ಶುಕ್ರವಾರ, ಆಗಸ್ಟ್ 12, 2022
24 °C

‘ಎಥೆನಾಲ್/ಪೆಟ್ರೋಲ್ ಎಂಜಿನ್‌ ಆಯ್ಕೆ: ಶೀಘ್ರವೇ ನಿರ್ಧಾರ’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಎಥೆನಾಲ್‌ ಮತ್ತು ಪೆಟ್ರೋಲ್‌ ಬಳಸಲು ಸಾಧ್ಯವಾಗುವ ಎಂಜಿನ್‌ಗಳನ್ನು ವಾಹನಗಳಲ್ಲಿ ಅಳವಡಿಸುವ ಕುರಿತು ಎಂಟರಿಂದ 10 ದಿನಗಳಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಪರ್ಯಾಯ ಇಂಧನವಾದ ಎಥೆನಾಲ್ ಬೆಲೆ ಪ್ರತಿ ಲೀಟರಿಗೆ ₹ 60ರಿಂದ ₹ 62ರಷ್ಟಿದೆ. ಪೆಟ್ರೋಲ್‌ ದರವು ಲೀಟರಿಗೆ ದೇಶದ ಹಲವು ಭಾಗಗಳಲ್ಲಿ ₹ 100ಕ್ಕಿಂತ ಹೆಚ್ಚಿದೆ. ಎಥೆನಾಲ್ ಬಳಕೆಯಿಂದ ಭಾರತೀಯರಿಗೆ ಪ್ರತಿ ಲೀಟರಿಗೆ ₹ 30ರಿಂದ ₹ 35ರವರೆಗೆ ಉಳಿತಾಯವಾಗಲಿದೆ’ ಎಂದರು.

ಎಥೆನಾಲ್‌ ಬಳಕೆಯಿಂದ ರೈತರಿಗೆ ಅನುಕೂಲ ಆಗುವ ಜತೆಗೆ ದೇಶದ ಆರ್ಥಿಕ ಬೆಳವಣಿಗೆಗೂ ಉತ್ತೇಜನ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಪೆಟ್ರೋಲ್ ಮಾತ್ರ ಬಳಸುವ ಎಂಜಿನ್ ಇರಬಾರದು. ಎಥೆನಾಲ್‌ ಅಥವಾ ಪೆಟ್ರೋಲ್‌ ಇವೆರಡರಲ್ಲಿ ಯಾವುದನ್ನು ಬೇಕಿದ್ದರೂ ಬಳಸಲು ಆಗುವಂತಹ ಎಂಜಿನ್‌ ಇರಬೇಕು ಎಂದು ಸಾರಿಗೆ ಸಚಿವನಾಗಿ ನಾನು ಉದ್ಯಮಕ್ಕೆ ಆದೇಶಿಸಲಿದ್ದೇನೆ. ಇಂತಹ ಆಯ್ಕೆ ಇದ್ದರೆ ಶೇಕಡ 100ರಷ್ಟು ಕಚ್ಚಾ ತೈಲ ಅಥವಾ ಶೇ 100ರಷ್ಟು ಎಥೆನಾಲ್‌ ಬಳಕೆಗೆ ಜನರಿಗೆ ಅವಕಾಶ ಸಿಗಲಿದೆ’ ಎಂದು ಹೇಳಿದ್ದಾರೆ.

ಪೆಟ್ರೋಲ್‌ಗಿಂತಲೂ ಎಥೆನಾಲ್‌ ಉತ್ತಮ ಇಂಧನ. ಕಡಿಮೆ ವೆಚ್ಚದ್ದು ಮತ್ತು ಮಾಲಿನ್ಯ ಮುಕ್ತವೂ ಆಗಿದೆ ಎಂದಿದ್ದಾರೆ.

ಬ್ರೆಜಿಲ್‌, ಕೆನಡಾ ಮತ್ತು ಅಮೆರಿಕದಲ್ಲಿ ಪರ್ಯಾಯ ಇಂಧನದ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಶೇ 100ರಷ್ಟು ಪೆಟ್ರೋಲ್ ಅಥವಾ ಶೇ 100ರಷ್ಟು ಬಯೋ ಎಥೆನಾಲ್‌ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು