ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಹೂಡಿಕೆಗೆ‘ಎಫ್‌ಡಿ’

Last Updated 30 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

‘ನಿಶ್ಚಿತ ಠೇವಣಿ’ (ಎಫ್‌.ಡಿ) ಎಂದರೆ ಅತ್ಯಂತ ಸುರಕ್ಷಿತ ಹೂಡಿಕಾ ಸಾಧನ ಎಂಬುದು ಭಾರತೀಯರ ಬಲವಾದ ನಂಬಿಕೆ. ‘ಎಫ್‌ಡಿ’ಯು ಹೂಡಿಕೆದಾರರಿಗೆ ನಿಗದಿತ ಆದಾಯವನ್ನು ಖಚಿತಪಡಿಸುತ್ತದೆ. ಇನ್ನೊಂದು ಮುಖ್ಯ ಅಂಶ ಏನೆಂದರೆ ಇದರ ಗಳಿಕೆಯು ಷೇರುಪೇಟೆಯ ಏರಿಳಿತವನ್ನು ಅವಲಂಬಿಸಿರುವುದಿಲ್ಲ. ಒಂದರ್ಥದಲ್ಲಿ ಇದು ಕನಿಷ್ಠ ಅಪಾಯ ಹೊಂದಿರುವ ಹೂಡಿಕಾ ವಿಧಾನ. ಆದರೆ ಷೇರು ಪೇಟೆಯನ್ನು ಅವಲಂಬಿಸಿದ, ಹೆಚ್ಚು ಆದಾಯ ತಂದುಕೊಡುವ ಹೂಡಿಕಾ ಉತ್ಪನ್ನಗಳು ಪರಿಚಯವಾದ ನಂತರ ನಿಶ್ಚಿತ ಠೇವಣಿಗಳು ತಮ್ಮ ಆಕರ್ಷಣೆ ಕಳೆದುಕೊಂಡಿವೆ.

ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿ, ಗ್ರಾಮೀಣ ಜನರನ್ನೂ ಆರ್ಥಿಕ ವ್ಯವಸ್ಥೆಯೊಳಗೆ ಸೇರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸರ್ಕಾರವು ಹೊಸದಾಗಿ ‘ಸಣ್ಣ ಹಣಕಾಸು ಬ್ಯಾಂಕ್‌’ಗಳನ್ನು (ಎಸ್‌ಎಫ್‌ಬಿ) ಆರಂಭಿಸಿದೆ. ಸ್ಥಿರ ಠೇವಣಿಗಳತ್ತ ಜನರ ಗಮನ ಆಕರ್ಷಿಸುವುದು ಇವುಗಳ ಮುಖ್ಯ ಉದ್ದೇಶವಾಗಿದೆ. ಇತರ ವಾಣಿಜ್ಯ ಬ್ಯಾಂಕ್‌ಗಳು ಕೊಡುವ ಬಡ್ಡಿಗೆ ಹೋಲಿಸಿದರೆ ‘ಎಸ್‌ಎಫ್‌ಬಿ’ಗಳು ನಿಶ್ಚಿತ ಠೇವಣಿಗಳಿಗೆ ಹೆಚ್ಚಿನ ಬಡ್ಡಿಯನ್ನು ಕೊಡುತ್ತವೆ.

ಬ್ಯಾಂಕಿಂಗ್‌ ಸೇವೆಗಳಿಂದ ವಂಚಿತರಾಗಿರುವ ಜನರಿಗೆ ಅತ್ಯುತ್ತಮ ಸೇವೆ ನೀಡಬೇಕು, ಇತರ ಗ್ರಾಹಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಗ್ರಾಮೀಣ ಗ್ರಾಹಕರಿಗೂ ನೀಡಬೇಕು ಎಂಬುದು ಈ ಬ್ಯಾಂಕ್‌ಗಳ ಗುರಿ. ಆ ಉದ್ದೇಶ ಈಡೇರಿಕೆಗಾಗಿ, ‘ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಮನೆಯ ತಿಜೋರಿಗಳಲ್ಲಿ ಇಡಬೇಡಿ, ಅದನ್ನು ಸುರಕ್ಷಿತವಾದ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಿ’ ಎಂದು ಜನರಿಗೆ ಈ ಬ್ಯಾಂಕ್‌ಗಳು ಪ್ರೇರೇಪಿಸುತ್ತವೆ. ಗ್ರಾಹಕರಿಗೆ ಅತ್ಯುತ್ತಮ ಬ್ಯಾಂಕಿಂಗ್‌ ಅನುಭವ ನೀಡುವ ಉದ್ದೇಶದಿಂದ ಸಣ್ಣ ಹಣಕಾಸು ಬ್ಯಾಂಕ್‌ಗಳು ಅತ್ಯಾಧುನಿಕ ತಂತ್ರಜ್ಞಾನವನ್ನೂ ಬಳಸುತ್ತಿವೆ.

ಗ್ರಾಮೀಣ ಭಾಗದ ಜನರು ಇಡುವ ಠೇವಣಿಯ ಹಣವನ್ನು, ಹಣಕಾಸಿನ ಅಗತ್ಯವಿರುವ ಆದರೆ ಯಾವುದೇ ಮೂಲದಿಂದಲೂ ನೆರವು ಲಭ್ಯವಾಗದೆ ತೊಂದರೆಗೆ ಒಳಗಾಗಿರುವವರಿಗೆ ಸಾಲದ ರೂಪದಲ್ಲಿ ಸಹಾಯ ನೀಡಲಾಗುತ್ತದೆ. ಹೀಗೆ ಸಣ್ಣ ಹಣಕಾಸು ಬ್ಯಾಂಕ್‌ಗಳಿಂದ ಸಾಲ ಪಡೆದು ಲಕ್ಷಾಂತರ ಬಡವರು ತಮ್ಮ ಬದುಕನ್ನು ಹಸನುಗೊಳಿಸಿದ್ದಾರೆ.

ಬ್ಯಾಂಕಿಂಗ್‌ ಸೌಲಭ್ಯದಿಂದ ವಂಚಿತರಾಗಿರುವ ಗ್ರಾಮೀಣ ಪ್ರದೇಶದ ಜನರಿಗೆ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಡಲು ಒಂದು ಸುರಕ್ಷಿತ ವ್ಯವಸ್ಥೆಯ ಅಗತ್ಯವಿದೆ. ನಿಶ್ಚಿತ ಠೇವಣಿ ಇದಕ್ಕೆ ಉತ್ತಮ ಪರಿಹಾರವಾಗಿದೆ. ಸಣ್ಣ ಹಣಕಾಸು ಬ್ಯಾಂಕ್‌ಗಳು ನಿಶ್ಚಿತ ಠೇವಣಿಗಳಿಗೆ ಶೇ 9ರವರೆಗೂ ಬಡ್ಡಿಯನ್ನು ಕೊಡುವುದರಿಂದ ಗ್ರಾಮೀಣ ಜನರ ದೀರ್ಘಾವಧಿಯ ಆರ್ಥಿಕ ಗುರಿಯನ್ನು ಈಡೇರಿಸುವ ನಿಟ್ಟಿನಲ್ಲೂ ಇದು ಸಹಕಾರಿಯಾಗಬಲ್ಲದು.

ಬ್ಯಾಂಕಿಂಗ್‌ ವ್ಯವಸ್ಥೆಯ ಬಗ್ಗೆ ಗ್ರಾಮೀಣ ಜನರಲ್ಲಿ ಒಂದು ರೀತಿಯ ಭಯ, ಹಿಂಜರಿಕೆಯ ಭಾವನೆ ಇತ್ತು. ಆ ಭಯವನ್ನು ಹೋಗಲಾಡಿಸಿ, ಬ್ಯಾಂಕಿಂಗ್‌ ಸೇವೆಗಳನ್ನು ಅವರ ಜೀವನದ ಭಾಗವಾಗಿಸುವುದು ಮತ್ತು ಬ್ಯಾಂಕಿಂಗ್ ಸೇವೆಗಳಿಗೆ ಅವರನ್ನು ಒಗ್ಗಿಸಿಕೊಳ್ಳುವುದು ಸಣ್ಣ ಹಣಕಾಸು ಬ್ಯಾಂಕ್‌ಗಳ ಉದ್ದೇಶವಾಗಿದೆ.

ಬ್ಯಾಂಕಿಂಗ್‌ ವ್ಯವಸ್ಥೆಯ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಗ್ರಾಮೀಣ ಭಾಗದ ಜನರು ಬ್ಯಾಂಕ್‌ಗಳ ಸೇವೆಯನ್ನು ಬಳಸಿಕೊಳ್ಳಲು ಹಿಂಜರಿಯುತ್ತಾರೆ. ಈ ಸಮಸ್ಯೆ ಅಶಿಕ್ಷಿತರಿಗೆ ಸೀಮಿತವಲ್ಲ, ನಗರ ಪ್ರದೇಶದ ಸುಶಿಕ್ಷಿತ ಜನರು ಸಹ ಮಾಹಿತಿಯ ಕೊರತೆಯಿಂದಾಗಿ ಬ್ಯಾಂಕಿಂಗ್‌ ಸೇವೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿಲ್ಲ.

ಆದ್ದರಿಂದ ಜನರಿಗೆ ಬ್ಯಾಂಕಿಂಗ್‌ ಸೇವೆಗಳ ಬಗ್ಗೆ, ಸರಿಯಾದ ಸಂಸ್ಥೆಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಅಗತ್ಯದ ಬಗ್ಗೆ ಹಾಗೂ ಅವರ ಹಣಕಾಸನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬೆಲ್ಲ ವಿಚಾರಗಳ ಬಗ್ಗೆ ತರಬೇತಿ ನೀಡಲು ಪ್ರತ್ಯೇಕವಾದ ಸಂಸ್ಥೆಗಳನ್ನು ಆರಂಭಿಸುವ ಅಗತ್ಯವಿತ್ತು. ಪರಿಣಾಮ್‌ ಫೌಂಡೇಷನ್‌ನ ‘ದೀಕ್ಷಾ’ ಕಾರ್ಯಕ್ರಮದ ಮೂಲಕ ಈಗ ಆ ಕೆಲಸವನ್ನು ಮಾಡಲಾಗುತ್ತಿದೆ.

ಇಂತಹ ಬ್ಯಾಂಕ್‌ಗಳು ಕೊಡುವ ಬಡ್ಡಿಯನ್ನು ಮಾತ್ರ ಗ್ರಾಹಕರು ಗಮನಿಸಿದರೆ ಸಾಲದು. ಇತರ ಹಣಕಾಸು ಸಂಸ್ಥೆಗಳು ನೀಡದಿರುವಂಥ ಯಾವ್ಯಾವ ಸೇವೆಗಳನ್ನು ಬ್ಯಾಂಕ್‌ ಕೊಡುತ್ತದೆ ಎಂಬ ವಿಚಾರದತ್ತಲೂ ಗಮನ ಹರಿಸಬೇಕು. ಒಂದು ಉದಾಹರಣೆ ಕೊಡಬೇಕೆಂದರೆ, ಉಜ್ಜೀವನ್‌ ಬ್ಯಾಂಕ್‌ ಕನಿಷ್ಠ ದಾಖಲೆಗಳನ್ನು ಪಡೆದು ಗ್ರಾಹಕರ ಮನೆಬಾಗಿಲಿಗೆ ಬ್ಯಾಂಕಿಂಗ್‌ ಸೇವೆಯನ್ನು ನೀಡುತ್ತದೆ. ಡಿಜಿಟಲ್‌ ಸೇವೆಗಳನ್ನೂ ಇದು ನೀಡುತ್ತದೆ. ಇಂಥ ಸೇವೆಗಳು ಗ್ರಾಹಕರಿಗೆ ಹಲವು ವಿಧಗಳಲ್ಲಿ ನೆರವಾಗುತ್ತವೆ.

ಷೇರುಪೇಟೆಯ ಈಗಿನ ಏರಿಳಿತಗಳನ್ನು ಗಮನಿಸಿದರೆ, ಇಂತಹ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಖಾತೆ ಆರಂಭಿಸಿ ಕನಿಷ್ಠ 1 ರಿಂದ 2ವರ್ಷ ಅವಧಿಗೆ ಹಣ ಹೂಡಿಕೆ ಮಾಡಲು ಇದು ಸಕಾಲವೆನಿಸುತ್ತದೆ. ನಿಮ್ಮ ಉಳಿತಾಯದ ದೊಡ್ಡ ಭಾಗವನ್ನು ನಿಗದಿತ ಗಳಿಕೆಯ ಖಾತರಿ ನೀಡುವ ಉತ್ಪನ್ನದಲ್ಲಿ ಮತ್ತು ಅತ್ಯುತ್ತಮ ಸೇವೆ ಕೊಡುವ ಸಂಸ್ಥೆಯಲ್ಲಿ ಹೂಡಿಕೆ ಮಾಡುವುದು ಸೂಕ್ತ.

(ಲೇಖಕ, ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ ಮುಖ್ಯ ವಹಿವಾಟು ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT