ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ವಿಬಿ ವಿಲೀನ: ಈ ವಾರ ಪ್ರಕಟ?

Last Updated 21 ನವೆಂಬರ್ 2020, 20:53 IST
ಅಕ್ಷರ ಗಾತ್ರ

ಮುಂಬೈ : ಲಕ್ಷ್ಮೀ ವಿಲಾಸ್ ಬ್ಯಾಂಕ್‌ಅನ್ನು (ಎಲ್‌ವಿಬಿ) ಸಿಂಗಪುರ ಮೂಲದ ಡಿಬಿಎಸ್‌ ಬ್ಯಾಂಕ್‌ ಜೊತೆ ವಿಲೀನ ಮಾಡುವ ಅಂತಿಮ ಯೋಜನೆಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಪ್ರಕಟಿಸಿಲ್ಲ. ಅದನ್ನು ಆರ್‌ಬಿಐ, ಈ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್‌ವಿಬಿಯ ವಹಿವಾಟುಗಳ ಮೇಲೆ ನಿರ್ಬಂಧ ಹೇರಿ, ಡಿಬಿಎಸ್‌ ಜೊತೆ ಅದನ್ನು ವಿಲೀನ ಮಾಡುವ ಕರಡು ಯೋಜನೆಯನ್ನು ಇದೇ 17ರಂದು ಪ್ರಕಟಿಸುವ ಸಂದರ್ಭದಲ್ಲಿ ಆರ್‌ಬಿಐ, ವಿಲೀನಕ್ಕೆ ಸಂಬಂಧಿಸಿದ ಅಂತಿಮ ಆದೇಶವನ್ನು ಶುಕ್ರವಾರ (ನ. 20) ಹೊರಡಿಸುವುದಾಗಿ ಹೇಳಿತ್ತು. ವಿಲೀನವನ್ನು ಡಿಸೆಂಬರ್‌ 16ಕ್ಕೆ ಮೊದಲು ಪೂರ್ಣಗೊಳಿಸುವುದಾಗಿಯೂ ಅದು ಹೇಳಿತ್ತು.

ಎಲ್‌ವಿಬಿಯಲ್ಲಿ ಪ್ರವರ್ತಕರು ಒಟ್ಟು ಶೇಕಡ 6.8ರಷ್ಟು ಷೇರುಗಳನ್ನು ಹೊಂದಿದ್ದಾರೆ. ಪ್ರವರ್ತಕರ ಪೈಕಿ ಕೆ.ಆರ್. ಪ್ರದೀಪ್ ಅವರು ಶೇಕಡ 4.8ರಷ್ಟು ಷೇರುಗಳನ್ನು, ಎನ್. ರಾಮಾಮೃತಂ, ಎನ್.ಟಿ. ಶಾ ಮತ್ತು ಎಸ್.ಬಿ. ಪ್ರಭಾಕರನ್ ಅವರ ಕುಟುಂಬಗಳು ಒಟ್ಟಾಗಿ ಶೇಕಡ 2ರಷ್ಟು ಷೇರುಗಳನ್ನು ಹೊಂದಿವೆ. ರಿಟೇಲ್ ಷೇರುದಾರರು ಒಟ್ಟು ಶೇಕಡ 45ರಷ್ಟು ಷೇರುಗಳನ್ನು ಹೊಂದಿದ್ದಾರೆ.

ಇಂಡಿಯಾ ಬುಲ್ಸ್ ಹೌಸಿಂಗ್ ನೇತೃತ್ವದ ಸಾಂಸ್ಥಿಕ ಹೂಡಿಕೆದಾರರು ಶೇಕಡ 20ಕ್ಕಿಂತ ತುಸು ಹೆಚ್ಚಿನ ಷೇರುಗಳನ್ನು ಹೊಂದಿದ್ದಾರೆ. ಈಗಿರುವ ವಿಲೀನ ಸೂತ್ರದ ಅನ್ವಯ ಎಲ್‌ವಿಬಿಯ ಎಲ್ಲ ಷೇರುದಾರರು ತಾವು ಹೂಡಿದ ಅಷ್ಟೂ ಹಣ ಕಳೆದುಕೊಳ್ಳಲಿದ್ದಾರೆ.

‘ಖರೀದಿಗೆ ಡಿಬಿಎಸ್‌ ಮುಂದಾಗಿತ್ತು’: ಡಿಬಿಎಸ್‌ ಬ್ಯಾಂಕ್‌, ಹೆಚ್ಚಿನ ಬೆಲೆಗೆ ಎಲ್‌ವಿಬಿಯ ಶೇಕಡ 50ರಷ್ಟು ಷೇರುಗಳನ್ನು ಖರೀದಿಸಲು 2018ರಲ್ಲಿ ಮುಂದಾಗಿತ್ತು. ಆದರೆ ಆಗ ಆರ್‌ಬಿಐ ಈ ಯೋಜನೆಗೆ ಅನುಮೋದನೆ ನೀಡಲಿಲ್ಲ ಎಂದು ಪ್ರದೀಪ್ ಹೇಳಿದ್ದಾರೆ.

ಆರ್‌ಬಿಐ ಷೇರುದಾರರ ಹಾಗೂ ಪ್ರವರ್ತಕರ ಮಾತುಗಳನ್ನು ಆಲಿಸಲಿದೆ, ಅವರು ಬರಿಗೈಯಲ್ಲಿ ಹೊರನಡೆಯಬೇಕಾದ ಸ್ಥಿತಿಯನ್ನು ಸೃಷ್ಟಿಸುವುದಿಲ್ಲ ಎಂಬ ವಿಶ್ವಾಸ ತಮಗಿರುವುದಾಗಿಯೂ ಅವರು ಹೇಳಿದ್ದಾರೆ. ಬೆಂಗಳೂರಿನ ಪ್ರದೀಪ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದಾರೆ. ಅವರು ಚಾರ್ಟರ್ಡ್‌ ಅಕೌಂಟೆಂಟ್ ಕೂಡ ಹೌದು.

‘ಹೂಡಿಕೆದಾರರನ್ನು ಹುಡುಕಲು ಎಲ್‌ವಿಬಿ 2018ರಲ್ಲಿ ಜೆ.ಪಿ. ಮಾರ್ಗನ್ ಸಂಸ್ಥೆಯನ್ನು ನೇಮಿಸಿತ್ತು. ಬಹಳಷ್ಟು ಜನ ಹೂಡಿಕೆದಾರರನ್ನು ಆಗ ಜೆ.ಪಿ. ಮಾರ್ಗನ್ ಆಹ್ವಾನಿಸಿತ್ತು. ಆಗ ಡಿಬಿಎಸ್‌ ಕೂಡ ಹೂಡಿಕೆ ಮಾಡಲು ಆಸಕ್ತಿ ತೋರಿಸಿತ್ತು. ಪ್ರತಿ ಷೇರಿಗೆ ₹ 100 ನೀಡಿ, ಶೇಕಡ 50ರಷ್ಟು ಷೇರುಗಳನ್ನು ಖರೀದಿ ಮಾಡಲು ಸಿದ್ಧವಾಗಿತ್ತು’ ಎಂದು ಪ್ರದೀಪ್
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT