ಸಾರ್ವಕಾಲಿಕ ಮಟ್ಟಕ್ಕೆ ರಫ್ತು

ಸೋಮವಾರ, ಮಾರ್ಚ್ 18, 2019
31 °C
ಪ್ರಸಕ್ತ ಹಣಕಾಸು ವರ್ಷದಲ್ಲಿ ದಾಖಲೆ ನಿರ್ಮಾಣದ ನಿರೀಕ್ಷೆ

ಸಾರ್ವಕಾಲಿಕ ಮಟ್ಟಕ್ಕೆ ರಫ್ತು

Published:
Updated:
Prajavani

ಚೆನ್ನೈ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶಿ ರಫ್ತು ವಹಿವಾಟು ಸಾರ್ವಕಾಲಿಕ ದಾಖಲೆ ಮಟ್ಟವಾದ ₹ 23.10 ಲಕ್ಷ ಕೋಟಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

‘ವಿವಿಧ ದೇಶಗಳು ಅನುಸರಿಸುತ್ತಿರುವ ಸ್ವಯಂ ರಕ್ಷಣಾ ಧೋರಣೆಯಂತಹ ಜಾಗತಿಕ ಸವಾಲುಗಳ ಹೊರತಾಗಿಯೂ ಈ ದಾಖಲೆ ಸಾಧ್ಯವಾಗಲಿದೆ’ ಎಂದು ವಾಣಿಜ್ಯ ಕಾರ್ಯದರ್ಶಿ ಅನುಪ್‌ ವಾಧ್ವಾನ್‌ ಹೇಳಿದ್ದಾರೆ.

ಇಲ್ಲಿ ನಡೆದ ಸಮಾರಂಭದಲ್ಲಿ ಜಾಗತಿಕ ಸಿಇಒಗಳು ಮತ್ತು ವ್ಯಾಪಾರ ಪಾಲುದಾರರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

‘ರಫ್ತು ವಹಿವಾಟಿಗೆ ಸಂಬಂಧಿಸಿದಂತೆ ಈ ವರ್ಷದ ಭಾರತದ ಸಾಧನೆ ಉತ್ತಮವಾಗಿರಲಿದೆ. 2013–14ರಲ್ಲಿನ ₹ 21.98 ಲಕ್ಷ ಕೋಟಿಯ ದಾಖಲೆಯನ್ನೂ ಈ ವರ್ಷದ ವಹಿವಾಟು ಮೀರಲಿದೆ. 2008–09ರಲ್ಲಿ ಕಂಡು ಬಂದಿದ್ದ ಜಾಗತಿಕ ಹಣಕಾಸು ಬಿಕ್ಕಟ್ಟಿನ ನಂತರ ದೇಶಿ ರಫ್ತು ವಹಿವಾಟು ಹಲವಾರು ಸವಾಲುಗಳನ್ನು ಎದುರಿಸುತ್ತ ಬಂದಿದೆ. ಅವುಗಳಲ್ಲಿ ವಿವಿಧ ದೇಶಗಳು ಏಕಪಕ್ಷೀಯವಾಗಿ ಅಳವಡಿಸಿಕೊಂಡಿರುವ ಸ್ವಯಂ ರಕ್ಷಣಾ ಧೋರಣೆಯೂ ಸೇರಿದೆ. ಸರ್ಕಾರ ಕೈಗೊಂಡ ಉತ್ತೇಜನಾ ಕ್ರಮಗಳಿಂದ ಎಂಜಿನಿಯರಿಂಗ್‌ ವಲಯದ ರಫ್ತು ಗಮನಾರ್ಹವಾಗಿ ಏರಿಕೆಯಾಗಿದೆ.

‘2017–18ರ ಹಣಕಾಸು ವರ್ಷದ ಏಪ್ರಿಲ್‌ – ಜನವರಿ ಅವಧಿಯಲ್ಲಿ ರಫ್ತು ವಹಿವಾಟು ಶೇ 9.52ರಷ್ಟು ಏರಿಕೆಯಾಗಿ ₹ 19.04 ಲಕ್ಷ ಕೋಟಿಗೆ ತಲುಪಿತ್ತು. ಆಮದು ಶೇ 11.27ರಷ್ಟು ಹೆಚ್ಚಳಗೊಂಡು ₹ 29.96 ಲಕ್ಷ ಕೋಟಿಗಳಷ್ಟಾಗಿತ್ತು’ ಎಂದರು.

ಡೊನಾಲ್ಡ್‌ ಟ್ರಂಪ್‌ ಅವರು ಇತ್ತೀಚೆಗೆ ಭಾರತಕ್ಕೆ ಇದ್ದ ಆದ್ಯತಾ ವ್ಯಾಪಾರ ಸ್ಥಾನಮಾನವನ್ನು ರದ್ದುಪಡಿಸುವುದಾಗಿ ಘೋಷಿಸಿದ್ದಾರೆ. ಯುರೋಪ್‌ ಒಕ್ಕೂಟವು ವಿಧಿಸಿರುವ ಸುರಕ್ಷತಾ ಸುಂಕವು ಕೂಡ ದೇಶಿ ರಫ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !