ಆರ್‌ಬಿಐ ಸಮ್ಮತಿಗೆ ಮೊದಲೇ ನೋಟು ರದ್ದತಿ ಘೋಷಣೆ

ಬುಧವಾರ, ಮಾರ್ಚ್ 27, 2019
26 °C
‘ಆರ್‌ಟಿಐ’ನಡಿ ಬೆಳಕಿಗೆ ಬಂದ ಸಭಾ ನಡಾವಳಿ

ಆರ್‌ಬಿಐ ಸಮ್ಮತಿಗೆ ಮೊದಲೇ ನೋಟು ರದ್ದತಿ ಘೋಷಣೆ

Published:
Updated:
Prajavani

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಅನುಮೋದನೆಗೂ ಕಾಯದೆ ಪ್ರಧಾನಿ ನರೇಂದ್ರ ಮೋದಿ ಅವರು 2016ರಲ್ಲಿ ಗರಿಷ್ಠ ಮುಖ ಬೆಲೆಯ ನೋಟು ರದ್ದತಿ ನಿರ್ಧಾರ ಘೋಷಿಸಿದ್ದರು ಎನ್ನುವ ಸಂಗತಿಯು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ತಿಳಿದು ಬಂದಿದೆ.

ನೋಟು ರದ್ದತಿ ಘೋಷಣೆ ಹೊರ ಬೀಳುವುದಕ್ಕೂ ಎರಡೂವರೆ ಗಂಟೆಗಳ ಮೊದಲು ಆರ್‌ಬಿಐನ ನಿರ್ದೇಶಕ ಮಂಡಳಿಯು ಸಭೆ ಸೇರಿತ್ತು. ನವೆಂಬರ್‌ 8ರ ಸಂಜೆ 5.30ಕ್ಕೆ ಸಭೆ ಸೇರಿದ್ದ ಸಭೆಯು ಹಣಕಾಸು ಸಚಿವಾಲಯದ ಕರಡು ಪ್ರಸ್ತಾವ ಚರ್ಚೆಗೆ ತೆಗೆದುಕೊಂಡು ಅನುಮೋದನೆ ನೀಡುವ ಮೊದಲೇ ಪ್ರಧಾನಿ ಈ ನಿರ್ಧಾರ ಘೋಷಿಸಿದ್ದರು.

ಆರ್‌ಬಿಐ ತನ್ನ ಅನುಮೋದನೆಯನ್ನು 38 ದಿನಗಳ ನಂತರ (ಡಿಸೆಂಬರ್‌ 16) ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿತ್ತು. ನೋಟು ರದ್ದತಿ ಪರ ಸರ್ಕಾರ ಮಂಡಿಸಿದ್ದ ಬಹುತೇಕ ವಾದಗಳನ್ನು ಮಂಡಳಿಯು ಅನುಮೋದಿಸಿರಲಿಲ್ಲ.

ಮೊದಲ ಬಾರಿಗೆ ವಿವರ ಬಹಿರಂಗ: ಆರ್‌ಟಿಐ ಕಾರ್ಯಕರ್ತ ವೆಂಕಟೇಶ್‌ ನಾಯಕ್‌ ಅವರು, ನಿರ್ದೇಶಕ ಮಂಡ
ಳಿಯ ಸಭಾ ನಡಾವಳಿಯ ಟಿಪ್ಪಣಿಗಳ ಬಗ್ಗೆ ವಿವರ ನೀಡಲು ಕೇಂದ್ರೀಯ ಬ್ಯಾಂಕ್‌ಗೆ ಮನವಿ ಮಾಡಿಕೊಂಡಿದ್ದರು. ಆರಂಭದಲ್ಲಿ ಆರ್‌ಬಿಐ ಈ ಎಲ್ಲ ವಿವರಗಳನ್ನು ನೀಡಲು ನಿರಾಕರಿಸಿತ್ತು. ಈಗ ಇದೇ ಮೊದಲ ಬಾರಿಗೆ ಸಭೆಯ ವಿವರಗಳನ್ನು ಬಹಿರಂಗಪಡಿಸಿದೆ.

ಕಪ್ಪು ಹಣಕ್ಕೆ ಕಡಿವಾಣ ಹಾಕುವ, ಆರ್ಥಿಕತೆಯ ಬೆಳವಣಿಗೆಯ ದರಕ್ಕಿಂತ ಚಲಾವಣೆಯಲ್ಲಿದ್ದ ಹೆಚ್ಚುವರಿ ನೋಟುಗಳ ಪ್ರಮಾಣ ತಗ್ಗಿಸುವ, ಪರ್ಯಾಯ ಆರ್ಥಿಕತೆ ಮಟ್ಟ ಹಾಕಲು ಕರಡು ಪ್ರಸ್ತಾವನೆಯಲ್ಲಿ ಹಣಕಾಸು ಸಚಿವಾಲಯ ನೀಡಿದ್ದ ಬಹುತೇಕ ಕಾರಣಗಳನ್ನು ಆರ್‌ಬಿಐ ಮಂಡಳಿಯು ಒಪ್ಪಿಕೊಂಡಿರಲಿಲ್ಲ.

ಕಪ್ಪು ಹಣವು ಚಲಾವಣೆಯಲ್ಲಿ ಇರುವ ನೋಟುಗಳ ಬದಲಿಗೆ ಹೆಚ್ಚಾಗಿ ರಿಯಲ್‌ ಎಸ್ಟೇಟ್‌ ವಹಿವಾಟು ಮತ್ತು  ಚಿನ್ನದ ರೂಪದಲ್ಲಿ ಇದೆ. ಹೀಗಾಗಿ ನೋಟು ರದ್ದತಿಯು ಉದ್ದೇಶಿತ ಪರಿಣಾಮ ಬೀರುವುದಿಲ್ಲ. ಇದರಿಂದ ಆರ್ಥಿಕ ವೃದ್ಧಿ ದರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂಬುದು ಆರ್‌ಬಿಐ ನಿರ್ದೇಶಕರ ಅಭಿಪ್ರಾಯವಾಗಿತ್ತು.

ನೋಟು ರದ್ದತಿ ನಿರ್ಧಾರ ಶ್ಲಾಘನೀಯ ಎನ್ನುವ ಅಸ್ಪಷ್ಟ ಉಲ್ಲೇಖವೂ ಸಭೆಯ ಟಿಪ್ಪಣಿಯಲ್ಲಿ ಇದೆ. ಆದರೆ, ಈ ಬಗ್ಗೆ  ಹೆಚ್ಚಿನ ವಿವರಣೆ ಇಲ್ಲ. ಈ ನಿರ್ಧಾರದಿಂದ ಹಣಕಾಸು ಸೇರ್ಪಡೆಯ ಉದ್ದೇಶ ಸಾಧಿಸಬಹುದಾಗಿದೆ ಎಂದೂ ಉಲ್ಲೇಖಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !