ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಕರೆನ್ಸಿ ಚಲಾವಣೆ, ಆರ್‌ಬಿಐ ಪರಿಶೀಲನೆ

ವ್ಯಕ್ತಿ–ವ್ಯಕ್ತಿಯ ನಡುವೆ ನೇರವಾಗಿ ವಿನಿಮಯ ಆಗಲಿರುವ ಕರೆನ್ಸಿ
Last Updated 26 ಜನವರಿ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಲವು ಬಗೆಯ ಕ್ರಿಪ್ಟೊ ಕರೆನ್ಸಿಗಳು ಚಲಾವಣೆಯಲ್ಲಿ ಇರುವ ಸಂದರ್ಭದಲ್ಲಿ, ತಾನೇ ಒಂದು ಡಿಜಿಟಲ್ ಕರೆನ್ಸಿಯನ್ನು ಚಲಾವಣೆಗೆ ಬಿಡುವ ಬಗ್ಗೆ ಪರಿಶೀಲನೆ ನಡೆಸುತ್ತಿ ರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಹೇಳಿದೆ.

ಬಿಟ್‌ಕಾಯಿನ್‌ನಂತಹ ಕ್ರಿಪ್ಟೊ ಕರೆನ್ಸಿಗಳು ವಿಶ್ವದ ಹಲವು ದೇಶಗಳಲ್ಲಿ ಜನಪ್ರಿಯ ಆಗಿವೆ. ‘ಖಾಸಗಿ ಡಿಜಿಟಲ್ ಕರೆನ್ಸಿಗಳು (ಪಿಡಿಸಿ), ವರ್ಚುವಲ್ ಕರೆನ್ಸಿಗಳು (ವಿಸಿ), ಕ್ರಿಪ್ಟೊ ಕರೆನ್ಸಿಗಳು ಈಚಿನ ವರ್ಷಗಳಲ್ಲಿ ಜನಪ್ರಿಯತೆ ಪಡೆದುಕೊಂಡಿವೆ. ಆದರೆ, ಭಾರತದಲ್ಲಿ ಸರ್ಕಾರಗಳು ಇಂತಹ ಕರೆನ್ಸಿಗಳ ಬಗ್ಗೆ ಅನುಮಾನಗಳನ್ನು ಹೊಂದಿವೆ’ ಎಂದು ಆರ್‌ಬಿಐ, ಭಾರತದಲ್ಲಿನ ಪಾವತಿ ವ್ಯವಸ್ಥೆ ಕುರಿತ ಪುಸ್ತಿಕೆಯಲ್ಲಿ ಹೇಳಿದೆ. ಇದನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.

‘ಪಿಡಿಸಿ, ವಿಸಿ ಹಾಗೂ ಕ್ರಿಪ್ಟೊ ಕರೆನ್ಸಿಗಳ ಜೊತೆಯಲ್ಲೇ ಬರುವ ಕೆಲವು ಅಪಾಯಗಳ ಬಗ್ಗೆಯೂ ಸರ್ಕಾರಗಳು ಆತಂಕ ಹೊಂದಿವೆ. ಹೀಗಿದ್ದರೂ, ಭಾರತದ ಅಧಿಕೃತ ಕರೆನ್ಸಿಯ ಡಿಜಿಟಲ್ ಆವೃತ್ತಿಯನ್ನು ಚಲಾವಣೆಗೆ ತರಬೇಕೇ ಎಂಬ ಬಗ್ಗೆ ಆರ್‌ಬಿಐ ‍ಪರಿಶೀಲನೆ ನಡೆಸುತ್ತಿದೆ. ಒಂದು ವೇಳೆ ಚಲಾವಣೆಗೆ ಬಿಡಬೇಕು ಎಂದಾದಲ್ಲಿ, ಅದನ್ನು ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ತರಬೇಕು ಎಂಬ ಬಗ್ಗೆಯೂ ಪರಿಶೀಲನೆ ನಡೆದಿದೆ’ ಎಂದು ಆರ್‌ಬಿಐ ಹೇಳಿದೆ.

ಹೊಸ ಸಂಶೋಧನೆಗಳ ಕಾರಣದಿಂದಾಗಿ ಪಾವತಿ ವ್ಯವಸ್ಥೆಯಲ್ಲಿ ಬದಲಾವಣೆಗಳು ಬಹಳ ವೇಗವಾಗಿ ಆಗುತ್ತಿವೆ. ಹಾಗಾಗಿ, ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು, ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ತಮ್ಮ ಅಧಿಕೃತ ಕರೆನ್ಸಿಯನ್ನು ಡಿಜಿಟಲ್ ರೂಪದಲ್ಲಿಯೂ ನೀಡಬಹುದೇ ಎಂಬ ಪರಿಶೀಲನೆ ನಡೆಸುತ್ತಿವೆ ಎಂದು ಆರ್‌ಬಿಐ ಪುಸ್ತಿಕೆ ಹೇಳಿದೆ.

‘ಅಧಿಕೃತ ಕರೆನ್ಸಿಯನ್ನು ಡಿಜಿಟಲ್ ರೂಪದಲ್ಲಿ ಹೇಗೆ ಚಲಾವಣೆಗೆ ತರುವುದು ಎಂಬ ಬಗ್ಗೆ ಈ ಹಂತದಲ್ಲಿ ಯಾರಿಗೂ ಸ್ಪಷ್ಟವಾಗಿ ತಿಳಿದಿರುವಂತೆ ಕಾಣುತ್ತಿಲ್ಲ. ಖಾಸಗಿಯವರು ತಮ್ಮದೇ ಆದ ಕರೆನ್ಸಿಗಳನ್ನು ಚಲಾವಣೆಗೆ ತಂದಿರುವ ಕಾರಣ, ತಾವೂ ಡಿಜಿಟಲ್ ಕರೆನ್ಸಿ ಚಲಾವಣೆಗೆ ತರಬೇಕು ಎಂದು ಕೇಂದ್ರೀಯ ಬ್ಯಾಂಕ್‌ಗಳು ಆಲೋಚಿಸುತ್ತಿವೆ’ ಎಂದು ಬೆಂಗಳೂರಿನ ತಕ್ಷಶಿಲಾ ಇನ್‌ಸ್ಟಿಟ್ಯೂಟ್‌ನಲ್ಲಿ ಸಹಾಯಕ ಪ್ರಾಧ್ಯಾಪಕ ಆಗಿರುವ ಅನುಪಮ್ ಮಣೂರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು .

ಆರ್‌ಬಿಐ ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತಂದರೆ, ಅದರ ಚಲಾವಣೆಗೆ ಮಧ್ಯವರ್ತಿ ಸಂಸ್ಥೆಗಳ ಅಗತ್ಯ ಇರುವುದಿಲ್ಲ. ಅದು ವ್ಯಕ್ತಿ–ವ್ಯಕ್ತಿಯ ನಡುವೆ ನೇರವಾಗಿ ವಿನಿಮಯ ಆಗುತ್ತದೆ. ಆದರೆ, ಕರೆನ್ಸಿಯ ವಿನಿಮಯವನ್ನು ದಾಖಲಿಸುವ ಕೇಂದ್ರೀಕೃತ ದತ್ತಾಂಶ ಕೋಶವೊಂದು ಇರುತ್ತದೆ. ನೋಟಿನ ರೂಪದಲ್ಲಿ ಇರುವ ಕರೆನ್ಸಿಯು ಯಾರ ಕೈಯಲ್ಲಿ ಇತ್ತು, ಅಲ್ಲಿಂದ ಯಾರ ಕೈಗೆ ಹೋಯಿತು ಎಂಬುದನ್ನು ದಾಖಲಿಸಿಡಲು ಸಾಧ್ಯವಿಲ್ಲ. ಆದರೆ, ಡಿಜಿಟಲ್ ಕರೆನ್ಸಿಯ ವಿನಿಮಯ ಎಲ್ಲೆಲ್ಲಿ ಆಯಿತು ಎಂಬುದನ್ನು ಸಮರ್ಥವಾಗಿ ದಾಖಲಿಸಲು ಸಾಧ್ಯ ಎಂದು ಅನುಪಮ್ ಅಭಿಪ್ರಾಯ ವ್ಯಕ್ತಪಡಿಸಿದರು.

***

ಜನಪ್ರಿಯ ಆಗುತ್ತಿರುವ ಕ್ರಿಪ್ಟೊ ಕರೆನ್ಸಿಗಳು

ಡಿಜಿಟಲ್ ಕರೆನ್ಸಿ ಜಾರಿಗೆ ಹಲವು ದೇಶಗಳ ಚಿಂತನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT