ಶನಿವಾರ, ನವೆಂಬರ್ 28, 2020
17 °C

ಆರ್ಥಿಕತೆ ವೇಗವಾಗಿ ಸುಧಾರಿಸಿಕೊಳ್ಳುತ್ತಿದೆ: ಆರ್ಥಿಕ ತಜ್ಞೆ ಆಶಿಮಾ ಗೋಯಲ್

ಪಿಟಿಐ Updated:

ಅಕ್ಷರ ಗಾತ್ರ : | |

ಆರ್ಥಿಕತೆ ಚೇತರಿಕೆ– ಪ್ರಾತಿನಿಧಿಕ ಚಿತ್ರ

ನವದೆಹಲಿ: ‘ಭಾರತದ ಆರ್ಥಿಕತೆಯು ವೇಗವಾಗಿ ಸುಧಾರಿಸಿಕೊಳ್ಳುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೂರು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಸಕಾರಾತ್ಮಕ ಹಾದಿಗೆ ಮರಳಲಿದೆ’ ಎಂದು ಆರ್ಥಿಕತಜ್ಞೆ ಆಶಿಮಾ ಗೋಯಲ್‌ ಹೇಳಿದ್ದಾರೆ.

ಕೋವಿಡ್‌–19 ಸಾಂಕ್ರಾಮಿಕದ ನಿರ್ವಹಣೆ ಹಾಗೂ ಹಂತ ಹಂತವಾಗಿ ಆರ್ಥಿಕ ಚಟುವಟಿಕೆಗಳನ್ನು ಅನ್‌ಲಾಕ್‌ ಮಾಡುತ್ತಿರುವುದರಿಂದಾಗಿ ಕೋವಿಡ್‌–19 ಪ್ರಕರಣಗಳು ತೀವ್ರ ಮಟ್ಟಕ್ಕೆ ಏರಿಕೆಯಾಗದಂತೆ ತಡೆಯಲು ನೆರವಾಗುತ್ತಿವೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸದಸ್ಯರಲ್ಲಿ ಆಶಿಮಾ ಅವರು ಸಹ ಒಬ್ಬರಾಗಿದ್ದಾರೆ.

‘ಆರ್ಥಿಕ ಬೆಳವಣಿಗೆಯ ಕುರಿತು ವಿವಿಧ ಸಂಸ್ಥೆಗಳು ತಾವು ಮಾಡಿದ್ದ ಅಂದಾಜನ್ನು ಪರಿಷ್ಕರಿಸುತ್ತಿವೆ. ಅನ್‌ಲಾಕ್‌ 4 ಆರಂಭವಾದಾಗಿನಿಂದ ಸರಕು ಮತ್ತು ಸೇವೆಗಳ ಪೂರೈಕೆ ವ್ಯವಸ್ಥೆಯಲ್ಲಿ ಆಗಿದ್ದ ಅಡೆತಡೆಗಳು ನಿವಾರಣೆ ಆಗುತ್ತಿದ್ದು, ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತಿವೆ. ಮೂರು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯು ಸಕಾರಾತ್ಮಕ ಹಾದಿಗೆ ಮರಳಲಿದೆ. ಆರ್ಥಿಕತೆಯ ಸುಧಾರಣೆಗೆ ಘೋಷಿಸಿರುವ ಕ್ರಮಗಳು ಪ್ರಗತಿಯಲ್ಲಿದ್ದು, ದೀರ್ಘಾವಧಿಯಲ್ಲಿ ಸುಸ್ಥಿರ ಪ್ರಗತಿಗೆ ಕಾರಣವಾಗಲಿವೆ’ ಎನ್ನುವುದು ಅವರ ಅಭಿಪ್ರಾಯವಾಗಿದೆ.

‘ಚಿಲ್ಲರೆ ಹಣದುಬ್ಬರ ಗರಿಷ್ಠ ಮಟ್ಟದಲ್ಲಿ ಇದೆಯಲ್ಲಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅಕಾಲಿಕ ಮಳೆ ಮತ್ತು ಲಾಕ್‌ಡೌನ್‌ನಿಂದ ಪೂರೈಕೆ ವ್ಯವಸ್ಥೆಯಲ್ಲಿ ತೊಡಕುಂಟಾಗಿದೆ. ಇದರಿಂದಾಗಿ ಚಿಲ್ಲರೆ ಹಣದುಬ್ಬರ ಗರಿಷ್ಠ ಮಟ್ಟದಲ್ಲಿದೆ. ಕೆಲವು ದೀರ್ಘಾವಧಿಯ ಬದಲಾವಣೆಗಳು ಹಣದುಬ್ಬರವನ್ನು ತಗ್ಗಿಸಲಿವೆ. ವರಮಾನ ಇಳಿಮುಖವಾಗಿದ್ದರೂ ಬೇಡಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ಹೆಚ್ಚು ವೆಚ್ಚ ಮಾಡುತ್ತಿದೆ. ವಿತ್ತೀಯ ಕೊರತೆಯು ಈಗಾಗಲೇ ಬಜೆಟ್ ಅಂದಾಜನ್ನೂ ಮೀರಿದೆ. ಕೇಂದ್ರ ಮತ್ತು ರಾಜ್ಯಗಳ ವಿತ್ತೀಯ ಕೊರತೆಯು ಒಟ್ಟಾರೆ ಶೇ 12ನ್ನೂ ಮೀರುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು