ಮಂಗಳವಾರ, ಸೆಪ್ಟೆಂಬರ್ 21, 2021
21 °C

ಏರ್‌ ಇಂಡಿಯಾ ಖರೀದಿಗೆ ಟಾಟಾ ಹಣಕಾಸಿನ ಬಿಡ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಏರ್ ಇಂಡಿಯಾ ಕಂಪನಿಯ ಖರೀದಿಗೆ ಆಸಕ್ತಿ ತೋರಿಸಿ ಹಲವರು ಹಣಕಾಸಿನ ಬಿಡ್ ಸಲ್ಲಿಸಿದ್ದಾರೆ ಎಂದು ಕೇಂದ್ರ ಸರ್ಕಾರವು ಬುಧವಾರ ಹೇಳಿದೆ. ಟಾಟಾ ಸನ್ಸ್ ಕಂಪನಿಯು ತಾನು ಕೂಡ ಬಿಡ್‌ ಸಲ್ಲಿಸಿರುವುದಾಗಿ ಹೇಳಿದೆ.

‘ಏರ್‌ ಇಂಡಿಯಾ ಖಾಸಗೀಕರಣಕ್ಕೆ ಹಣಕಾಸಿನ ಬಿಡ್‌ಗಳನ್ನು ವಹಿವಾಟು ಸಲಹೆಗಾರರು ಸ್ವೀಕರಿಸಿದ್ದಾರೆ. ಈಗ ಪ್ರಕ್ರಿಯೆಯು ಅಂತಿಮ ಹಂತಕ್ಕೆ ಹೋಗಲಿದೆ’ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಟ್ವೀಟ್ ಮಾಡಿದ್ದಾರೆ.

ಏರ್‌ ಇಂಡಿಯಾದಲ್ಲಿ ತಾನು ಹೊಂದಿರುವ ಅಷ್ಟೂ ಷೇರುಗಳನ್ನು ಮಾರಾಟ ಮಾಡಲು ಕೇಂದ್ರವು ಉದ್ದೇಶಿಸಿದೆ. ಅಲ್ಲದೆ, ಎಐ ಎಕ್ಸ್‌ಪ್ರೆಸ್‌ ಲಿಮಿಟೆಡ್‌ನಲ್ಲಿ ಏರ್‌ ಇಂಡಿಯಾ ಕಂಪನಿ ಹೊಂದಿರುವ ಅಷ್ಟೂ ಷೇರುಗಳನ್ನು, ಏರ್‌ ಇಂಡಿಯಾ ಎಸ್‌ಎಟಿಎಸ್‌ ಏರ್‌ಪೋರ್ಟ್‌ ಸರ್ವಿಸಸ್ ಪ್ರೈ.ಲಿ. ಕಂಪನಿಯಲ್ಲಿ ಏರ್ ಇಂಡಿಯಾ ಹೊಂದಿರುವ ಶೇ 50ರಷ್ಟು ಷೇರುಗಳನ್ನು ಕೂಡ ಮಾರಾಟ ಮಾಡಲಿದೆ.

2020ರ ಜನವರಿಯಲ್ಲಿ ಆರಂಭವಾದ ಷೇರು ಮಾರಾಟ ಪ್ರಕ್ರಿಯೆಯು ಕೋವಿಡ್–19 ಕಾರಣದಿಂದಾಗಿ ವಿಳಂಬ ಆಯಿತು. ಹಣಕಾಸಿನ ಬಿಡ್ ಸಲ್ಲಿಸಲು ಬುಧವಾರ ಕಡೆಯ ದಿನವಾಗಿತ್ತು. ಏರ್‌ ಇಂಡಿಯಾ ಖರೀದಿಗೆ ಆರಂಭಿಕ ಹಂತದಲ್ಲಿ ಆಸಕ್ತಿ ತೋರಿಸಿದ್ದ ಕಂಪನಿಗಳ ಪೈಕಿ ಟಾಟಾ ಸಮೂಹ ಕೂಡ ಒಂದು.

ಏರ್ ಇಂಡಿಯಾ ಕಂಪನಿಯನ್ನು 2007ರಲ್ಲಿ ಇಂಡಿಯನ್ ಏರ್‌ಲೈನ್ಸ್ ಜೊತೆ ವಿಲೀನ ಮಾಡಲಾಯಿತು. ಅಂದಿನಿಂದಲೂ ಇದು ನಷ್ಟ ಅನುಭವಿಸುತ್ತಿದೆ. 2019ರ ಮಾರ್ಚ್‌ 31ರ ಲೆಕ್ಕಾಚಾರದಂತೆ ಏರ್ ಇಂಡಿಯಾ ಸಾಲ ₹ 60,074 ಕೋಟಿ. ಈ ಸಾಲದಲ್ಲಿ ₹ 23,286 ಕೋಟಿಯು, ಏರ್‌ ಇಂಡಿಯಾವನ್ನು ಖರೀದಿಸುವ ಕಂಪನಿಗೆ ವರ್ಗಾವಣೆ ಆಗುತ್ತದೆ. ಇನ್ನುಳಿದ ಮೊತ್ತವು ಏರ್‌ ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಲಿ. ಕಂಪನಿಗೆ ವರ್ಗಾವಣೆ ಆಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು