ಸೋಮವಾರ, ಜೂಲೈ 6, 2020
23 °C
2020–21ನೇ ಹಣಕಾಸು ವರ್ಷಕ್ಕೆ ಎಂಜಿ ಮೋಟರ್‌ ಅಂದಾಜು

ವಾಹನ ಮಾರಾಟ ಶೇ 25 ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ ವೈರಸ್‌ ಪರಿಣಾಮದಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶಿ ವಾಹನ ಮಾರಾಟ ಶೇ 25ರಷ್ಟು ಇಳಿಕೆ ಕಾಣಲಿದೆ ಎಂದು ಎಂಜಿ ಮೋಟರ್‌ ಇಂಡಿಯಾ ಕಂಪನಿ  ಹೇಳಿದೆ.

2019–20ನೇ ಹಣಕಾಸು ವರ್ಷದಲ್ಲಿ ಮಾರಾಟ ಇಳಿಮುಖವಾಗಿತ್ತು. ಕೊರೊನಾದಿಂದ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿ ಇರುವುದು 2020–21ರಲ್ಲಿ ಖರೀದಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಆರೋಗ್ಯ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು ಏಪ್ರಿಲ್‌–ಜೂನ್‌ ಅವಧಿಯಲ್ಲಿ ವಾಹನ ಮಾರಾಟ ಶೇ 40–50ರಷ್ಟು ಕುಸಿತ ಕಾಣಲಿದೆ ಎಂದೂ ಅಂದಾಜು ಮಾಡಿದೆ.

‘ಉದ್ಯಮದ ಪಾಲಿಗೆ ತೀವ್ರ ಸಂಕಷ್ಟದ ಸಮಯ ಇದಾಗಿದ್ದು, ಗರಿಷ್ಠ ಶೇ 25ರಷ್ಟು ಮಾರಾಟ ಕುಸಿತವಾಗಲಿದೆ. ಒಂದೊಮ್ಮೆ ಸ್ವಲ್ಪ ಚೇತರಿಕೆ ಕಂಡರೂ ಇಳಿಕೆ ಪ್ರಮಾಣ ಶೇ 11ಕ್ಕೆ ಬರಲಿದೆ’ ಎಂದು ಎಂಜಿ ಮೋಟರ್‌ ಇಂಡಿಯಾದ ಅಧ್ಯಕ್ಷ ರಾಜೀವ್‌ ಛಬ್ಬಾ ತಿಳಿಸಿದ್ದಾರೆ.

ಜೂನ್‌ಗೆ ಆಶಾಕಿರಣ?: ‘ಜೂನ್‌ ಅಂತ್ಯದ ವೇಳೆಗೆ ಬದುಕಿನ ಆಶಾಕಿರಣ ಗೋಚರಿಸಲಿದೆ. ಎಲ್ಲಾ ಬಿಕ್ಕಟ್ಟು ಅಂತ್ಯವಾಗುವುದನ್ನು ನೋಡಬಹುದು. ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಎಲ್ಲಾ ಸಮಸ್ಯೆಗಳು ಅಂತ್ಯವಾಗುವ ಭರವಸೆ ಇದೆ’ ಎಂದಿದ್ದಾರೆ.

‘ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಆರ್ಥಿಕತೆಯು ಸಾಮಾನ್ಯ ಸ್ಥಿತಿಯೆಡೆಗೆ ಮರಳಲು ಆರಂಭಿಸಲಿದೆ. ಶೇ 50ರಷ್ಟು ಅಥವಾ ಶೇ 70–80ರಷ್ಟು ಸಹಜ ಸ್ಥಿತಿ  ಮರಳಬಹುದು. ಇಂತಹ ಸಂದರ್ಭದಲ್ಲಿ ವಾಹನ ಉದ್ಯಮವನ್ನೂ ಸೇರಿಕೊಂಡು ಬಹುತೇಕ ಎಲ್ಲಾ ಕೈಗಾರಿಕೆಗಳಿಗೂ ಬೇಡಿಕೆ ಸೃಷ್ಟಿಸುವುದು ಅತಿ ದೊಡ್ಡ ಸವಾಲಾಗಲಿದೆ. ಏಕೆಂದರೆ ಗ್ರಾಹಕರು ಖರೀದಿಸುವ ಮನಸ್ಥಿತಿಗೆ ಬಂದಿರುವುದಿಲ್ಲ. ಅದರಲ್ಲಿಯೂ ಕಾರ್‌ ತರಹದ ವಸ್ತುಗಳನ್ನು ಖರೀದಿಸುವ ಮನಸ್ಥಿತಿಯೂ ಅವರಿಗೆ ಇರುವುದಿಲ್ಲ. ಈ ಸಂದರ್ಭದಲ್ಲಿ ಉದ್ಯಮವಲಯಕ್ಕೆ ಸರ್ಕಾರದ ಬೆಂಬಲದ ಅಗತ್ಯವಿದೆ.

‘ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಸಾಲು ಸಾಲಾಗಿ ಹಬ್ಬಗಳು ಬರಲಿವೆ. ಹೀಗಾಗಿ ಇಂತಹ ಅವಧಿಯಲ್ಲಿ ಸಮಸ್ಯೆಗಳೆಲ್ಲವೂ ಬಗೆಹರಿಯುವ ಭರವಸೆ ಇದೆ. ಹಬ್ಬದ ಸಂದರ್ಭದಲ್ಲಿ ಕನಿಷ್ಠ ಪಕ್ಷ ಕಳೆದ ವರ್ಷದ ಮಟ್ಟಕ್ಕೆ ಉದ್ದಿಮೆ ಬೆಳವಣಿಗೆ ಕಾಣಬೇಕು. ಆದರೆ ಕಳೆದ ವರ್ಷವೇ ಉದ್ದಿಮೆಯು ಉತ್ತಮ ಬೆಳವಣಿಗೆ ಸಾಧಿಸಿಲ್ಲ.

‘ಇಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ನಾವು ನಮ್ಮ ಸಿಬ್ಬಂದಿಯ ಹಿತರಕ್ಷಣೆ ಮಾಡುತ್ತಿದ್ದೇವೆ. ಒಂದೇ ಒಂದು ಉದ್ಯೋಗ ಕಡಿತವನ್ನೂ ಮಾಡಿಲ್ಲ. ನಮ್ಮ ಕಂಪನಿಯಲ್ಲಿರುವ ಎಲ್ಲಾ ಸಿಬ್ಬಂದಿಯೂ ಸುರಕ್ಷಿತವಾಗಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ಮಾರಾಟದಲ್ಲಿ ಇಳಿಕೆ (2019–20)

ಒಟ್ಟಾರೆ ಮಾರಾಟದಲ್ಲಿ ಶೇ 17.96ರಷ್ಟು ಇಳಿಕೆಯಾಗಿದೆ. ಪ್ರಯಾಣಿಕ ವಾಹನ ಮಾರಾಟದಲ್ಲಿ ಶೇ 17.82 ಇಳಿಕೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು