ಮುಂಬೈ/ನವದೆಹಲಿ: ಭಾರತವು 2022ರ ಡಿಸೆಂಬರ್‌ನಲ್ಲಿ 20 ಟನ್ ಚಿನ್ನ ಆಮದು ಮಾಡಿಕೊಂಡಿದ್ದು, 2021ರ ಡಿಸೆಂಬರ್‌ಗೆ ಹೋಲಿಸಿದರೆ ಶೇಕಡ 79ರಷ್ಟು ಇಳಿಕೆ ಆಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 2021ರ ಡಿಸೆಂಬರ್‌ನಲ್ಲಿ ಭಾರತವು 95 ಟನ್ ಚಿನ್ನ ಆಮದು ಮಾಡಿಕೊಂಡಿತ್ತು.
ದೇಶದಲ್ಲಿ ಚಿನ್ನದ ದರ ಹೆಚ್ಚಳವಾಗಿದ್ದು ಹಾಗೂ ಬೇಡಿಕೆಯು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದರಿಂದಾಗಿ 2022ರ ಡಿಸೆಂಬರ್ ತಿಂಗಳ ಆಮದು ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಹೇಳಿವೆ.
ಚಿನ್ನದ ಆಮದು ಇಳಿಕೆ ಆಗಿರುವುದು ದೇಶದ ವ್ಯಾಪಾರ ಕೊರತೆ ತಗ್ಗಿಸಲು ಮತ್ತು ರೂಪಾಯಿ ಮೌಲ್ಯ ಚೇತರಿಕೆಗೆ ನೆರವಾಗಲಿದೆ. ಮೌಲ್ಯದ ಲೆಕ್ಕದಲ್ಲಿ ಆಮದು ₹ 38,601 ಕೋಟಿಯಿಂದ ₹ 9,629 ಕೋಟಿಗೆ ಇಳಿಕೆ ಆಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತವು ದೇಶಿ ಬೇಡಿಕೆಯ ಶೇ 90ಕ್ಕೂ ಹೆಚ್ಚಿನ ಪ್ರಮಾಣದ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. 2022ರಲ್ಲಿ ಚಿನ್ನ ಆಮದು ಮೌಲ್ಯವು ₹ 2.98 ಲಕ್ಷ ಕೋಟಿಯಷ್ಟು ಆಗಿದೆ. 2021ರಲ್ಲಿ ₹ 4.55 ಲಕ್ಷ ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು.
ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ಕಂಡಿದ್ದರಿಂದ ಚಿನ್ನದ ಬೆಲೆ ಏರಿಕೆ ಕಾಣತೊಡಗಿತು. ಇದರಿಂದಾಗಿ ಚಿನ್ನದ ರಿಟೇಲ್ ಖರೀದಿಯು ಡಿಸೆಂಬರ್‌ನಲ್ಲಿ ಕಡಿಮೆ ಆಯಿತು ಎಂದು ಕೋಲ್ಕತ್ತದಲ್ಲಿ ಚಿನ್ನದ ಸಗಟು ವ್ಯಾಪಾರ ನಡೆಸುವ ಹರ್ಶದ್ ಅರ್ಜೇರ್ ಹೇಳಿದ್ದಾರೆ.
ಚಿನ್ನದ ದರ ಏರಿಕೆ ಆಗಿದ್ದರಿಂದ ಕೆಲವು ಹೂಡಿಕೆದಾರರು ಚಿನ್ನದ ನಗದೀಕರಣಕ್ಕೆ ಮುಂದಾದರು. ಇದು ಸಹ ಆಮದು ಕಡಿಮೆ ಆಗಲು ಕಾರಣವಾಯಿತು ಎಂದು ಖಾಸಗಿ ಬ್ಯಾಂಕ್‌ನೊಂದಿಗೆ ವಹಿವಾಟು ನಡೆಸುವ ಮುಂಬೈ ಮೂಲದ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.