ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಎಲ್‌ಎಸ್‌ಎಸ್‌ ಹೂಡಿಕೆ ಲಾಭದಾಯಕ?

Last Updated 19 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಷೇರು ಆಧಾರಿತ ಉಳಿತಾಯ ಯೋಜನೆಗಳಲ್ಲಿ (ಇಎಲ್‌ಎಸ್‌ಎಸ್‌) ಎಷ್ಟು ಮತ್ತು ಯಾಕೆ ಹೂಡಿಕೆ ಮಾಡಬೇಕು– ಅನೇಕ ಹೂಡಿಕೆದಾರರಲ್ಲಿ ಈ ಪ್ರಶ್ನೆ ಮೂಡಿದರೂ ಉತ್ತರ ಸುಲಭವಾಗಿ ಲಭಿಸುವುದಿಲ್ಲ. ಎಷ್ಟು ಹೂಡಿಕೆ ಮಾಡಬೇಕು ಎಂಬ ವಿಚಾರವನ್ನು ಆನಂತರ ಚರ್ಚಿಸೋಣ, ಯಾಕೆ ಹೂಡಿಕೆ ಮಾಡಬೇಕು ಎಂಬ ಪ್ರಶ್ನೆಗೆ ಮೊದಲ ಉತ್ತರವೆಂದರೆ ಇದರಲ್ಲಿ ಮಾಡಿರುವ ಹೂಡಿಕೆಗೆ ಆದಾಯ ತೆರಿಗೆ ಸೆಕ್ಷನ್‌ 80ರ ಅಡಿ ತೆರಿಗೆ ವಿನಾಯಿತಿ (ಗರಿಷ್ಠ ₹ 1.50 ಲಕ್ಷಕ್ಕೆ) ಇದೆ ಎಂಬುದು.

ಇನ್ನೊಂದು ಅಂಶವೆಂದರೆ, ಈ ಹೂಡಿಕೆಗೆ ಮೂರು ವರ್ಷಗಳ ಲಾಕ್‌ ಇನ್‌ ಅವಧಿ ಮಾತ್ರ ಇರುತ್ತದೆ (ಹೂಡಿಕೆ ಮಾಡಿದ ಮೊತ್ತವನ್ನು ಮೂರು ವರ್ಷಕ್ಕೂ ಮುನ್ನ ಹಿಂತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ). ಯುಲಿಪ್‌, ಪಿಪಿಎಫ್‌, ದೀರ್ಘಾವಧಿ ಠೇವಣಿಗಳಿಗೆ ಹೋಲಿಸಿದರೆ ಇದರ ಲಾಕ್‌ ಇನ್‌ ಅವಧಿ ಕಡಿಮೆ. ಮೂರನೆಯ ಕಾರಣ; ಈ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಲು ಅವಕಾಶ ಇರುತ್ತದೆ ಎಂಬುದು. ಆದ್ದರಿಂದ ಹೂಡಿಕೆ ಆರಂಭಿಸುವವರಿಗೆ ‘ಇಎಲ್‌ಎಸ್‌ಎಸ್‌’ ಮಾರ್ಗ ಒಳ್ಳೆಯ ಆಯ್ಕೆ ಎಂಬುದರಲ್ಲಿ ಸಂದೇಹವಿಲ್ಲ.

ಗರಿಷ್ಠ ಮಿತಿ ಎಷ್ಟು?

ತೆರಿಗೆ ವಿನಾಯ್ತಿ ಇರುವುದರಿಂದ ಇಎಲ್‌ಎಸ್‌ಎಸ್‌ ಹೂಡಿಕೆಗೆ ಗರಿಷ್ಠ ಮಿತಿಯೂ ಇರಬಹುದೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಈ ಹೂಡಿಕೆಗೆ ಗರಿಷ್ಠ ಮಿತಿ ಎಂಬುದಿಲ್ಲ. ಎಷ್ಟು ಹಣವನ್ನಾದರೂ ಹೂಡಿಕೆ ಮಾಡಬಹುದು. ಆದರೆ ತೆರಿಗೆ ವಿನಾಯ್ತಿ ಅನ್ವಯವಾಗುವುದು ₹ 1.50 ಲಕ್ಷಕ್ಕೆ ಮಾತ್ರ.

ವಾಸ್ತವದಲ್ಲಿ ಈಗಷ್ಟೇ ತೆರಿಗೆ ವ್ಯಾಪ್ತಿಗೆ ಒಳಪಟ್ಟವರಿಗೆ ಇದು ಅತ್ಯುತ್ತಮ ಹೂಡಿಕಾ ವಿಧಾನವೇ ಸರಿ. ಯಾಕೆಂದರೆ ತೆರಿಗೆ ಉಳಿತಾಯ ಆಗುವುದರ ಜೊತೆಗೆ ಒಳ್ಳೆಯ ಗಳಿಕೆಗೂ ಅವಕಾಶ ಲಭಿಸುತ್ತದೆ. ಆದರೆ ಸೆಕ್ಷನ್‌ 80ಸಿ ಅಡಿ ಲಭ್ಯವಾಗುವ ವಿನಾಯಿತಿ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವುದು ಬುದ್ಧಿವಂತಿಕೆ ಎನಿಸುವುದೇ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

‘ಇಎಲ್‌ಎಸ್‌ಎಸ್‌’ ಬಗ್ಗೆ ಇನ್ನೊಂದು ಆಸಕ್ತಿದಾಯಕ ವಿಚಾರವಿದೆ. ಅದೆಂದರೆ, ಹೂಡಿಕೆಗೆ ಮೂರು ವರ್ಷಗಳ ಲಾಕ್‌ ಇನ್‌ ಅವಧಿ ಇರುವುದರಿಂದ ಫಂಡ್‌ ಮ್ಯಾನೇಜರ್‌ಗಳಿಗೆ ದೀರ್ಘ ಅವಧಿಯ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಮ್ಯಾನೇಜರ್‌ಗಳು ಹಾಗೂ ಹೂಡಿಕೆದಾರರಿಗೆ ಉದ್ದೇಶಿತ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ನೋಡಿದರೆ ‘ಇಎಲ್‌ಎಸ್‌ಎಸ್‌’ನಲ್ಲಿ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡುವುದು ಒಳ್ಳೆಯದು ಎನಿಸುವುದು ಸಹಜ.

ನಿಮ್ಮ ಬಳಿ ₹ 2.25 ಲಕ್ಷ ಇದೆ ಎಂದಿಟ್ಟುಕೊಳ್ಳೋಣ. ಅಷ್ಟೂ ಹಣವನ್ನು ‘ಇಎಲ್‌ಎಸ್‌ಎಸ್‌’ನಲ್ಲಿ ಹೂಡಿಕೆ ಮಾಡಿದರೆ, ₹ 1.50 ಲಕ್ಷಕ್ಕೆ ಮಾತ್ರ ತೆರಿಗೆ ವಿನಾಯಿತಿ ಲಭ್ಯವಾಗುತ್ತದೆ. ಉಳಿದ ಹಣಕ್ಕೂ ಹೆಚ್ಚಿನ ಆದಾಯ ಬರುತ್ತದೆ ಎಂದು ಭಾವಿಸಬಹುದು. ಆದರೆ ಹೂಡಿಕೆಯ ಬಗ್ಗೆ ಯೋಚನೆ ಮಾಡುವ ವಿಧಾನ ಇದಲ್ಲ.

ನಿಮಗೆ ತೆರಿಗೆ ವಿನಾಯಿತಿ ಲಭಿಸುತ್ತದೋ ಇಲ್ಲವೋ, ಆದರೆ ‘ ಇಎಲ್‌ಎಸ್‌ಎಸ್‌’ನಲ್ಲಿ ಮಾಡಿರುವ ಪೂರ್ತಿ ಹೂಡಿಕೆಗೆ ಮೂರು ವರ್ಷಗಳ ಲಾಕ್‌ ಇನ್‌ ಅವಧಿ ಅನ್ವಯವಾಗಿಯೇ ಆಗುತ್ತದೆ. ಅಂದರೆ ಹೆಚ್ಚುವರಿಯಾಗಿ ಮಾಡಿರುವ ಹೂಡಿಕೆಗೆ ನಿಮಗೆ ಲಭಿಸುವ ಲಾಭದ ಪ್ರಮಾಣ ಕಡಿಮೆ ಆದಂತಾಗುವುದಿಲ್ಲವೇ? ಇದರ ಬದಲು ಬೇರೆ ಬೇರೆ ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ಇನ್ನಷ್ಟು ದೀರ್ಘಾವಧಿಯ ಹೂಡಿಕೆ ಮತ್ತು ಹೆಚ್ಚಿನ ಗಳಿಕೆಯನ್ನು ಖಚಿತಪಡಿಸಿಕೊಳ್ಳಬಹುದಲ್ಲವೇ.

ಹೂಡಿಕೆಗೆ ‘ಇಎಲ್‌ಎಸ್‌ಎಸ್‌’ ಒಂದನ್ನೇ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯ ವಿಧಾನ ಎನಿಸದು. ನಿಮ್ಮ ಬಹು ವಿಧದ ಹೂಡಿಕಾ ಯೋಜನೆಯಲ್ಲಿ ಅದೂ ಒಂದು ಭಾಗವಾಗಬೇಕು ಅಷ್ಟೇ. ಹೂಡಿಕೆಗೂ ಮುನ್ನ, ‘ಇಎಲ್‌ಎಸ್‌ಎಸ್‌’ ಹೂಡಿಕೆಯು ದೀರ್ಘಾವಧಿಯಲ್ಲಿ ನಿಮಗೆ ನೀಡಬಹುದಾದ ಆದಾಯವಾದರೂ ಎಷ್ಟು ಎಂಬ ಪ್ರಶ್ನೆಯನ್ನು ನಿಮ್ಮನ್ನು ನೀವು ಕೇಳಿಕೊಳ್ಳಲೇಬೇಕು.

5 ರಿಂದ ಹತ್ತು ವರ್ಷಗಳ ಅವಧಿಯ ಬೇರೆ ಬೇರೆ ಹೂಡಿಕೆಗಳ ಗಳಿಕೆಯನ್ನು ತಾಳೆಹಾಕಿ ನೋಡಿದರೆ, ‘ಇಎಲ್‌ಎಸ್‌ಎಸ್‌’ ಗಳಿಕೆಯು ಲಾರ್ಜ್‌ ಕ್ಯಾಪ್‌, ಮಲ್ಟಿ ಕ್ಯಾಪ್, ಮಿಡ್‌ ಕ್ಯಾಪ್‌ ಹೂಡಿಕೆಗಳ ಗಳಿಕೆಗಿಂತ ಕಡಿಮೆ ಇರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ಆದಾಯ ತೆರಿಗೆ ವಿನಾಯ್ತಿ ಲಭಿಸುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ‘ಇಎಲ್‌ಎಸ್‌ಎಸ್‌’ಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಲ್ಲ. ತೆರಿಗೆ ವಿನಾಯ್ತಿ ಲಭಿಸುತ್ತದೆ ಎನ್ನುವುದಕ್ಕಿಂತ ಹೆಚ್ಚಿನ ಲಾಭ ಈ ಹೂಡಿಕೆಯಿಂದ ಆಗುವುದಿಲ್ಲ.

(ಲೇಖಕ:ಏಂಜೆಲ್‌ ಬ್ರೋಕಿಂಗ್‌ನ ಸಂಶೋಧನಾವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT