ಮಂಗಳವಾರ, ಮೇ 18, 2021
24 °C

ಆದ್ಯತೆಯಾಗಲಿ ಉಳಿತಾಯ: ಹಣಕಾಸು ಗುರಿ ರಾಜಿ ಬೇಡ

ಸುಜಾತಾ ಅಹ್ಲಾವತ್‌ Updated:

ಅಕ್ಷರ ಗಾತ್ರ : | |

Prajavani

ಒಮ್ಮೆ ಆರ್ಥಿಕ ಗುರಿಗಳನ್ನು ನಿರ್ಧರಿಸಿ, ಅದನ್ನು ಸಾಧಿಸುವುದರ ಮೇಲೆ ದೃಷ್ಟಿ ನೆಟ್ಟ ನಂತರ ಅದರಲ್ಲಿ ಯಾವುದೇ ರಾಜಿಗೆ ಅವಕಾಶ ಕೊಡಬಾರದು. ಇಂತಹ ಗುರಿಗಳನ್ನು ಸಾಧಿಸಲು ವಿಸ್ತೃತವಾದ ಯೋಜನೆಗಳು ಬೇಕಾಗುತ್ತವೆ. ಹಾಕಿಕೊಂಡ ಯೋಜನೆಗಳ ಮೇಲೆ ಸತತ ನಿಗಾ ಇಡಬೇಕು ಮತ್ತು ಅವುಗಳನ್ನು ಕ್ರಮಬದ್ಧವಾಗಿ ಜಾರಿಗೊಳಿಸಲು ಗಮನ ನೀಡಬೇಕಾಗುತ್ತದೆ. ಸಂಕೀರ್ಣವಾದ ಚಿಂತನಾ ಕ್ರಮಗಳ ಮೂಲಕ ನಿರ್ಧಾರಿತ ಗುರಿ ಸಾಧಿಸುವುದು ಹೇಗೆ ಎಂಬ ಬಗ್ಗೆ ಸ್ವಲ್ಪ ಚಿಂತಿಸೋಣ.

ಸತತವಾದ ಚಿಂತನೆ ಮತ್ತು ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸುವ ಮೂಲಕ ಗುರಿ ಸಾಧಿಸಲು ನಮ್ಮದೇ ಆದ ಮಾರ್ಗವನ್ನು ಕಂಡುಕೊಳ್ಳಬಹುದು. ಸಾಲ ಹಾಗೂ ಗ್ರಾಹಕ ಕೇಂದ್ರಿತ ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ನಿಮ್ಮ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ‘ಸಾಲ’ವು ಬಹುಮುಖ್ಯವಾದ ಪಾತ್ರವನ್ನು ವಹಿಸಬಲ್ಲದು. ಕಡಿಮೆ ವೆಚ್ಚದಲ್ಲಿ ಮತ್ತು ಹೆಚ್ಚು ವೇಗದಲ್ಲಿ ಗುರಿಗಳನ್ನು ತಲುಪುವುದು ಪ್ರತಿಯೊಬ್ಬರಿಗೂ ಸಾಧ್ಯವಿದೆ. ಆರ್ಥಿಕ ಯಶಸ್ಸಿಗೆ ಸುಸ್ಥಿರವಾದ ಮಾರ್ಗಸೂಚಿಯೊಂದು ಬೇಕೆಂಬ ಭಾವನೆ ನಿಮ್ಮದಾಗಿದ್ದರೆ ನಿಮಗಾಗಿ ಇಲ್ಲಿ ಕೆಲವು ಸಲಹೆಗಳಿವೆ. ಭವಿಷ್ಯದ ಹಾದಿಯಲ್ಲಿ ಪ್ರಯಾಣ ಆರಂಭಿಸಲು ಸಿದ್ಧರಾಗಿ.

ನಿಮ್ಮದೇ ಮೈಲುಗಲ್ಲು ಸೃಷ್ಟಿಸಿ

ಸಾಮಾನ್ಯವಾಗಿ ಪ್ರತಿಯೊಬ್ಬನ ಮನಸ್ಸಿನಲ್ಲೂ ಪ್ರತಿನಿತ್ಯ ಸುಮಾರು 50 ಸಾವಿರ ಚಿಂತನೆಗಳು ಮಿಂಚಿ ಮಾಯವಾಗುತ್ತವೆ. ನಮ್ಮ ಆಲೋಚನಾ ರೀತಿಯೇ ಸಂಕೀರ್ಣವಾದುದು. ನಮ್ಮ ಎಲ್ಲಾ ಚಿಂತನೆಗಳು ತರ್ಕಬದ್ಧವಾಗಿರುವುದಿಲ್ಲ ಅಥವಾ ಎಲ್ಲಾ ಚಿಂತನೆಗಳಿಗೆ ತರ್ಕಬದ್ಧ ಅಂತ್ಯ ಇರುವುದಿಲ್ಲ. ಇಂಥ ಚಿಂತನೆಗಳಿಗೆ ಸೂಕ್ತ ಯೋಜನೆಗಳನ್ನು ರೂಪಿಸಿದರೆ ಮಾತ್ರ ಅವುಗಳನ್ನು ಕಾರ್ಯಗತಗೊಳಿಸಲು ಸಾಧ್ಯ. ಆದ್ದರಿಂದ ಮೊದಲು ಅವುಗಳ ಬಗ್ಗೆ ನಿರ್ಧಾರಗಳನ್ನು ಕೈಗೊಂಡು, ಅವುಗಳನ್ನು ಜಾರಿಗೆ ತನ್ನಿ.

ಪಾಲಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಬೇಕು ಎಂಬುದು ನಿಮ್ಮ ಗುರಿ ಎಂದಾಗಿದ್ದರೆ, ನಿಮ್ಮ ಉಳಿತಾಯವು ಅವರ ಪ್ರಯಾಣ ವೆಚ್ಚವನ್ನು ಭರಿಸಲು ಸಾಕಾಗುವಷ್ಟಿದೆಯೇ? ಅಥವಾ ನೀವು ಅದಕ್ಕಾಗಿ ಸಾಲ ಪಡೆಯಲು ಚಿಂತಿಸುತ್ತಿರುವಿರೇ? ಒಂದುವೇಳೆ ಸಾಲ ಪಡೆಯಲು ತೀರ್ಮಾನಿಸಿದರೆ, ಎಷ್ಟು ಸಾಲ ಪಡೆಯಬೇಕು, ನೀವು ಪಡೆಯಬಹುದಾದ ಸಾಲದ ಗರಿಷ್ಠ ಮಿತಿ ಎಷ್ಟು?... ಸಾಲ ಪಡೆಯುವುದಕ್ಕೂ ಮುನ್ನ ಈ ಕುರಿತ ಖಚಿತವಾದ ಯೋಜನೆಗಳು ನಿಮ್ಮ ಮುಂದೆ ಇರುವುದು ಅಗತ್ಯ. ಸರಿಯಾದ ಸಮಯದ  ನಿರ್ಧಾರ ಹಾಗೂ ಅದನ್ನು ಜಾರಿಮಾಡುವ ಮನಸ್ಥಿತಿಗಳು ಕನಸನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ವಿವರಗಳತ್ತ ಗಮನವಿರಲಿ

ಸಾಲ ಪಡೆಯುವ ವಿಚಾರದಲ್ಲಿ ಎಲ್ಲಾ ಸಂದರ್ಭಗಳಲ್ಲೂ ಒಂದೇ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲಾಗದು. ಸಾಲ ನೀಡುವ ಸಂಸ್ಥೆಯ ಸಾಲ ನೀತಿಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಲಭಿಸಬಹುದಾದ ರಿಯಾಯಿತಿಗಳ ಬಗ್ಗೆ ಮಾಹಿತಿ ಪಡೆಯಿರಿ. ನಿಮ್ಮ ಸಾಲದ ಅರ್ಹತೆ ಎಷ್ಟು ಎಂಬುದನ್ನು ಪುನಃ ಖಚಿತಪಡಿಸಿಕೊಳ್ಳಿ. ಈ ನಡುವೆ ನಿಮ್ಮ ಕ್ರೆಡಿಟ್‌ ಸ್ಕೋರ್‌, ಕ್ರೆಡಿಟ್‌ ರಿಪೋರ್ಟ್‌ಗಳ ಬಗ್ಗೆಯೂ ಮಾಹಿತಿ ಪಡೆಯುವುದನ್ನು ಮರೆಯಬೇಡಿ. ಸಾಲ ನೀಡುವವರು ಯಾವ್ಯಾವ ವಿಚಾರಗಳತ್ತ ಗಮನಹರಿಸಬಹುದು, ನೀವು ಯಾವ್ಯಾವ ವಿಚಾರಗಳಲ್ಲಿ ಇನ್ನಷ್ಟು ಸುಧಾರಣೆಗಳನ್ನು ಮಾಡಿಕೊಳ್ಳಬೇಕು ಎಂಬ ವಿಚಾರಗಳತ್ತಲೂ ಗಮನವಿರಲಿ. ಹೀಗೆ ಎಲ್ಲವನ್ನೂ ಸರಿಯಾಗಿಟ್ಟುಕೊಂಡರೆ ಯಾವುದಾದರೂ ಆಕರ್ಷಕ ಸಾಲ ಯೋಜನೆ ಬಂದಾಗ ಅದರ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

ಸಿಂಹಾವಲೋಕನ ಇರಲಿ

ಯಾವ ಯೋಜನೆಯೇ ಆಗಲಿ, ಹಾದಿ ತಪ್ಪಿಸುವ ಪ್ರಸಂಗಗಳು ಆಗಾಗ ಎದುರಾಗುತ್ತಲೇ ಇರಬಹುದು. ಆದ್ದರಿಂದ ಮುಂದೆ ಬರಬಹುದಾದ ಅಡೆತಡೆಗಳ ಬಗ್ಗೆ ಮೊದಲೇ ತಿಳಿದುಕೊಂಡು, ಅದಕ್ಕೆ ಅನುಗುಣವಾಗಿ ಅಗತ್ಯವೆನಿಸಿದಾಗ ನಿಮ್ಮ ಹಣಕಾಸು ಯೋಜನೆಗಳನ್ನು ಬದಲಿಸಿಕೊಳ್ಳುವುದು ಅಗತ್ಯ.

ಸಾಲದ ಕಂತು ಮತ್ತು ನಿಮ್ಮ ಆದಾಯದ ನಡುವಣ ಸಮತೋಲನವನ್ನು ಕಾಯ್ದುಕೊಳ್ಳುತ್ತಾ, ಆರ್ಥಿಕ ಕಟ್ಟುಪಾಡುಗಳನ್ನು ಗಮನದಲ್ಲಿ ಇಟ್ಟುಕೊಂಡು ಭವಿಷ್ಯದ ಯೋಜನೆಗಳಲ್ಲಿ ಕಾಲಕ್ಕೆ ತಕ್ಕಂಥ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಸಂಪೂರ್ಣವಾದ ಮಾಹಿತಿಯನ್ನು ಪಡೆದು, ಅತಿ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಪಡೆದ ಸಾಲವನ್ನು ಸಕಾಲದಲ್ಲಿ ಪಾವತಿ ಮಾಡುತ್ತಾ, ಸಕಾರಾತ್ಮಕವಾದ ಕ್ರೆಡಿಟ್‌ ಪ್ರೊಫೈಲ್‌ ಅನ್ನು ಇಟ್ಟುಕೊಳ್ಳಿ. ಇದರಿಂದ ಅಗತ್ಯವೆನಿಸಿದಾಗ ಸಾಲ ಪಡೆಯಲು ಸಾಧ್ಯವಾಗುತ್ತದೆ. ಸಾಲದ ಬಗ್ಗೆ ಯಾವತ್ತೂ ಎಚ್ಚರದಿಂದಿದ್ದು ನಿಮ್ಮದೇ ಆದ ಆರ್ಥಿಕ ಮತ್ತು ಸಾಲದ ಅಭಿವೃದ್ಧಿ ಹಾದಿಯನ್ನು ಕಂಡುಕೊಳ್ಳಿ.

(ಲೇಖಕಿ: ಟ್ರಾನ್ಸ್‌ ಯೂನಿಯನ್‌ ಸಿಬಿಐಎಲ್‌ನ ಉಪಾಧ್ಯಕ್ಷೆ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು