ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಿ‍ಪ್‌ಕಾರ್ಟ್‌ ಗ್ರೂಪ್‌ನಲ್ಲಿ ವಾಲ್‌ಮಾರ್ಟ್‌ನ ₹9 ಸಾವಿರ ಕೋಟಿ ಬಂಡವಾಳ ಹೂಡಿಕೆ

Last Updated 14 ಜುಲೈ 2020, 16:07 IST
ಅಕ್ಷರ ಗಾತ್ರ

ನವದೆಹಲಿ: ಇ–ಕಾಮರ್ಸ್‌ನ ದೇಶಿ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್‌, ವಾಲ್‌ಮಾರ್ಟ್‌ ನೇತೃತ್ವದಲ್ಲಿನ ಹೂಡಿಕೆದಾರರಿಂದ ₹9,056 ಕೋಟಿ ಮೊತ್ತದ ಬಂಡವಾಳ ಸಂಗ್ರಹಿಸಿದೆ.

ಪ್ರಸಕ್ತ ಹಣಕಾಸು ವರ್ಷದ ಒಳಗೆ ಈ ಹೂಡಿಕೆಯು ಎರಡು ಕಂತಿನಲ್ಲಿ ಪೂರ್ಣಗೊಳ್ಳಲಿದೆ. ದೇಶದಲ್ಲಿ ಇ–ಕಾಮರ್ಸ್‌ ಮಾರುಕಟ್ಟೆ ವಿಸ್ತರಿಸಲು ಈ ಬಂಡವಾಳ ಹೂಡಿಕೆ ನೆರವಾಗಲಿದೆ.

ಹಾಲಿ ಪಾಲುದಾರರೂ ಒಳಗೊಂಡ ಈ ಸುತ್ತಿನ ಹೂಡಿಕೆಯಿಂದ ಫ್ಲಿಪ್‌ಕಾರ್ಟ್‌ನ ಮಾರುಕಟ್ಟೆ ಮೌಲ್ಯವು ಈಗ ₹1,87,915 ಕೋಟಿಗೆ ತಲುಪಿದೆ ಎಂದು ಫ್ಲಿಪ್‌ಕಾರ್ಟ್‌ ತಿಳಿಸಿದೆ.

2018ರಲ್ಲಿ ವಾಲ್‌ಮಾರ್ಟ್‌, ₹1.07 ಲಕ್ಷ ಕೋಟಿ ಮೊತ್ತದ ಬಂಡವಾಳ ತೊಡಗಿಸಿ ಫ್ಲಿಪ್‌ಕಾರ್ಟ್‌ ಗ್ರೂಪ್‌ನ ಶೇ 77ರಷ್ಟು ಪಾಲು ಬಂಡವಾಳವನ್ನು ಖರೀದಿಸಿತ್ತು.

‘ವಾಲ್‌ಮಾರ್ಟ್‌ನ ಈ ಮೊದಲಿನ ಹೂಡಿಕೆಯಿಂದ ತಂತ್ರಜ್ಞಾನ, ಪಾಲುದಾರಿಕೆ ಮತ್ತು ಹೊಸ ಸೇವೆಗಳ ಮೂಲಕ ವಹಿವಾಟನ್ನು ಗಮನಾರ್ಹವಾಗಿ ವಿಸ್ತರಿಸಲು ಸಾಧ್ಯವಾಗಿದೆ. ಸದ್ಯಕ್ಕೆ ನಾವು ಎಲೆಕ್ಟ್ರಾನಿಕ್ಸ್‌, ಫ್ಯಾಷನ್‌ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇದ್ದೇವೆ. ದಿನಸಿ, ಡಿಜಿಟಲ್‌ ಹಣ ಪಾವತಿ ವಹಿವಾಟು ಮತ್ತು ಸರಕು ವಿತರಣೆ ಕ್ಷೇತ್ರಗಳಲ್ಲಿಯೂ ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಿದ್ದೇವೆ.ದೇಶದ 20 ಕೋಟಿ ವರ್ತಕರನ್ನು ಆನ್‌ಲೈನ್‌ ವಹಿವಾಟಿಗೆ ತರಲು ನಾವು ನಮ್ಮ ಪ್ರಯತ್ನ ಮುಂದುವರೆಸುತ್ತೇವೆ’ ಎಂದು ಫ್ಲಿಪ್‌ಕಾರ್ಟ್‌ನ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಹೇಳಿದ್ದಾರೆ.

’ಭಾರತದ ಡಿಜಿಟಲ್‌ ಬದಲಾವಣೆಯ ಭಾಗವಾಗಿರುವ ಫ್ಲಿಪ್‌ಕಾರ್ಟ್‌, ಲಕ್ಷಾಂತರ ಗ್ರಾಹಕರು, ಮಾರಾಟಗಾರರು, ವರ್ತಕರು ಮತ್ತು ಸಣ್ಣ ವ್ಯಾಪಾರಿಗಳ ಉನ್ನತಿಗೆ ನೆರವಾಗುವ ತನ್ನ ಪ್ರಯತ್ನಗಳನ್ನು ಮುಂದುವರೆಸಲಿದೆ’ ಎಂದು ವಾಲ್‌ಮಾರ್ಟ್‌ ಇಂಟರ್‌ನ್ಯಾಷನಲ್‌ನ ಸಿಇಒ ಜೂಡಿತ್‌ ಮೆಕೆನ್ನಾ ಪ್ರತಿಕ್ರಿಯಿಸಿದ್ದಾರೆ.

2007ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡಿದ್ದ ಫ್ಲಿಪ್‌ಕಾರ್ಟ್‌ ಎರಡು ವರ್ಷಗಳ ಹಿಂದೆ ಅಮೆರಿಕದ ದೈತ್ಯ ಸಂಸ್ಥೆ ವಾಲ್‌ಮಾರ್ಟ್‌ನ ಸ್ವಾಧೀನಕ್ಕೆ ಒಳಪಟ್ಟಿದೆ. ಫ್ಲಿಪ್‌ಕಾರ್ಟ್‌ ಗ್ರೂಪ್‌, ಡಿಜಿಟಲ್‌ ಪಾವತಿಯ ಫೋನ್‌ಪೇ, ಫ್ಯಾಷನ್‌ ಕ್ಷೇತ್ರದ ಮಿಂತ್ರಾ ಮತ್ತು ಇಕಾರ್ಟ್‌ ತಾಣಗಳನ್ನೂ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT