ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಹೂಡಿಕೆಗೆ ನಿಶ್ಚಿತ ಠೇವಣಿ

Last Updated 29 ಜನವರಿ 2019, 19:30 IST
ಅಕ್ಷರ ಗಾತ್ರ

ಹೂ ಡಿಕೆ ಎಂಬುದು ಉಳಿತಾಯದ ಹಣದಿಂದ ಹೆಚ್ಚುವರಿಯಾಗಿ ಒಂದಿಷ್ಟು ಆದಾಯ ಗಳಿಸಲು ಅನುಸರಿಸುವ ವಿಧಾನ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲರೂ ಒಂದಿಷ್ಟು ಹೂಡಿಕೆ ಮಾಡುವುದು ಸಹಜ. ಮ್ಯೂಚುವಲ್‌ ಫಂಡ್‌, ನಿಶ್ಚಿತ ಠೇವಣಿ, ಸಾಲಪತ್ರ… ಹೀಗೆ ಹೂಡಿಕೆಗೆ ಇಂದು ಸಾಕಷ್ಟು ಆಯ್ಕೆಗಳು ಲಭ್ಯ ಇವೆ. ಹೂಡಿಕೆಯ ಗರಿಷ್ಠ ಲಾಭವನ್ನು ಪಡೆಯಬೇಕಾದರೆ ಈ ಎಲ್ಲ ಆಯ್ಕೆಗಳ ಬಗ್ಗೆ ಕನಿಷ್ಠ ಜ್ಞಾನವನ್ನಾದರೂ ಹೊಂದುವುದು ಅಗತ್ಯ. ಆ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ

ನಿಶ್ಚಿತ ಠೇವಣಿ

ಪ್ರತಿಯೊಂದು ಹೂಡಿಕಾ ವಿಧಾನಕ್ಕೂ ಅದರದ್ದೇ ಆದ ಅಪಾಯ (ರಿಸ್ಕ್‌) ಇದ್ದೇ ಇರುತ್ತದೆ. ಇಂಥ ರಿಸ್ಕ್‌ಗೆ ಅನುಗುಣವಾಗಿಯೇ ಗಳಿಕೆಯೂ ಇರುತ್ತದೆ. ಷೇರುಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಗಳಿಕೆಗೆ ಅವಕಾಶ ಇರುತ್ತದೆ ಎಂಬುದು ನಿಜ. ಆದರೆ, ಅದರಲ್ಲಿ ಅಷ್ಟೇ ಪ್ರಮಾಣದ ರಿಸ್ಕ್‌ ಸಹ ಇರುತ್ತದೆ. ಮಾರುಕಟ್ಟೆಯ ಏರುಪೇರು, ಹೂಡಿಕೆ ಮಾಡಿರುವ ಕಂಪನಿಯ ವಹಿವಾಟಿನ ಪ್ರಮಾಣ ಮುಂತಾದ ಹಲವು ಅಂಶಗಳು ಹೂಡಿಕೆಯ ಮೇಲೆ ಯಾವ ಪರಿಣಾಮವನ್ನಾದರೂ ಬೀರಬಹುದು. ಆದ್ದರಿಂದ ಷೇರುಗಳಲ್ಲಿ ಹೂಡಿಕೆ ಮಾಡಬೇಕಾದರೆ ಲಾಭ ಗಳಿಸುವ ಉತ್ಸಾಹವಿದ್ದರಷ್ಟೇ ಸಾಲದು, ನಷ್ಟವನ್ನು ತಾಳಬಲ್ಲ ಶಕ್ತಿಯೂ ಇರಬೇಕಾಗುತ್ತದೆ. ಇಂಥ ಶಕ್ತಿ ಇಲ್ಲದವರು ಹೆಚ್ಚು ಸುರಕ್ಷಿತವಾದಂತಹ, ಸಾರ್ವಜನಿಕ ಭವಿಷ್ಯನಿಧಿ (ಪಿಪಿಎಫ್‌), ಸಾಲಪತ್ರಗಳು, ಲಿಕ್ವಿಡ್‌ ಫಂಡ್‌ ಅಥವಾ ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡಬಹುದು. ಈ ಎಲ್ಲ ಹೂಡಿಕೆಗಳಿಗೂ ಅದರದ್ದೇ ಆದ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳಿವೆ. ಅತಿ ಕಡಿಮೆ ಅಪಾಯ ಇರುವ ಕಾರಣಕ್ಕೆ ‘ನಿಶ್ಚಿತ ಠೇವಣಿ’ಯು ಹೂಡಿಕೆಗೆ ಒಳ್ಳೆಯ ಆಯ್ಕೆ ಎನಿಸುತ್ತದೆ. ಈಗಲೂ ಸಹ ನಿಶ್ಚಿತ
ಠೇವಣಿಯೇ ಅನೇಕ ಹೂಡಿಕೆದಾರರ ಮೊದಲ ಆಯ್ಕೆಯಾಗಿದೆ. ಕಾರಣಗಳೂ ಸರಳವಾಗಿವೆ.

ನಿಶ್ಚಿತ ಆದಾಯ

ಮಾರುಕಟ್ಟೆ ಏರುಪೇರುಗಳು ನಿಶ್ಚಿತ ಠೇವಣಿಗಳ ಮೇಲೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ. ಇಲ್ಲಿ ಅವಧಿ ಮುಕ್ತಾಯವಾದಾಗ ಹೂಡಿಕೆಯ ಸಂದರ್ಭದಲ್ಲಿ ನೀಡಲಾದ ಭರವಸೆಯಷ್ಟು ಹಣ ಬಂದೇ ಬರುತ್ತದೆ. ಆದ್ದರಿಂದ ಯಾವುದೇ ರಿಸ್ಕ್‌ ತೆಗೆದುಕೊಳ್ಳಲು ಇಚ್ಛಿಸದ ಹೂಡಿಕೆದಾರರಿಗೆ ಇದು ಅತ್ಯಂತ ಸೂಕ್ತ, ಸುರಕ್ಷಿತ ಆಯ್ಕೆ.

ಉಳಿತಾಯ ಖಾತೆಯಲ್ಲಿ ಹೆಚ್ಚಿನ ಹಣ ಇಡುವ ಬದಲು ಆ ಹಣವನ್ನು ನಿಶ್ಚಿತ ಠೇವಣಿಯಲ್ಲಿಟ್ಟರೆ ನಿಗದಿತ ಅವಧಿಯಲ್ಲಿ ಉದ್ದೇಶಿತ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಬಹುತೇಕ ಎಲ್ಲ ಹಣಕಾಸು ಸಂಸ್ಥೆಗಳೂ ನಿಶ್ಚಿತ ಠೇವಣಿಯ ಬಡ್ಡಿ ದರವನ್ನು ಹೆಚ್ಚಿಸಿರುವುದರಿಂದ ಇಲ್ಲಿ ಹೂಡಿಕೆ ಮಾಡಲು ಇದು ಸಕಾಲ.

ಆಯ್ಕೆಗೆ ಅವಕಾಶ

ಕಡಿಮೆ ಆಪಾಯವಿರುವ ಇತರ ಹೂಡಿಕಾ ವಿಧಾನಗಳಲ್ಲಿ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದ ಆಯ್ಕೆಯ ಅವಕಾಶಗಳು ನಿಶ್ಚಿತ ಠೇವಣಿಯಲ್ಲಿವೆ. ತಮ್ಮ ಹಣವನ್ನು ದೀರ್ಘಾವಧಿಯ ಹೂಡಿಕೆ ಮಾಡಲು ಬಯಸದವರು ಅಲ್ಪಾವಧಿಗೆ ಠೇವಣಿ ಇಡಬಹುದು. ಠೇವಣಿಯ ಅವಧಿಗೆ ಸಂಬಂಧಿಸಿದಂತೆ ಇಲ್ಲಿ ಬೇಕಾದಷ್ಟು ಆಯ್ಕೆಗಳಿವೆ. ಆದ್ದರಿಂದ ಠೇವಣಿ ಇಟ್ಟ ನಂತರ ಹಣದ ಸಮಸ್ಯೆ ಬಂದರೆ ಏನು ಮಾಡುವುದು ಎಂಬ ಚಿಂತೆಗೆ ಠೇವಣಿದಾರರು ಒಳಗಾಗಬೇಕಿಲ್ಲ. ಒಂದು ಗಳಿಕೆಯ ಗುರಿ ಇಟ್ಟುಕೊಂಡು ಠೇವಣಿ ಇಡುವವರು ಬಡ್ಡಿ ದರವನ್ನು ಮೊದಲೇ ಲೆಕ್ಕ ಹಾಕಿಕೊಂಡು, ಬೇಕಾದ ಅವಧಿಯನ್ನು ಆಯ್ಕೆ ಮಾಡಿ ಠೇವಣಿ ಇಡುವುದು ಒಳಿತು.

ನಿಶ್ಚಿತ ಗಳಿಕೆಗೆ ಅವಕಾಶ

ನಿಶ್ಚಿತ ಠೇವಣಿ ಇಡಲು ಬಯಸುವವರು ‘ಸಂಚಿತ ಠೇವಣಿ’ಯನ್ನಾದರೂ (ಕ್ಯುಮುಲೇಟಿವ್‌ ಎಫ್‌.ಡಿ.) ಇಡಬಹುದು ಅಥವಾ ಕಾಲಕಾಲಕ್ಕೆ ಬಡ್ಡಿಯ ಹಣವನ್ನು ಹಿಂದೆ ಪಡೆಯುವ ಆಯ್ಕೆಯನ್ನಾದರೂ ಮಾಡಿಕೊಳ್ಳಬಹುದು. ದೈನಂದಿನ ಖರ್ಚು ವೆಚ್ಚಗಳಿಗೆ ಹಣದ ಅಗತ್ಯ ಇರುವವರು ಕಾಲಕಾಲಕ್ಕೆ ಬರುವ ಬಡ್ಡಿ ಹಿಂತೆಗೆದುಕೊಳ್ಳಲು ಇಲ್ಲಿ ಅವಕಾಶ ಇದೆ. ಅಂತಹ ಅಗತ್ಯ ಇಲ್ಲದವರು ಅವಧಿ ಪೂರ್ಣಗೊಂಡಾಗ ಬಡ್ಡಿ ಸಹಿತವಾಗಿ ಪೂರ್ತಿ ಹಣ ಪಡೆಯಬಹುದು.

ಸಾಲ ಸೌಲಭ್ಯ

ಉಳಿತಾಯದ ಹಣವನ್ನು ಠೇವಣಿ ಇರಿಸಿದ ನಂತರ, ತುರ್ತಾಗಿ ಹಣದ ಅಗತ್ಯ ಬಂದರೆ ಠೇವಣಿಯ ಆಧಾರದಲ್ಲಿ ಸಾಲ ಪಡೆಯುವ ಸೌಲಭ್ಯವನ್ನೂ ಹಣಕಾಸು ಸಂಸ್ಥೆಗಳು ನೀಡುತ್ತವೆ. ಇದರಿಂದ ಠೇವಣಿಯನ್ನು ಅವಧಿಗೂ ಮುನ್ನ ನಗದೀಕರಿಸುವ ಅಪಾಯ ತಪ್ಪುತ್ತದೆ.

ಒಟ್ಟಿನಲ್ಲಿ ನಿಶ್ಚಿತ ಠೇವಣಿಯಲ್ಲಿ ಮೂಲ ಹೂಡಿಕೆಗೆ ಗರಿಷ್ಠ ಭದ್ರತೆ ಇರುವುದರ ಜೊತೆಗೆ ಗಳಿಕೆಯೂ ನಿಶ್ಚಿತವಾಗಿರುತ್ತದೆ. ಹೂಡಿಕೆಗೂ ಮುನ್ನ ಬೇರೆ ಬೇರೆ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನೀಡುವ ಬಡ್ಡಿ ದರವನ್ನು ತುಲನೆ ಮಾಡಿ ನೋಡಿ, ಹೆಚ್ಚಿನ ಬಡ್ಡಿ ಲಭಿಸುವ ಕಡೆಗೆ ಹೂಡಿಕೆ ಮಾಡುವುದು ಸೂಕ್ತ. ಜೊತೆಗೆ ಹೂಡಿಕೆಗೆ ಆಯ್ಕೆ ಮಾಡುವ ಸಂಸ್ಥೆಯ ರೇಟಿಂಗ್‌ ಅನ್ನೂ ನೂಡುವುದು ಅಗತ್ಯ. ನಿಶ್ಚಿತ ಠೇವಣಿ ಇಡಲು ಬ್ಯಾಂಕ್‌ ಅಥವಾ ಬೇರಾವುದೇ ಹಣಕಾಸು ಸಂಸ್ಥೆಯ ಕಚೇರಿಗೆ ಹೋಗಿ ಸರತಿ ಸಾಲಿನಲ್ಲಿ ನಿಂತು, ಹತ್ತಾರು ದಾಖಲೆಗಳನ್ನು ಕೊಡಬೇಕಾದ ಅನಿವಾರ್ಯತೆ ಈಗ ಇಲ್ಲ. ಮನೆಯಲ್ಲೇ ಇದ್ದು, ಆನ್‌ಲೈನ್‌ ಮೂಲಕವೇ ನಿಶ್ಚಿತ ಠೇವಣಿಗಳನ್ನು ಇಡಲು ಈಗ ಸಾಧ್ಯವಾಗಿದೆ.

ಹಿರಿಯ ನಾಗರಿಕರಿಗೆ ಹೆಚ್ಚಿನ ಲಾಭ

ನಿಶ್ಚಿತ ಠೇವಣಿಯು ಹಿರಿಯ ನಾಗರಿಕರಿಗೆ ಅತಿ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತದೆ. ಮೊದಲನೆಯದಾಗಿ ಹಿರಿಯ ನಾಗರಿಕರಿಗೆ ಇತರ ಠೇವಣಿದಾರರಿಗಿಂತ ಹೆಚ್ಚಿನ ಬಡ್ಡಿ ದರವನ್ನು ನಿಶ್ಚಿತ ಠೇವಣಿ ನೀಡುತ್ತದೆ. ಇದಲ್ಲದೆ, ಅವಧಿ ನಿಗದಿಗೊಳಿಸುವುದಕ್ಕೂ ಹಿರಿಯ ನಾಗರಿಕರಿಗೆ ಇತರರಿಗಿಂತ ಹೆಚ್ಚಿನ ಆಯ್ಕೆಗಳಿರುತ್ತವೆ. ಅಗತ್ಯವೆನಿಸಿದರೆ ಅವಧಿಗೂ ಮುಂಚೆಯೇ ಹಣವನ್ನು ಹಿಂದೆ ಪಡೆಯಬಹುದಾದ ಅವಕಾಶವನ್ನೂ ಅವರಿಗೆ ನೀಡಲಾಗಿದೆ. ನಿಶ್ಚಿತ ಠೇವಣಿಯಿಂದ ಹಿರಿಯ ನಾಗರಿಕರು ಗಳಿಸುವ 50ಸಾವಿರ ರೂಪಾಯಿವರೆಗಿನ ಬಡ್ಡಿಯು ತೆರಿಗೆ ಮುಕ್ತವಾಗಿರುತ್ತದೆ. ಇತರ ಠೇವಣಿದಾರರು ಗಳಿಸುವ ಪೂರ್ತಿ ಬಡ್ಡಿ ಹಣಕ್ಕೆ ತೆರಿಗೆ ಅನ್ವಯವಾಗುತ್ತದೆ.

(ಲೇಖಕ: ವಹಿವಾಟು ಮುಖ್ಯಸ್ಥ, ಬಜಾಜ್‌ ಫೈನಾನ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT