ಮಂಗಳವಾರ, ನವೆಂಬರ್ 12, 2019
28 °C
ಆನ್‌ಲೈನ್‌ ಸಮೀಕ್ಷೆಯಲ್ಲಿ ಶೇ 33 ರಷ್ಟು ಜನರ ಅಭಿಪ್ರಾಯ

ಮಂದಗತಿ ಆರ್ಥಿಕತೆಗೆ ನೋಟು ರದ್ದತಿ ಕಾರಣ

Published:
Updated:
Prajavani

ನವದೆಹಲಿ : ದೇಶಿ ಆರ್ಥಿಕ ಪ್ರಗತಿಯು ಸದ್ಯಕ್ಕೆ ಮಂದಗತಿಯಲ್ಲಿ ಸಾಗಿರುವುದು ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯ ಅತಿದೊಡ್ಡ ನಕಾರಾತ್ಮಕ ಪರಿಣಾಮವಾಗಿದೆ ಎಂದು ಸಮೀಕ್ಷೆಯೊಂದರಲ್ಲಿ ಭಾಗವಹಿಸಿದ್ದ ಒಂದು ಮೂರಾಂಶದಷ್ಟು (ಶೇ 33) ಜನರು ಅಭಿಪ್ರಾಯಪಟ್ಟಿದ್ದಾರೆ.

ಮೂರು ವರ್ಷಗಳ (2016ರ ನವೆಂಬರ್ 8) ಹಿಂದೆ ಜಾರಿಗೆ ತರಲಾಗಿದ್ದ ನೋಟು ರದ್ದತಿ ನಿರ್ಧಾರವು ಅಸಂಘಟಿತ ವಲಯದ ಕೆಲಸಗಾರರ ಆದಾಯ ನಷ್ಟಕ್ಕೆ ಕಾರಣವಾಗಿದೆ ಎಂದು ಶೇ 32ರಷ್ಟು ಜನರು ತಿಳಿಸಿದ್ದಾರೆ. ಶೇ 28 ಜನರ ಪ್ರಕಾರ, ಇದು ಆರ್ಥಿಕತೆ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಿಲ್ಲ. ಆನ್‌ಲೈನ್‌ ತಾಣ ‘ಲೋಕಲ್‌ ಸರ್ಕಲ್ಸ್‌’ ನಡೆಸಿದ ಸಮೀಕ್ಷೆಯಲ್ಲಿ ಈ ವಿವರಗಳಿವೆ.

ದೇಶದಾದ್ಯಂತ 50 ಸಾವಿರ ಜನರನ್ನು ಸಂಪರ್ಕಿಸಿ ಈ ಸಮೀಕ್ಷೆ ಸಿದ್ಧಪಡಿಸಲಾಗಿದೆ. ನೋಟು ರದ್ದತಿ ನಿರ್ಧಾರದ ಮೂರನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ಸಮೀಕ್ಷೆ ಬಿಡುಗಡೆ ಮಾಡಲಾಗಿದೆ.

ತೆರಿಗೆ ಪಾವತಿ ತಪ್ಪಿಸುತ್ತಿದ್ದ ಅಸಂಖ್ಯ ಜನರನ್ನು ತೆರಿಗೆ ವ್ಯಾಪ್ತಿಗೆ ತಂದಿರುವುದು ಈ ನಿರ್ಧಾರದ ಪ್ರಮುಖ ಪ್ರಯೋಜನವಾಗಿದೆ ಎಂದು ಶೇ 42ರಷ್ಟು ಜನರು ಹೇಳಿಕೊಂಡಿದ್ದಾರೆ. ವ್ಯವಸ್ಥೆಯಲ್ಲಿನ ಕಪ್ಪು ಹಣದ ಹಾವಳಿಯನ್ನು ತಗ್ಗಿಸಿರುವುದಾಗಿ ಶೇ 21 ಜನರು ಹೇಳಿದ್ದಾರೆ. ನೇರ ತೆರಿಗೆ ಸಂಗ್ರಹ ಹೆಚ್ಚಿಸಿದೆ ಎಂಬುದು ಶೇ 12ರಷ್ಟು ಜನರ ಅಭಿಮತವಾಗಿದೆ.

**
₹ 15.41 ಲಕ್ಷ ಕೋಟಿ: ರದ್ದಾದ ₹ 500, ₹ 1,000 ನೋಟುಗಳ ಮೊತ್ತ
₹ 15.31 ಲಕ್ಷ ಕೋಟಿ: ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿದ ನೋಟುಗಳ ಮೊತ್ತ
₹ 10,720 ಕೋಟಿ: ಬ್ಯಾಂಕಿಂಗ್‌ ವ್ಯವಸ್ಥೆಗೆ ಬಾರದ ರದ್ದಾದ ನೋಟುಗಳ ಮೊತ್ತ

ಪ್ರತಿಕ್ರಿಯಿಸಿ (+)