ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಡ್‌ ಪಾವತಿಗೆ ‘ಇ–ಮ್ಯಾಂಡೇಟ್‌’

Last Updated 27 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಪ್ರೀಪೇಡ್ ಅಥವಾ ಇ-ವಾಲೆಟ್ ಬಳಸಿ ಸಣ್ಣ ಮೊತ್ತದ ಪಾವತಿಗಳನ್ನು ಮಾಡುವ ಪ್ರಕ್ರಿಯೆಯು ಸದ್ಯದಲ್ಲಿಯೇ ಮತ್ತಷ್ಟು ಸರಳಗೊಳ್ಳಲಿದೆ. ಸೆಪ್ಟೆಂಬರ್ 1 ರಿಂದ ಡೆಬಿಟ್, ಕ್ರೆಡಿಟ್ ಕಾರ್ಡ್ ಪಾವತಿಯಲ್ಲಿ ಇ-ಮ್ಯಾಂಡೇಟ್‌ (e-mandate) ವ್ಯವಸ್ಥೆ ಜಾರಿಗೆ ಬರುತ್ತಿದೆ. ಡಿಜಿಟಲ್ ಪಾವತಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ವಾಣಿಜ್ಯ ಬ್ಯಾಂಕ್‌ಗಳಿಗೆ ಈಗಾಗಲೇ ಸೂಚನೆ ನೀಡಿದೆ.

ಉದ್ಯಮದ ಮನವಿಗೆ ಕೊನೆಗೂ ಆರ್‌ಬಿಐ ಸ್ಪಂದಿಸಿದೆ. ಬಹುದಿನಗಳ ಬೇಡಿಕೆ ಈಗ ಈಡೇರಿದೆ. ನೀವು ಕೆಲವರಿಂದ ಪ್ರತಿ ತಿಂಗಳು ಸರಕು ಮತ್ತು ಸೇವೆಗಳನ್ನು ಪಡೆದುಕೊಂಡು ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡುತ್ತಿರುತ್ತೀರಿ ಎಂದಿಟ್ಟುಕೊಳ್ಳಿ. ಇಂತಹ ಸಂದರ್ಭದಲ್ಲಿ ನೀವು ಎರಡು ಹಂತದ ಹೆಚ್ಚುವರಿ ದೃಢೀಕರಣದ (ಅಡಿಷನಲ್ ಫ್ಯಾಕ್ಟರ್ ಆಫ್ ಅಥೆಂಟಿಕೇಷನ್) ಬಳಿಕ ಪಾವತಿ ಮಾಡಲು ಸಾಧ್ಯವಾಗುತ್ತಿತ್ತು. ಪುನರಾವರ್ತಿತ ಪಾವತಿಗಳನ್ನು ಮಾಡುವವರಿಗೆ ಇದರಿಂದ ಸಾಕಷ್ಟು ಕಿರಿಕಿರಿಯಾಗುವ ಜತೆಗೆ ಪಾವತಿ ಸಲುವಾಗಿಯೇ ಹೆಚ್ಚುವರಿ ಸಮಯ ಮೀಸಲಿಡಬೇಕಾಗುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ‘ಇ–ಮ್ಯಾಂಡೇಟ್‌’ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.

ಏನಿದು ಇ-ಮ್ಯಾಂಡೇಟ್?

ನಿರ್ದಿಷ್ಟ ವ್ಯಕ್ತಿಗೆ, ನಿರ್ದಿಷ್ಟ ಮೊತ್ತವನ್ನು, ನಿರ್ದಿಷ್ಟ ಸಮಯದಲ್ಲಿ ಸ್ವಯಂಚಾಲಿತವಾಗಿ ಪಾವತಿಸುವ ವ್ಯವಸ್ಥೆಗೆ ಇ-ಮ್ಯಾಂಡೇಟ್‌ ಎನ್ನಬಹುದು. ಈ ಪ್ರಕ್ರಿಯೆ ಗ್ರಾಹಕನ ಪೂರ್ವಾನುಮತಿಯ ಬಳಿಕ ನಡೆಯುತ್ತಿದೆ. ಸದ್ಯ ಇ- ಮ್ಯಾಂಡೇಟ್‌ ವ್ಯವಸ್ಥೆಯಲ್ಲಿ ₹ 2 ಸಾವಿರದ ವರೆಗೆ ಸ್ವಯಂಚಾಲಿತ ಪಾವತಿ ಮಾಡಲು ಅವಕಾಶವಿದೆ.

ಹೊಸ ಡೆಬಿಟ್, ಕ್ರೆಟಿಡ್ ಕಾರ್ಡ್ ಪಾವತಿ ನಿಯಮ: ನಿರ್ದಿಷ್ಟ ವ್ಯಕ್ತಿಯ ಖಾತೆಗೆ ಸ್ವಯಂಚಾಲಿತವಾಗಿ ಹಣ ವರ್ಗಾಯಿಸುವಂತೆ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಹೊಂದಿರುವ ವ್ಯಕ್ತಿಯು ತನ್ನ ಬ್ಯಾಂಕ್‌ಗೆ ನಿರ್ದೇಶನ ನೀಡಬಹುದು. ಈ ವ್ಯವಸ್ಥೆಯಲ್ಲಿ ₹ 2 ಸಾವಿರದ ವರೆಗೆ ಮಾತ್ರ ಹಣ ವರ್ಗಾಯಿಸಲು ಅವಕಾಶವಿದೆ.

ಪದೇ, ಪದೇ ವ್ಯವಹಾರ ನಡೆಸಿ ಹಣ ‍ಪಾವತಿಸುವ ಸಂದರ್ಭಗಳಲ್ಲಿ (recurring payments) ಮಾತ್ರ ಇ–ಮ್ಯಾಂಡೇಟ್‌ ಮೂಲಕ ಡೆಬಿಟ್‌ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಾವತಿ ಮಾಡಬಹುದು ಎಂದು ಆರ್‌ಬಿಐ ತಿಳಿಸಿದೆ. ಸ್ವಯಂಚಾಲಿತ ಪಾವತಿ ವ್ಯವಸ್ಥೆಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ ಎಂದೂ ಆರ್‌ಬಿಐ ಸ್ಪಷ್ಟಪಡಿಸಿದೆ.
‘ಇ-ಮ್ಯಾಂಡೇಟ್‌’ ವ್ಯವಸ್ಥೆ ಪಡೆಯಲು ಬಯಸುವ ಗ್ರಾಹಕರು ಬ್ಯಾಂಕ್‌ನಲ್ಲಿ ನೋಂದಣಿ ಪ್ರಕ್ರಿಯೆ ಪೂರೈಸಿ ಪುನರಾವರ್ತಿತ ಪಾವತಿ ನಿರ್ದೇಶನ ಪ್ರಕ್ರಿಯ ಪೂರೈಸಬಹುದು.

ಸರಿಯಾಗಿ ನೋಂದಣಿ ಮಾಡಿಸಿ ಪಾವತಿ ನಿರ್ದೇಶನ ನೀಡಿದ ಬಳಿಕವಷ್ಟೇ ಪುನರಾವರ್ತಿತ ಪಾವತಿ ನಿರ್ದೇಶನ ಅನುಷ್ಠಾನಕ್ಕೆ ಬರುತ್ತದೆ. ನೋಂದಣಿ ಬಳಿಕ ಪುನರಾವರ್ತಿತ ಪಾವತಿಗಳನ್ನು ಮಾಡಲು ಹೆಚ್ಚುವರಿ ದೃಢೀಕರಣ (ಅಡಿಷನಲ್ ಫ್ಯಾಕ್ಟರ್ ಆಫ್ ಅಥೆಂಟಿಕೇಷನ್) ಅಗತ್ಯವಿರುವುದಿಲ್ಲ.

ಡೆಬಿಟ್, ಕ್ರೆಡಿಟ್ ಕಾರ್ಡ್, ಇ-ವಾಲೆಟ್ ಬಳಕೆದಾರರು, ಇ-ಮ್ಯಾಂಡೇಟ್‌ ವ್ಯವಸ್ಥೆಯನ್ನು ಪಡೆದುಕೊಳ್ಳಬಹುದು. ಪಾವತಿ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆಗಳಿಗೆ ಪೂರಕವಾಗಿ ಸುರಕ್ಷಿತವಾಗಿ ನಗದು ವರ್ಗಾವಣೆ ಮಾಡಲು ಅನುವಾಗುವಂತೆ ಈ ಹೊಸ ಪದ್ಧತಿಯನ್ನು ಆರ್‌ಬಿಐ ಜಾರಿಗೆ ತಂದಿದೆ.

ಡೆಬಿಟ್, ಕ್ರೆಟಿಡ್ ಕಾರ್ಡ್ ಬಳಸಿ ಪಾವತಿ ಮಾಡಿದಾಗ ಬ್ಯಾಂಕ್‌ಗಳು ಎಸ್‌ಎಂಎಸ್ ಸಂದೇಶ ಕಳುಹಿಸುವ ಮಾದರಿಯಲ್ಲೇ ಇ- ಮ್ಯಾಂಡೇಟ್‌ ಪ್ರಕ್ರಿಯೆಯಲ್ಲಿ ಹಣ ಸಂದಾಯವಾದ ಬಳಿಕ ಗ್ರಾಹಕರಿನಿಗೆ ಎಸ್‌ಎಂಎಸ್ ಹೋಗಬೇಕು. ಇ- ಮ್ಯಾಂಡೇಟ್‌ ಪದ್ಧತಿಯಲ್ಲಿ ನಗದು ವರ್ಗಾವಣೆ ಮಾಡುವಾಗ ಆಗಬಹುದಾದ ತೊಡಕುಗಳನ್ನು ನಿವಾರಿಸಲು ಮತ್ತು ಕಾಲಮಿತಿಯಲ್ಲಿ ದೂರುಗಳಿಗೆ ಸ್ಪಂದಿಸಲು ಪೂರಕ ವ್ಯವಸ್ಥೆ ಜಾರಿಗೊಳಿಸುವಂತೆಯೂ ಬ್ಯಾಂಕ್‌ಗಳಿಗೆ ಆರ್‌ಬಿಐ ನಿರ್ದೇಶನ ನೀಡಿದೆ.

(ಲೇಖಕ, ಸುವಿಷನ್ ಹೋಲ್ಡಿಂಗ್ಸ್ ಪ್ರೈ. ಲಿ., ನಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT