ರಷ್ಟು ಖರ್ಚು ಮಾಡಲಾಗಿದೆ.

ಕ್ರೆಡಿಟ್‌ ಕಾರ್ಡ್‌ ಬಿಲ್‌ಗಳನ್ನು 90 ದಿನಗಳ ನಂತರವೂ ಮರುಪಾವತಿ ಮಾಡದೆ ಇರುವ ಪ್ರಮಾಣವು 2023ರ ಮಾರ್ಚ್‌ ಅಂತ್ಯಕ್ಕೆ ಶೇ 0.66ರಷ್ಟು ಹೆಚ್ಚಾಗಿದ್ದು ಶೇ 2.94ಕ್ಕೆ ತಲುಪಿದೆ ಎಂದು ಸಾಲಗಳ ಮೇಲೆ ನಿಗಾ ಇರಿಸುವ ಟ್ರಾನ್ಸ್‌ಯೂನಿಯನ್ ಸಿಬಿಲ್‌ ಹೇಳಿದೆ. ಮರುಪಾವತಿ ಬಾಕಿ ಮೊತ್ತವು ಹೆಚ್ಚುತ್ತ ಇರುವುದು ವೈಯಕ್ತಿಕ ಮಟ್ಟದಲ್ಲಿ ಇರುವ ಹಣಕಾಸಿನ ಒತ್ತಡವನ್ನು ಸೂಚಿಸುತ್ತಿದೆ.

ಕ್ರೆಡಿಟ್ ಕಾರ್ಡ್‌ ಹೊಂದುವುದು ಹಾಗೂ ವೈಯಕ್ತಿಕ ಸಾಲ ಪಡೆಯುವುದು ಅತ್ಯಂತ ವೇಗದ ಏರಿಕೆ ಕಂಡಿದೆ ಎಂದು ಕೂಡ ಟ್ರಾನ್ಸ್‌ಯೂನಿಯನ್ ಸಿಬಿಲ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT