ಕೃಷಿ ಸಾಲ ಮನ್ನಾದಿಂದ ವ್ಯತಿರಿಕ್ತ ಪರಿಣಾಮ: ಆರ್‌ಬಿಐ ಗವರ್ನರ್‌ ವಿಶ್ಲೇಷಣೆ

7
ರಾಜ್ಯಗಳ ವಿತ್ತೀಯ ಸ್ಥಿತಿ ಮೇಲೆ ಪ್ರತಿಕೂಲ

ಕೃಷಿ ಸಾಲ ಮನ್ನಾದಿಂದ ವ್ಯತಿರಿಕ್ತ ಪರಿಣಾಮ: ಆರ್‌ಬಿಐ ಗವರ್ನರ್‌ ವಿಶ್ಲೇಷಣೆ

Published:
Updated:

ನವದೆಹಲಿ: ಕೃಷಿ ಸಾಲ ಮನ್ನಾ ನೀತಿಯನ್ನು ವ್ಯಾಪಕವಾಗಿ ಜಾರಿಗೆ ತಂದರೆ ಅದರಿಂದ ಸಾಲ ಸಂಸ್ಕೃತಿ ಮೇಲೆ ವ್ಯತಿರಿಕ್ತ ಪರಿಣಾಮ ಕಂಡು ಬರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಇತ್ತೀಚಿಗೆ ಅಧಿಕಾರಕ್ಕೆ ಬಂದ ಮೂರು ರಾಜ್ಯಗಳಲ್ಲಿ ಚುನಾವಣಾ ಭರವಸೆ ನೀಡಿದಂತೆ ಕೃಷಿ ಸಾಲ ಮನ್ನಾ ಮಾಡಿರುವುದರಿಂದ ದಾಸ್‌ ಅವರ ಹೇಳಿಕೆಗೆ ಮಹತ್ವ ಪ್ರಾಪ್ತವಾಗಿದೆ. ಈ ಮೂರೂ ರಾಜ್ಯಗಳ ಒಟ್ಟಾರೆ ಕೃಷಿ ಸಾಲ ಮನ್ನಾದ ಮೊತ್ತವು ₹ 1.47 ಲಕ್ಷ ಕೋಟಿಗಳಷ್ಟಿದೆ.

‘ಕೃಷಿ ಸಾಲ ಮನ್ನಾದಿಂದ ರಾಜ್ಯ ಸರ್ಕಾರಗಳ ವಿತ್ತೀಯ ಪರಿಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮಗಳು ಕಂಡು ಬರುತ್ತವೆ. ಯಾವುದೇ ಬಗೆಯ ಕೃಷಿ ಸಾಲ ಮನ್ನಾ ಮಾಡುವ ನಿರ್ಧಾರಕ್ಕೆ ಬರುವ ಮೊದಲು ಅದರ ವಿತ್ತೀಯ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಬೇಕು.

‘ಸಾಲ ಮನ್ನಾದ ಹಣಕಾಸು ಹೊರೆಯನ್ನು ಭರಿಸಲು ತಮ್ಮಿಂದ ಸಾಧ್ಯವೇ ಎನ್ನುವುದನ್ನೂ ಸರ್ಕಾರಗಳು ಇಂತಹ ನಿರ್ಧಾರಕ್ಕೆ ಬರುವ ಮೊದಲು ಪರಿಶೀಲಿಸಬೇಕು. ಸಾಲ ಮಂಜೂರು ಮಾಡಿದ್ದರೆ ಬ್ಯಾಂಕ್‌ಗಳಿಗೆ ತಡಮಾಡದೆ ಹಣ ಮಂಜೂರು ಮಾಡಬೇಕು. ಸಾಲ ಮನ್ನಾ ನೀತಿಯನ್ನು ಸಾರ್ವತ್ರೀಕರಣಗೊಳಿಸುವುದರಿಂದ ಸಾಲ ಸಂಸ್ಕೃತಿ ಮತ್ತು ಸಾಲಗಾರರ ವರ್ತನೆ ಮೇಲೆ ಪರಿಣಾಮ ಬೀರುತ್ತದೆ’ ಎಂದು ದಾಸ್‌ ವಿಶ್ಲೇಷಿಸಿದ್ದಾರೆ. ಸೋಮವಾರ ಇಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

2017ರಲ್ಲಿ ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಪಂಜಾಬ್‌ ರಾಜ್ಯ ಸರ್ಕಾರಗಳು ಸಾಲ ಮನ್ನಾ ಘೋಷಿಸಿದ್ದವು. ಕರ್ನಾಟಕದಲ್ಲಿನ ಕಾಂಗ್ರೆಸ್‌ – ಜೆಡಿಎಸ್‌ ಸಮ್ಮಿಶ್ರ ಸರ್ಕಾರವೂ 2018ರಲ್ಲಿ ಸಾಲ ಮನ್ನಾ ಮಾಡಿದೆ.

₹ 2,000 ನೋಟು ಚಲಾವಣೆ: ₹ 2,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಕ್ರಮೇಣ ಸ್ಥಗಿತಗೊಳಿಸುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷಚಂದ್ರ ಗರ್ಗ್‌ ಈಗಾಗಲೇ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅದಕ್ಕಿಂತ ಹೆಚ್ಚಿನ ಮಾಹಿತಿ ನೀಡುವ ಅಗತ್ಯ ಇಲ್ಲ’ ಎಂದು ಶಕ್ತಿಕಾಂತ್‌ ಹೇಳಿದ್ದಾರೆ.

ದೇಶದಲ್ಲಿ ₹ 2,000 ನೋಟುಗಳ ಸಂಗ್ರಹವು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ಅವುಗಳ ಮುದ್ರಣವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ಹಿಂದಿನ ವಾರ ತಿಳಿಸಿತ್ತು.

ಮರುದಿನ ಇದಕ್ಕೆ ಸ್ಪಷ್ಟನೆ ನೀಡಿದ್ದ ಗರ್ಗ್ ಅವರು, ಇವುಗಳ ಮುದ್ರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !