ಗುರುವಾರ , ಜೂನ್ 24, 2021
22 °C

ಪ್ರಶ್ನೋತ್ತರ: ಮನೆಯಲ್ಲಿ ಕುಳಿತು ಷೇರು ವ್ಯವಹಾರ ಮಾಡಲು ಮಾಹಿತಿ ನೀಡಿ

ಯು.ಪಿ. ಪುರಾಣಿಕ್ Updated:

ಅಕ್ಷರ ಗಾತ್ರ : | |

Prajavani

ಪ್ರಶ್ನೆ: ನಾನು ದಿ. ಬೆಂಗಳೂರು ಸಿಟಿ ಕೋ–ಆಪರೇಟಿವ್‌ ಬ್ಯಾಂಕ್‌ನಲ್ಲಿ ₹ 1 ಲಕ್ಷ ಷೇರು ಬಂಡವಾಳದಲ್ಲಿ ಹಣ ವಿನಿಯೋಗಿಸಿದ್ದೇನೆ. 2020ರ ಮಾರ್ಚ್‌ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ನನಗೆ ಡಿವಿಡೆಂಡ್‌ ಸಿಗಲಿಲ್ಲ. ಈ ಮಾರ್ಚ್‌ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಾದರೂ ಡಿವಿಡೆಂಡ್‌ ಸಿಗುವ ಸಾಧ್ಯತೆ ಇದೆಯೇ ಹಾಗೂ ಕಳೆದ ವರ್ಷದ ಡಿವಿಡೆಂಡ್‌ ಸೇರಿಸಿ ಕೊಡಬಹುದೇ ತಿಳಿಸಿ?
-ಸಿದ್ದಯ್ಯ, ಚಾಮರಾಜಪೇಟೆ, ಬೆಂಗಳೂರು
ಉತ್ತರ: ಭಾರತೀಯ ರಿಸರ್ವ್ ಬ್ಯಾಂಕ್‌ ಸುತ್ತೋಲೆ ಸಂಖ್ಯೆ RBI/2021/23 ಹಾಗೂ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾ ಮಂಡಳಿಯವರ ಸುತ್ತೋಲೆ KSCUBF dated 23/4/2021ರ ಪ್ರಕಾರ ಸಹಕಾರಿ ಬ್ಯಾಂಕುಗಳು 2021ರ ಮಾರ್ಚ್‌ 31ಕ್ಕೆ ನಿವ್ವಳ ಲಾಭ ಗಳಿಸಿದ್ದಲ್ಲಿ ಹಾಗೂ ಬ್ಯಾಂಕಿನ ನಿವ್ವಳ ಅನುತ್ಪಾದಕ ಆಸ್ತಿ (ಎನ್‌ಪಿಎ) ಶೇಕಡ 5ರೊಳಗಿದ್ದಲ್ಲಿ ಬ್ಯಾಂಕಿನ ಸದಸ್ಯರಿಗೆ ಡಿವಿಡೆಂಡ್ ಕೊಡಲು ಪರವಾನಗಿ ಇದೆ.

ಇದರಿಂದಾಗಿ ಕರ್ನಾಟಕದಲ್ಲಿರುವ ಸಹಕಾರಿ ಬ್ಯಾಂಕುಗಳು ನಿವ್ವಳ ಲಾಭ ಗಳಿಸಿ, ಅನುತ್ಪಾದಕ ಆಸ್ತಿ ಶೇ 5ರೊಳಗಿದ್ದಲ್ಲಿ ಮಾರ್ಚ್‌ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ತಮ್ಮ ಸದಸ್ಯರಿಗೆ ಡಿವಿಡೆಂಡ್‌ ಹಂಚಬಹುದಾಗಿದೆ. ಆದರೆ ಆರ್‌ಬಿಐ ಆದೇಶದ ಮೇರೆಗೆ 2020ರ ಮಾರ್ಚ್‌ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷಕ್ಕೆ ಡಿವಿಡೆಂಡ್ ಹಂಚುವಂತಿಲ್ಲ. ಬೆಂಗಳೂರು ಸಿಟಿ ಕೋ–ಆಪರೇಟಿವ್‌ ಬ್ಯಾಂಕು ಈ ವರ್ಷ ಸುಮಾರು ₹ 26 ಕೋಟಿ ನಿವ್ವಳ ಲಾಭ ಗಳಿಸಿದೆ ಹಾಗೂ ಬ್ಯಾಂಕ್‌ನ ಅನುತ್ಪಾದಕ ಆಸ್ತಿ ಶೇ 3ರಷ್ಟಿದೆ. ಈ ವರ್ಷ ನಿಮಗೆ ಡಿವಿಡೆಂಡ್ ಸಿಕ್ಕೇ ಸಿಗುತ್ತದೆ. ನಿಮ್ಮ ಪ್ರಶ್ನೆಯಿಂದಾಗಿ ಕರ್ನಾಟಕದಾದ್ಯಂತ ಇರುವ, ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಷೇರಿನ ರೂಪದಲ್ಲಿ ಹೂಡಿಕೆ ಮಾಡಿದ ಲಕ್ಷಾಂತರ ಜನರಿಗೆ ಉತ್ತರ ದೊರೆತಂತಾಗಿದೆ.

ಪ್ರಶ್ನೆ: ನಾನು ಗೃಹಿಣಿ. ನನ್ನೊಡನೆ ₹ 1 ಲಕ್ಷ ಉಳಿತಾಯ ಖಾತೆಯಲ್ಲಿದೆ. ನಾನು ಮನೆಯಲ್ಲಿ ಕುಳಿತು ಷೇರು ವ್ಯವಹಾರ ಮಾಡಲು ಮಾಹಿತಿ ನೀಡಿ.
-ವಸುಂಧರಾ, ಸಹಕಾರ ನಗರ, ಬೆಂಗಳೂರು

ಉತ್ತರ: ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸಲು ಮೊದಲಿಗೆ ಒಂದು ಡಿಮ್ಯಾಟ್‌ ಖಾತೆ ಹೊಂದಬೇಕು. ಈ ವ್ಯವಹಾರವನ್ನು ಷೇರು ದಲ್ಲಾಳಿಗಳ ಮುಖಾಂತರ ಮಾಡಬೇಕಾದ್ದರಿಂದ ಅವರೇ ಡಿಮ್ಯಾಟ್‌ ಖಾತೆ ತೆರೆಯಲು ಸಹಾಯ ಮಾಡುತ್ತಾರೆ. ಪ್ರೈಮರಿ ಮತ್ತು ಸೆಕೆಂಡರಿ ಹೀಗೆ ಎರಡು ವಿಧಗಳ ಷೇರು ಮಾರುಕಟ್ಟೆಗಳಿವೆ. ಕೆಲವು ಕಂಪನಿಗಳ ಆರಂಭಿಕ ಕೊಡುಗೆ (ಐಪಿಒ) ಬರುತ್ತವೆ. ಇಲ್ಲಿ ಕೂಡಾ ಅರ್ಜಿ ಸಲ್ಲಿಸಿ ಹಣ ತುಂಬಿ ಷೇರು ಖರೀದಿಸಬಹುದು. ಆದರೆ ಶೇಕಡ 95ರಷ್ಟು ಜನ ಸೆಕೆಂಡರಿ ಮಾರುಕಟ್ಟೆಯಲ್ಲಿಯೇ ವ್ಯವಹರಿಸುತ್ತಾರೆ. ಇಲ್ಲಿ ನೀವು ಕೇವಲ ಒಂದು ಷೇರು ಕೂಡ ಕೊಳ್ಳಬಹುದು ಮತ್ತು ಮಾರಾಟ ಮಾಡಬಹುದು. ನಿಮ್ಮ ದೈನಂದಿನ ಷೇರು ವ್ಯವಹಾರಕ್ಕೆ ಸೆಕೆಂಡರಿ ಮಾರುಕಟ್ಟೆಯೇ ಲೇಸು. ಇದೇ ವೇಳೆ ಷೇರು ಮಾರುಕಟ್ಟೆಯಲ್ಲಿ ವಾಯಿದೆ ಪೇಟೆ (Derivative Market) ಕೂಡಾ ಇದೆ. ಇಲ್ಲಿ ಕಂಪನಿ ನಿಗದಿಪಡಿಸಿದ ಕನಿಷ್ಠ ಒಂದು ಲಾಟ್‌ ಖರೀದಿಸಬೇಕು. (ಉದಾ: ರಿಲಯನ್ಸ್‌–250, ಇನ್ಫೊಸಿಸ್‌–600, ಎಸ್‌ಬಿಐ–3,000) ಹಾಗೂ ವಾಯಿದೆ ಮುಗಿಯುವುದರೊಳಗೆ ಮಾರಾಟ ಮಾಡಬೇಕು. ಈ ವ್ಯವಹಾರಕ್ಕೆ ಹೆಚ್ಚಿನ ಅನುಭವ ಹಾಗೂ ದೊಡ್ಡ ಮೊತ್ತ ಬೇಕಾಗುತ್ತದೆ. ನೀವು ಸೆಕೆಂಡರಿ ಮಾರುಕಟ್ಟೆಯಲ್ಲಿ ಉತ್ತಮ ಕಂಪನಿಗಳ ಅಲ್ಪ ಸ್ವಲ್ಪ ಷೇರುಗಳನ್ನು ಸಂವೇದಿ ಸೂಚ್ಯಂಕವು (Sensex) ಬಹಳ ಕುಸಿದಾಗ ಖರೀದಿಸಿ, ಸೂಚ್ಯಂಕ ಮೇಲಕ್ಕೆ ಹೋದಾಗ ಮಾರಾಟ ಮಾಡಿ ಲಾಭ ಗಳಿಸಬಹುದು. ಹೀಗೆ ಕೊಂಡ ಷೇರುಗಳನ್ನು ನೀವು ಎಷ್ಟು ದಿನಗಳಾದರೂ ಇಟ್ಟುಕೊಳ್ಳಬಹುದು ಹಾಗೂ ಅವುಗಳು ಡಿಮ್ಯಾಟ್‌ ಖಾತೆಯಲ್ಲಿ ಜಮಾ ಇರುತ್ತವೆ. ನಿಮ್ಮ ಉದ್ದೇಶ ಈಡೇರಲಿ ಎಂದು ಆಶಿಸುತ್ತೇನೆ.

***

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌: businessdesk@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು