ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾಕ್ಕೆ ಹತ್ತಿ ಜವಳಿ ರಫ್ತಿನಲ್ಲಿ ಭಾರಿ ಕುಸಿತ

Last Updated 3 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಿಂದ ಚೀನಾಕ್ಕೆ ರಫ್ತಾಗುವ ಹತ್ತಿಯ ಜವಳಿ ಉತ್ಪನ್ನಗಳ ಪ್ರಮಾಣದಲ್ಲಿ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಶೇಕಡ 74ರಷ್ಟು ಕುಸಿತ ಕಂಡುಬಂದಿದೆ. ಭಾರತದಿಂದ ರಫ್ತಾಗುವ ಹತ್ತಿಯ ಜವಳಿ ಉತ್ಪನ್ನಗಳ ಒಟ್ಟು ಮೊತ್ತದಲ್ಲಿ ಚೀನಾದ ಪಾಲು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಶೇಕಡ 14ರಷ್ಟು ಇದ್ದಿದ್ದು, ಈ ತ್ರೈಮಾಸಿಕದಲ್ಲಿ ಶೇಕಡ 6.9ರಷ್ಟಕ್ಕೆ ಇಳಿಕೆಯಾಗಿದೆ.

ಹಿಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದಿಂದ ಚೀನಾಕ್ಕೆ ರಫ್ತಾದ ಹತ್ತಿಯ ಜವಳಿ ಉತ್ಪನ್ನಗಳ ಮೊತ್ತವು ₹ 2,601 ಕೋಟಿ ಆಗಿತ್ತು. ಈ ಬಾರಿ ಅದು ₹ 676 ಕೋಟಿಗೆ ಇಳಿದಿದೆ ಎಂದು ಹತ್ತಿ ಜವಳಿ ರಫ್ತು ಉತ್ತೇಜನಾ ಮಂಡಳಿಯ ಅಂಕಿ–ಅಂಶಗಳು ಹೇಳುತ್ತವೆ.

‘ಭಾರತದಿಂದ ರಫ್ತಾದ ಉತ್ಪನ್ನಗಳನ್ನು ಚೀನಾದ ಬಂದರುಗಳಲ್ಲಿ ಅಧಿಕಾರಿಗಳು ಆಮೂಲಾಗ್ರವಾಗಿ ಪರಿಶೀಲಿಸುವ, ಅಲ್ಲಿ ಉತ್ಪನ್ನಗಳನ್ನು ಇಳಿಸಲು ವಿಳಂಬ ಮಾಡಿದ ನಿದರ್ಶನಗಳು ವರದಿಯಾಗಿವೆ. ಇದು ಕೂಡ ರಫ್ತು ಪ್ರಮಾಣ ಕಡಿಮೆ ಆಗಲು ಕಾರಣ’ ಎಂದು ಪ್ರೀಮಿಯರ್ ಮಿಲ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ವಿ. ಶ್ರೀನಿವಾಸನ್ ತಿಳಿಸಿದರು.

ಚೀನಾದಿಂದ ಆಮದಾಗುವ ಜವಳಿ ಉತ್ಪನ್ನಗಳಿಗೆ ಪರ್ಯಾಯವನ್ನು ಹುಡುಕಿಕೊಳ್ಳುವುದು, ಚೀನಾದ ಕೆಲವು ವಸ್ತುಗಳಿಗೆ ಹೆಚ್ಚುವರಿ ತೆರಿಗೆ ವಿಧಿಸುವ ಕ್ರಮಗಳು ಭಾರತದಿಂದ ಚೀನಾಕ್ಕೆ ರಫ್ತಾಗುವ ವಸ್ತುಗಳ ಮೇಲೆಯೂ ಪರಿಣಾಮ ಉಂಟುಮಾಡಬಹುದು ಎಂದು ಅವರು ಹೇಳಿದರು.

‌ಕೊರೊನಾ ವೈರಾಣುವಿನಿಂದಾಗಿ ಪೂರೈಕೆ ವ್ಯವಸ್ಥೆಯಲ್ಲಿ ವ್ಯತ್ಯಾಸ ಉಂಟಾಯಿತು. ಇದು ಕೂಡ ಮೊದಲ ತ್ರೈಮಾಸಿಕದಲ್ಲಿ ರಫ್ತು ಕಡಿಮೆ ಆಗಲು ಕಾರಣ. ‘ಹತ್ತಿ ಜವಳಿ ಉತ್ಪನ್ನಗಳ ರಫ್ತಿನ ಮೇಲೆ ಈ ವರ್ಷ ಕೊರೊನಾದಿಂದಾಗಿ ಏಟು ಬೀಳುವುದು ಖಚಿತ. ಜವಳಿ ಉತ್ಪನ್ನಗಳಿಗೆ ಗ್ರಾಹಕರಿಂದ ಬೇಡಿಕೆ ಕಡಿಮೆ ಆಗಿರುವುದರ ಪರಿಣಾಮವಾಗಿ, ಜವಳಿ ಕಂಪನಿಗಳು ತಮ್ಮ ಸಾಮರ್ಥ್ಯದ ಶೇಕಡ 50ರಿಂದ 70ರಷ್ಟನ್ನು ಮಾತ್ರ ಬಳಕೆ ಮಾಡಿಕೊಳ್ಳುತ್ತಿವೆ’ ಎಂದು ಶ್ರೀನಿವಾಸನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT