ಸೋಮವಾರ, ಜುಲೈ 4, 2022
22 °C

2021ರಲ್ಲಿ ಎಫ್‌ಡಿಐ ಒಳಹರಿವು ಶೇ 26ರಷ್ಟು ಇಳಿಕೆ: ವಿಶ್ವಸಂಸ್ಥೆ ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) 2020ಕ್ಕೆ ಹೋಲಿಸಿದರೆ 2021ರಲ್ಲಿ ಶೇಕಡ 26ರಷ್ಟು ಇಳಿಕೆ ಆಗಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆಗಳು ದೊಡ್ಡ ಮಟ್ಟದಲ್ಲಿ ನಡೆಯದೇ ಇರುವುದೇ 2021ರಲ್ಲಿ ಎಫ್‌ಡಿಐ ಒಳಹರಿವು ಕಡಿಮೆ ಆಗಲು ಒಂದು ಮುಖ್ಯ ಕಾರಣ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನದ (ಯುಎನ್‌ಸಿಟಿಎಡಿ) 2021ರ ‘ಇನ್‌ವೆಸ್ಟ್‌ಮೆಂಟ್‌ ಟ್ರೆಂಡ್ಸ್‌ ಮಾನಿಟರ್‌’ ವರದಿಯಲ್ಲಿ ತಿಳಿಸಲಾಗಿದೆ.

ಕೋವಿಡ್‌ನ ಎರಡನೇ ಅಲೆಯು ಭಾರತದ ಆರ್ಥಿಕ ಚಟುವಟಿಕೆಗಳ ಮೇಲೆ ಹೆಚ್ಚಿನ ಪರಿಣಾಮ ಉಂಟಾಮಾಡಿತು ಎಂದು ವರದಿಯು ತಿಳಿಸಿದೆ.

2020ರಲ್ಲಿ ಭಾರತಕ್ಕೆ ₹ 4.74 ಲಕ್ಷ ಕೋಟಿ ಎಫ್‌ಡಿಐ ಹರಿದುಬಂದಿತ್ತು. ಇದು 2019ರಲ್ಲಿ ಆಗಿದ್ದ ಹೂಡಿಕೆಗಿಂತಲು ಶೇ 27ರಷ್ಟು ಹೆಚ್ಚು.

ದೀರ್ಘಾವಧಿಗೆ ಅನುಕೂಲಕರ ಹಣಕಾಸು ಸ್ಥಿತಿ, ಸರ್ಕಾರದ ಉತ್ತೇಜಕ ಕೊಡುಗೆಗಳು ಮತ್ತು ವಿದೇಶಿ ಹೂಡಿಕೆ ಯೋಜನೆಗಳಿಂದಾಗಿ ಮೂಲಸೌಕರ್ಯ ವಲಯದ ಬಗ್ಗೆ ಹೂಡಿಕೆದಾರರ ವಿಶ್ವಾಸವು ಉತ್ತಮವಾಗಿದೆ. ಇನ್ನೊಂದೆಡೆ, ಕೈಗಾರಿಕೆ ಮತ್ತು ಜಾಗತಿಕ ಪೂರೈಕೆ ವ್ಯವಸ್ಥೆಯ ಬಗ್ಗೆ ಹೂಡಿಕೆದಾರರ ವಿಶ್ವಾಸವು ಕುಗ್ಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಜಾಗತಿಕ ಮಟ್ಟದಲ್ಲಿ ವಿದೇಶಿ ಹೂಡಿಕೆಯು 2020ಕ್ಕೆ ಹೋಲಿಸಿದರೆ 2021ರಲ್ಲಿ ಶೇ 77ರಷ್ಟು ಹೆಚ್ಚಾಗಿದ್ದು, ಕೋವಿಡ್‌ಗೂ ಮುಂಚಿನ ಮಟ್ಟವನ್ನು ದಾಟಿದೆ ಎಂದು ವರದಿ ತಿಳಿಸಿದೆ.

ಅಭಿವೃದ್ಧಿಶೀಲ ದೇಶಗಳಲ್ಲಿ ಹೂಡಿಕೆಯ ಚೇತರಿಕೆಯು ಉತ್ತೇಜನಕಾರಿ ಆಗಿದೆ. ಆದರೆ, ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕೈಗಾರಿಕೆ ಮತ್ತು ವಿದ್ಯುತ್‌, ಆಹಾರ ಅಥವಾ ಆರೋಗ್ಯ ಕ್ಷೇತ್ರಗಳಲ್ಲಿ ಹೊಸ ಹೂಡಿಕೆ ಆಗದೇ ಇರುವುದು ಕಳವಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ಯುಎನ್‌ಸಿಟಿಎಡಿ ಪ್ರಧಾನ ಕಾರ್ಯದರ್ಶಿ ರೆಬೆಕಾ ಗ್ರಿನ್‌ಸ್ಪಾನ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು