ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ: ಶೇ 6.6ರಷ್ಟು ಪ್ರಗತಿ ನಿರೀಕ್ಷೆ

2024–25ರ ಹಣಕಾಸು ವರ್ಷದ ಮುನ್ನೋಟ ಪ್ರಕಟಿಸಿದ ಡೆಲಾಯ್ಟ್‌
Published 26 ಏಪ್ರಿಲ್ 2024, 14:25 IST
Last Updated 26 ಏಪ್ರಿಲ್ 2024, 14:25 IST
ಅಕ್ಷರ ಗಾತ್ರ

ನವದೆಹಲಿ: ಬಳಕೆಯ ವೆಚ್ಚ, ರಫ್ತು ಚೇತರಿಕೆ ಮತ್ತು ಬಂಡವಾಳದ ಹರಿವಿನಿಂದ ದೇಶದ ಜಿಡಿಪಿ ಬೆಳವಣಿಗೆ 2024–25ರ ಹಣಕಾಸು ವರ್ಷದಲ್ಲಿ ಶೇ 6.6ರಷ್ಟು ಇರಲಿದೆ ಎಂದು ಡೆಲಾಯ್ಟ್‌ ಇಂಡಿಯಾ ಅಂದಾಜಿಸಿದೆ.

ಭಾರತದ ಆರ್ಥಿಕ ದೃಷ್ಟಿಕೋನದ ವರದಿಯಲ್ಲಿ ಡೆಲಾಯ್ಟ್‌, ಮಧ್ಯಮ ಆದಾಯದ ವರ್ಗದ ತ್ವರಿತ ಬೆಳವಣಿಗೆಯು, ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದೆ. ಐಷಾರಾಮಿ ಉತ್ಪನ್ನಗಳು ಮತ್ತು ಸೇವೆಗಳಿಗೆ ಬೇಡಿಕೆಯನ್ನು ಸೃಷ್ಟಿಸಿದೆ ಎಂದು ಶುಕ್ರವಾರ ಹೇಳಿದೆ. 

ದೇಶದ ಜಿಡಿಪಿ ಬೆಳವಣಿಗೆಯು 2024-25 ರಲ್ಲಿ ಶೇ 6.6 ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಶೇ 6.75ಕ್ಕೆ ತಲುಪುತ್ತದೆ ಎಂದು ಅಂದಾಜಿಸಿದೆ. ಕೊರೊನಾ ನಂತರದ ಗ್ರಾಹಕರ ವೆಚ್ಚದಲ್ಲಿ ಏರಿಳಿತವಾಗುತ್ತಿದೆ. ಐಷಾರಾಮಿ ಉತ್ಪನ್ನ ಮತ್ತು ಸೇವೆಗಳಿಗೆ ಬೇಡಿಕೆಯು, ಮೂಲಭೂತ ಸರಕುಗಳ ಬೇಡಿಕೆಗಿಂತ ವೇಗವಾಗಿ ಬೆಳೆಯುತ್ತಿದೆ ಎಂದು ಡೆಲಾಯ್ಟ್ ಹೇಳಿದೆ. 

ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶಗಳು ಉಳಿತಾಯವನ್ನು ಹೆಚ್ಚಿಸಬಹುದು ಎಂದು ಹೇಳಿದೆ.

ಚುನಾವಣಾ ಅನಿಶ್ಚಿತತೆಗಳು ಬಗೆಹರಿಯುವುದರಿಂದ ಜಾಗತಿಕ ಆರ್ಥಿಕತೆಯು 2025ರ ವೇಳೆಗೆ ಚೇತರಿಸುವ ನಿರೀಕ್ಷೆಯಿದೆ. ಪಶ್ಚಿಮ ದೇಶದ ಬ್ಯಾಂಕ್‌ಗಳು ದರ ಕಡಿತಗಳನ್ನು ಘೋಷಿಸಬಹುದು. ಭಾರತವು ಸುಧಾರಿತ ಬಂಡವಾಳ ಹರಿವು ಮತ್ತು ರಫ್ತಲ್ಲಿ ಚೇತರಿಕೆ ಕಾಣಬಹುದು ಎಂದು ಡೆಲಾಯ್ಟ್ ಇಂಡಿಯಾದ ಅರ್ಥಶಾಸ್ತ್ರಜ್ಞ ರುಮ್ಕಿ ಮಜುಂದಾರ್ ಹೇಳಿದ್ದಾರೆ.

ಮೂಲಸೌಕರ್ಯಗಳ ಮೇಲಿನ ಹೆಚ್ಚಿದ ಸರ್ಕಾರದ ವೆಚ್ಚದಿಂದ ಭಾರತವು ಸ್ಥಿರವಾದ ಚೇತರಿಕೆಯ ವೇಗವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ. ಹಣದುಬ್ಬರ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ಆಹಾರ ಮತ್ತು ಇಂಧನ ಬೆಲೆಗಳನ್ನು ಹೆಚ್ಚಿಸುತ್ತಿವೆ. ಮಾನ್ಸೂನ್‌ ಮುನ್ಸೂಚನೆಯು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲಿದ್ದು, ಆಹಾರದ ಬೆಲೆಗಳು ಇಳಿಕೆಯಾಗಲಿದೆ ಎಂದು ಮಜುಂದಾರ್ ತಿಳಿಸಿದ್ದಾರೆ.

ಐಷಾರಾಮಿ ಮತ್ತು ಪ್ರೀಮಿಯಂ ಸರಕು ಮತ್ತು ಸೇವೆಗಳ ವಿಭಾಗದಲ್ಲಿ ಭಾರತದ ಖರ್ಚು ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿಯಂತಹ ರಾಷ್ಟ್ರಗಳಿಗಿಂತ ಕಡಿಮೆ ಇದೆ. ಗ್ರಾಹಕರ ಆದಾಯವು ಹೆಚ್ಚಾದಂತೆ ಈ ಅನುಪಾತವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಜುಂದಾರ್ ಹೇಳಿದರು.

ಡೆಲಾಯ್ಟ್‌ನ ಜಿಡಿಪಿ ಬೆಳವಣಿಗೆಯ ಅಂದಾಜು ವಿಶ್ವ ಬ್ಯಾಂಕ್ ಅಂದಾಜಿಗೆ ಹೋಲುತ್ತಿದೆ. ಆದರೂ, ಇದು ಆರ್‌ಬಿಐ ಮತ್ತು ಇತರೆ ಏಜೆನ್ಸಿಗಳ ಅಂದಾಜಿಗಿಂತ ಕಡಿಮೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ 7ರಷ್ಟಿರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.

2024–25ನೇ ಆರ್ಥಿಕ ವರ್ಷ ಭಾರತದ ಜಿಡಿ‍ಪಿ ಅಂದಾಜು (ಶೇಕಡಾವಾರು)

ಏಷ್ಯಾ ಅಭಿವೃದ್ಧಿ ಬ್ಯಾಂಕ್‌; 7

ವಿಶ್ವ ಬ್ಯಾಂಕ್‌; 6.6

ಐಎಂಎಫ್‌; 6.8

ಫಿಚ್‌ ರೇಟಿಂಗ್ಸ್‌; 7

ಮೂಡೀಸ್‌; 6.8

ಎಸ್‌ ಆ್ಯಂಡ್‌ ಪಿ ಗ್ಲೋಬಲ್‌; 6.8

ಮೋರ್ಗಾನ್ ಸ್ಟಾನ್ಲಿ; ಶೇ 6.8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT