ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈನಲ್ಲಿ 32 ಲಕ್ಷ ಉದ್ಯೋಗ ನಷ್ಟ: ಸಿಎಂಐಇ ವರದಿ

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ವರದಿ
Last Updated 3 ಆಗಸ್ಟ್ 2021, 20:25 IST
ಅಕ್ಷರ ಗಾತ್ರ

ನವದೆಹಲಿ: ಜುಲೈ ತಿಂಗಳಿನಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ಇಳಿಕೆ ಆಗಿದ್ದರೂ ಕನಿಷ್ಠ 32 ಲಕ್ಷ ಜನ ವೇತನದಾರರು ಕೆಲಸ ಕಳೆದುಕೊಂಡಿ
ದ್ದಾರೆ ಎಂದು ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ’ (ಸಿಎಂಐಇ) ಸಂಸ್ಥೆಯ ವರದಿ ಹೇಳಿದೆ.

2019ರ ಜುಲೈ ನಂತರದಲ್ಲಿ ಒಟ್ಟು ಒಂದು ಕೋಟಿ ಜನ ವೇತನದಾರರು ಉದ್ಯೋಗ ಕಳೆದುಕೊಂಡಿದ್ದಾರೆ. 2019ರಲ್ಲಿ ಒಟ್ಟು 8.60 ಕೋಟಿ ಜನ ವೇತನ ಸಿಗುವ ಕೆಲಸ ಹೊಂದಿದ್ದರು. ಈ ಸಂಖ್ಯೆಯು ಈಗ 7.60 ಕೋಟಿಗೆ ಇಳಿಕೆ ಕಂಡಿದೆ ಎಂದು ಸಿಎಂಐಇ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತಿವೆ.

ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣವು ಜೂನ್‌ ತಿಂಗಳಿನಲ್ಲಿ ಶೇಕಡ 10.7ರಷ್ಟು ಇದ್ದುದು ಜುಲೈನಲ್ಲಿ ಶೇ 8.3ಕ್ಕೆ ಇಳಿಕೆ ಕಂಡಿದೆ. ಆದರೆ, ಉದ್ಯೋಗ ಕಳೆದುಕೊಂಡ ವೇತನದಾರರ ಪ್ರಮಾಣವು ನಗರ
ಪ್ರದೇಶಗಳಲ್ಲಿಯೇ ಹೆಚ್ಚಿದೆ.

ಕೋವಿಡ್‌ ಸಾಂಕ್ರಾಮಿಕದ ಎರಡನೆಯ ಅಲೆಯ ಸಂದರ್ಭದಲ್ಲಿ ಕೆಲಸ ಕಳೆದುಕೊಂಡವರಲ್ಲಿ ಮಹಿಳೆಯರಿಗಿಂತಲೂ ಪುರುಷರ ಪ್ರಮಾಣ ಹೆಚ್ಚು ಎಂದು ಸಿಎಂಐಇ ಈ ಮೊದಲು ಅಂದಾಜಿಸಿತ್ತು. ಮಹಿಳೆಯರು ಮೊದಲ ಅಲೆಯ ಸಂದರ್ಭದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಂಡಿದ್ದರು. ಅಂದರೆ, ದೇಶದ ಲಕ್ಷಾಂತರ ಕುಟುಂಬಗಳಿಗೆ ಜೀವನೋಪಾಯವೇ ಇಲ್ಲದಂತೆ ಆಗಿದೆ.

ನಗರಗಳ ಪುರುಷರು ಹೊಂದಿರುವ ಉದ್ಯೋಗವು ಹೆಚ್ಚಿನ ಗುಣಮಟ್ಟದ್ದಾಗಿರುತ್ತದೆ. ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದಾದರೆ ಆದಾಯದ ಕುಸಿತವು ಈವರೆಗೆ ಗಮನಕ್ಕೆ ಬಂದಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಎಂದು ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಹೇಳಿದ್ದಾರೆ.

‘ಭಾರತದ ಅರ್ಥ ವ್ಯವಸ್ಥೆಯು ಇಂಗ್ಲಿಷ್‌ನ ವಿ ಅಕ್ಷರದ ರೀತಿಯಲ್ಲಿ ಚೇತರಿಕೆ ಕಾಣುತ್ತಿದೆ (ಅಂದರೆ ಕುಸಿತ ಕಂಡಷ್ಟೇ ವೇಗವಾಗಿ ಮೇಲೆದ್ದು ಬರುವುದು). ಆದರೆ, ಪುನಶ್ಚೇತನವು ಪೂರ್ಣಗೊಳ್ಳುವ ಮೊದಲೇ ದುರ್ಬಲ ಆಗಿಬಿಡುತ್ತಿದೆ. ಪ್ರತಿ ಆಘಾತವೂ ನಾವು ಒಂದಿಷ್ಟು ಬೆಲೆ ತೆರುವಂತೆ ಮಾಡುತ್ತಿದೆ’ ಎಂದು ವ್ಯಾಸ್ ಹೇಳಿದ್ದಾರೆ.

ಕೋವಿಡ್‌ ಲಸಿಕೆ ನೀಡುವ ವೇಗ ತಗ್ಗಿರುವುದು ಹಾಗೂ ಮಾರುಕಟ್ಟೆಯಲ್ಲಿ ಬೇರೆ ಬೇರೆ ವಸ್ತುಗಳು ಮತ್ತು ಸೇವೆಗಳಿಗೆ ಬೇಡಿಕೆ ಕಡಿಮೆ ಆಗುತ್ತಿರುವ ಕಾರಣದಿಂದಾಗಿ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ಪ್ರಮಾಣ ಕಡಿಮೆ ಆಗಬಹುದು ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ದೇಶದ ಅರ್ಥ ವ್ಯವಸ್ಥೆಯು ಕೋವಿಡ್‌ಗೂ ಮೊದಲಿನ ಸ್ಥಿತಿಯನ್ನು 2022ರ ಮಾರ್ಚ್‌ಗೆ ಮೊದಲು ತಲುಪುವ ಸಾಧ್ಯತೆ ಇಲ್ಲ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT