ಸೋಮವಾರ, ಆಗಸ್ಟ್ 2, 2021
23 °C

ಪ್ರಜಾವಾಣಿ ಸಂವಾದ: ಕೊರೊನಾ ಹೊಡೆತಕ್ಕೆ ನಲುಗಿರುವ ಸಣ್ಣ ಉದ್ಯಮಗಳ ಚೇತರಿಕೆ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಆರ್ಥಿಕತೆಗೆ ಸಣ್ಣ ಉದ್ಯಮಗಳು ಹೆಚ್ಚಿನ ಕೊಡುಗೆ ನೀಡುತ್ತಿವೆ. ರಾಜ್ಯದಲ್ಲಿ 8.72 ಲಕ್ಷಕ್ಕೂ ಅಧಿಕ ಸಣ್ಣ ಕೈಗಾರಿಕೆಗಳಿದ್ದು, ಸುಮಾರು 2.62 ಕೋಟಿ ಜನರಿಗೆ ಜೀವನಾಧಾರವಾಗಿವೆ. ಇಂತಹ ಉದ್ಯಮಗಳು ಕೋವಿಡ್‌ ಸಾಂಕ್ರಾಮಿಕದ ಹೊಡೆತಕ್ಕೆ ಸಿಲುಕಿ ತತ್ತರಿಸಿವೆ.

ಸಣ್ಣ ಉದ್ಯಮಗಳನ್ನು ಮುಚ್ಚುವ ಅಪಾಯದಿಂದ ಪಾರುಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ ಇದುವರೆಗೂ ಸೂಕ್ತ ಸ್ಪಂದನೆ ಬಂದಿಲ್ಲ ಎಂದು ರಾಜ್ಯದ ವಾಣಿಜ್ಯ ಸಂಘಟನೆಗಳು ಅಸಮಾಧಾನ ತೋಡಿಕೊಂಡಿವೆ. ಕೊರೊನಾದಿಂದಾಗಿ ಸಣ್ಣ ಉದ್ಯಮಗಳು ಯಾವ ಸಮಸ್ಯೆ ಎದುರಿಸುತ್ತಿವೆ, ಸರ್ಕಾರದಿಂದ ನಿರೀಕ್ಷಿಸುತ್ತಿರುವ ಪರಿಹಾರ ಕ್ರಮಗಳು ಯಾವುವು ಎನ್ನುವ ಕುರಿತು ‘ಪ್ರಜಾವಾಣಿ’ ಬುಧವಾರ ನಡೆಸಿದ ಫೇಸ್‌ಬುಕ್‌ ಸಂವಾದದಲ್ಲಿ ಮೂವರು ಅತಿಥಿಗಳು ಹಂಚಿಕೊಂಡಿರುವ ಅಭಿಪ್ರಾಯದ ಸಂಕ್ಷಿಪ್ತ ರೂಪ ಇಲ್ಲಿದೆ.

***

ವೈಜ್ಞಾನಿಕ ಚಿಂತನೆಯ ಕೊರತೆ
ವೈಜ್ಞಾನಿಕವಾಗಿ ಚಿಂತನೆ ನಡೆಸದೆಯೇ ರಾಜ್ಯ ಸರ್ಕಾರವು ಲಾಕ್‌ಡೌನ್‌ ನಿರ್ಧಾರ ತೆಗೆದುಕೊಂಡಿದ್ದೇ ದೊಡ್ಡ ಸಮಸ್ಯೆಯಾಗಿದೆ. ಲಾಕ್‌ಡೌನ್‌ನಿಂದಾಗಿ ಮಾರಾಟ ಮತ್ತು ಖರೀದಿಯ ನಡುವಿನ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಸಣ್ಣ ಉದ್ಯಮಗಳು ಹೆಚ್ಚಿನ ಸಂಕಷ್ಟ ಎದುರಿಸುತ್ತಿವೆ. ರಾಜಕೀಯ ಇಚ್ಛಾಶಕ್ತಿಯ ಕೊರತೆ, ವಾಣಿಜ್ಯ ಸಂಘಟನೆಗಳ ಸಲಹೆ, ಅಭಿಪ್ರಾಯ ಪಡೆಯದೇ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಉದ್ಯಮಗಳ ಸಂಕಷ್ಟಕ್ಕೆ ಕಾರಣ. ಸರ್ಕಾರದ ಯೋಜನೆಗಳಿಗೆ ಬ್ಯಾಂಕ್‌ಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಕಳೆದ ವರ್ಷ ಘೋಷಿಸಿದ್ದ ತುರ್ತು ಸಾಲ ಖಾತರಿ ಯೋಜನೆಯು ನಿಜವಾಗಿಯೂ ಸಂಕಷ್ಟದಲ್ಲಿರುವ ಉದ್ಯಮಗಳನ್ನು ತಲುಪಿಯೇ ಇಲ್ಲ.
- ಆರ್. ಶಿವಕುಮಾರ್, ಅಧ್ಯಕ್ಷ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ

***

ಶೀಘ್ರವೇ ಪರಿಹಾರ ಬರಲಿದೆ
ಕಳೆದ ವರ್ಷ ಕೇಂದ್ರ ಸರ್ಕಾರವು ಎಂಎಸ್‌ಎಂಇ ವಲಯಕ್ಕೆ ₹ 3 ಲಕ್ಷ ಕೋಟಿ ಮೊತ್ತದ ತುರ್ತು ಸಾಲ ಖಾತರಿ ಯೋಜನೆ ಜಾರಿಗೊಳಿಸಿತ್ತು. ಎಲ್ಲಾ ‌ಎಂಎಸ್‌ಎಂಇಗಳಿಗೂ ಇದರ ಪ್ರಯೋಜನ ದೊರೆತಿದೆ. ಒಬ್ಬ ಉದ್ಯಮಿಯಾಗಿ ನನಗೂ ₹ 4.3 ಕೋಟಿ ಬಂದಿದೆ. ಹೆಚ್ಚಿನ ನಷ್ಟಕ್ಕೆ ಒಳಗಾಗಿರುವ ವಲಯಗಳಿಗೆ ಕೆ.ವಿ. ಕಾಮತ್‌ ಸಮಿತಿಯ ಶಿಫಾರಸಿನ ಮೇರೆಗೆ ಸರ್ಕಾರವು ಈ ವರ್ಷವೂ ಪರಿಹಾರ ನೀಡಲಿದೆ.
-ಪ್ರದೀಪ್‌ ಜಿ. ಪೈ, ಸಂಚಾಲಕ, ಬಿಜೆಪಿ ರಾಜ್ಯ ಕೈಗಾರಿಕಾ ಪ್ರಕೋಷ್ಠ

***

‘ಸಣ್ಣ ಉದ್ಯಮಕ್ಕೂ ಅವಕಾಶ ಕೊಡಿ’
ದೊಡ್ಡ ಕೈಗಾರಿಕೆಗಳಿಗೆ ಅಗತ್ಯವಾದ ಉತ್ಪನ್ನ ಪೂರೈಕೆ ಮಾಡುವುದೇ ಎಂಎಸ್‌ಎಂಇಗಳು. ಆದರೆ ರಾಜ್ಯದಲ್ಲಿ ಎಂಎಸ್‌ಎಂಇಗಳಿಗೆ ಚಟುವಟಿಕೆ ನಡೆಸಲು ಅನುಮತಿ ಇಲ್ಲ. ದೊಡ್ಡ ಕೈಗಾರಿಕೆಗಳಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಇದು ರಾಜ್ಯ ಸರ್ಕಾರದ ತಪ್ಪು ನಿರ್ಧಾರ. ಸರ್ಕಾರದ ಈಗಿನ ನಿರ್ಧಾರದಿಂದಾಗಿ ದೊಡ್ಡ ಕೈಗಾರಿಕೆಗಳು ಬೇರೆ ರಾಜ್ಯಗಳಿಂದ ಉತ್ಪನ್ನ ತರಿಸಿಕೊಳ್ಳಲು ಆರಂಭಿಸಿವೆ. ಹೀಗಾದರೆ ರಾಜ್ಯದಲ್ಲಿನ ಸಣ್ಣ ಉದ್ಯಮಗಳು ಬಾಗಿಲು ಮುಚ್ಚುವುದರಲ್ಲಿ ಸಂಶಯ ಇಲ್ಲ. ಹೀಗಾಗಿ, ಮುಚ್ಚುವುದಿದ್ದರೆ ಎಲ್ಲಾ ಕೈಗಾರಿಕೆಗಳನ್ನೂ ಮಚ್ಚಿ, ಇಲ್ಲದಿದ್ದರೆ ಎಲ್ಲವನ್ನೂ ತೆರೆಯಲು ಅವಕಾಶ ನೀಡಿ.
-ಕೆ.ಬಿ. ಅರಸಪ್ಪ, ಅಧ್ಯಕ್ಷ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು