ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆದ ದ್ರಾಕ್ಷಿಗೆ ತಾನೇ ಮಾರುಕಟ್ಟೆ ಸೃಷ್ಟಿಸಿಕೊಂಡ ರೈತ

ಹೆಚ್ಚಿನ ಆದಾಯ ಗಳಿಸಲಿಕ್ಕಾಗಿ ನೇರ ಮಾರಾಟಕ್ಕಿಳಿದ ರೈತನ ಸಾಹಸಗಾಥೆ
Last Updated 7 ಮಾರ್ಚ್ 2021, 8:05 IST
ಅಕ್ಷರ ಗಾತ್ರ

ಮೈಸೂರು: ಹೊಲದಲ್ಲಿ ಬೆಳೆದ ಕಪ್ಪು ದ್ರಾಕ್ಷಿಯನ್ನು ಊರಲ್ಲಿನ ಮಂಡಿಗೆ ಮಾರಿದರೆ ಲಾಭ ಅಷ್ಟಕ್ಕಷ್ಟೇ. ವರ್ಷವಿಡಿ ಮೈ ಮುರಿದು ದುಡಿದರೂ ಆದಾಯ ಹೇಳಿಕೊಳ್ಳುವಂತಿರಲ್ಲ...

‘ರೈತರಿಂದ ನೇರ ಮಾರಾಟ’ ಎಂಬ ಬ್ಯಾನರ್‌ ಕಟ್ಟಿಕೊಂಡು ಎರಡು ತಿಂಗಳಿಂದ ನಾನೇ ಊರೂರು ಸುತ್ತಿ ಮಾರಾಟ ಮಾಡುತ್ತಿರುವೆ. ಮೂರುವರೆ ಕೆ.ಜಿ. ತೂಕದ ಒಂದು ಬುಟ್ಟಿಗೆ ₹ 25 ಹೆಚ್ಚುವರಿ ಲಾಭ ಸಿಗುತ್ತಿದೆ. ಬೆವರಿನ ಹನಿಗೆ ಇದೀಗ ತಕ್ಕ ಪ್ರತಿಫಲ ದೊರಕಿದೆ. ಗ್ರಾಹಕರಿಗೂ ಅಂಗಡಿಗಿಂತ ಕಡಿಮೆ ದರದಲ್ಲಿ ದ್ರಾಕ್ಷಿ ಸಿಗ್ತಿದೆ’ ಎಂದು ದೊಡ್ಡಬಳ್ಳಾಪುರದ ಮುತ್ತು ‘ಪ್ರಜಾವಾಣಿ’ಗೆ ಖುಷಿಯಿಂದ ತಿಳಿಸಿದರು.

ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ತಪ್ಪಲಿನ ಏಳು ಎಕರೆಯಲ್ಲಿನಮ್ಮದು ಕಪ್ಪು ದ್ರಾಕ್ಷಿಯ ತೋಟವಿದೆ. ವರ್ಷವಿಡಿ ಹಣ್ಣು ಸಿಗಲಿದೆ. ಆದರೆ ನಮ್ಮ ಪರಿಶ್ರಮಕ್ಕೆ ತಕ್ಕ ಲಾಭ ಸಿಗುತ್ತಿರಲಿಲ್ಲ. ಕೋವಿಡ್‌ನಿಂದ ಬದುಕು ಮತ್ತಷ್ಟು ಕಷ್ಟಕ್ಕೀಡಾಯಿತು. ಹಳಿ ತಪ್ಪಿದ ಬದುಕನ್ನು ಸರಿದಾರಿಗೆ ತಂದುಕೊಳ್ಳಲಿಕ್ಕಾಗಿ ನಾನೇ ಮಾರಾಟಕ್ಕಿಳಿದೆ. ಇದೀಗ ಲಾಭದ ಜೊತೆಗೆ ಕೃಷಿ ಹಾಗೂ ಮನೆಯಲ್ಲಿನ ಸಮಸ್ಯೆಗಳು ದೂರವಾದವು ಎಂದು ಅವರು ಹೇಳಿದರು.

ಬಿದಿರಿನ ಖಾಲಿ ಬುಟ್ಟಿಯೊಂದಕ್ಕೆ ₹ 15. ದ್ರಾಕ್ಷಿ ಕೊಯ್ದು ಪ್ಯಾಕ್‌ ಮಾಡಲು ಒಬ್ಬರು ₹ 400 ಕೂಲಿ ಪಡೆಯುತ್ತಾರೆ. ವಾಹನದ ಬಾಡಿಗೆ ದಿನಕ್ಕೆ ₹ 550. ಚಿಕ್ಕಬಳ್ಳಾಪುರದಿಂದ ಮೈಸೂರಿಗೆ ಬಂದು ಹೋಗಲು ₹ 4500 ಮೊತ್ತದ ಡೀಸೆಲ್ ಬೇಕು. ಒಮ್ಮೆ 300 ಬುಟ್ಟಿ ಪ್ಯಾಕ್‌ ಮಾಡಿಸುವೆ.

ದಿನವೊಂದಕ್ಕೆ 150 ಬುಟ್ಟಿ ದ್ರಾಕ್ಷಿ ಮಾರಾಟವಾಗಲಿದೆ. ಒಂದು ದಿನ ಮೈಸೂರಿಗೆ ಬಂದರೆ, ಮತ್ತೊಂದು ದಿನ ಹಾಸನಕ್ಕೆ ಹೋಗುವೆ. ಇನ್ನೊಂದು ದಿನ ನೆಲಮಂಗಲದಲ್ಲಿ ಮಾರಾಟ ಮಾಡುವೆ. ವಾರಕ್ಕೆರೆಡು ಬಾರಿ ಒಂದೊಂದು ಊರಿಗೆ ಹೋಗುವೆ.

ಮೂರುವರೆ ಕೆ.ಜಿ. ತೂಕದ ಒಂದು ಬುಟ್ಟಿಗೆ ₹ 150 ನಿಗದಿ ಪಡಿಸಿರುವೆ. ಮೂರು ಊರುಗಳಲ್ಲಿನ ಜನ ನಾವಿದ್ದಲ್ಲಿಗೆ ಬಂದು ದ್ರಾಕ್ಷಿ ಬುಟ್ಟಿ ಕೊಂಡೊಯ್ಯುತ್ತಿದ್ದಾರೆ. ಇದರಿಂದ ನಮ್ಮ ವ್ಯಾಪಾರ ಚೆನ್ನಾಗಿ ನಡೆದಿದೆ. ಜನರ ಪ್ರತಿಕ್ರಿಯೆಯೂ ಅದ್ಬುತವಾಗಿದೆ ಎಂದ ಮುತ್ತು, ತಾವೇ ಮಾರುಕಟ್ಟೆ ಸೃಷ್ಟಿಸಿಕೊಂಡ ತಮ್ಮ ಹೊಸ ಸಾಹಸಗಾಥೆಯನ್ನು ಹೆಮ್ಮೆಯಿಂದ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT