ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಿ‍ಪ್‌ಕಾರ್ಟ್‌: ನವೀಕರಿಸಿದ ಸರಕುಗಳಿಗೆ ಪ್ರತ್ಯೇಕ ತಾಣ

ಬಳಸಿದ ಸರಕುಗಳಿಗೆ ಹೊಸ ಸ್ವರೂಪ ನೀಡಿ ಮರು ಮಾರಾಟ
Last Updated 23 ಆಗಸ್ಟ್ 2018, 17:16 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಅತಿದೊಡ್ಡ ಇ–ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌, ಬಳಸಿದ ಸರಕುಗಳಿಗೆ ಹೊಸ ಸ್ವರೂಪ ನೀಡಿ ಮರು ಮಾರಾಟ ಮಾಡುವ ವಹಿವಾಟಿಗೆ ಚಾಲನೆ ನೀಡಿದೆ.

ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ವಿದ್ಯುನ್ಮಾನ ಬಿಡಿಭಾಗಗಳ ನವೀಕೃತ ಸರಕಿನ ಮಾರಾಟಕ್ಕೆ ‘ಟುಗುಡ್‌’ (2GUD) ಹೆಸರಿನ ಪ್ರತ್ಯೇಕ ಮಾರಾಟ ತಾಣ ಸೃಷ್ಟಿಸಿದೆ. ಆರಂಭದಲ್ಲಿ ಮೊಬೈಲ್‌ನಲ್ಲಿಯೇ (2gud.com) ಈ ತಾಣಕ್ಕೆ ಭೇಟಿ ನೀಡಬಹುದು. ಪ್ರತ್ಯೇಕ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈ ವಿಭಾಗದಲ್ಲಿ ಕ್ರಮೇಣ ಇನ್ನಷ್ಟು ಸರಕುಗಳನ್ನು ಸೇರ್ಪಡೆ ಮಾಡಲು ಸಂಸ್ಥೆ ಉದ್ದೇಶಿಸಿದೆ.

ನವೀಕೃತ ಸರಕುಗಳ ಮಾರುಕಟ್ಟೆಯು ಈಗ ಬಹುತೇಕ ಅಸಂಘಟಿತವಾಗಿದೆ. ಇಂತಹ ಸರಕುಗಳ ಮಾರಾಟದಲ್ಲಿ ಮುಖ್ಯವಾಗಿ ಪರಿಗಣನೆಗೆ ಬರುವ ವಿಶ್ವಾಸಾರ್ಹತೆ ಮತ್ತು ಅನುಕೂಲತೆಗೆ ಫ್ಲಿಪ್‌ಕಾರ್ಟ್‌ ಗಮನ ಹರಿಸಿದೆ. ಪ್ರಮಾಣೀಕೃತ ಉತ್ಪನ್ನಗಳ ವ್ಯಾಪಕ ಆಯ್ಕೆಗೆ ಅವಕಾಶ ಒದಗಿಸಿದೆ. ಉತ್ಪನ್ನಗಳ ವಿಶ್ವಾಸಾರ್ಹತೆಗೆ ಭರವಸೆ ನೀಡಿದೆ. ಕೈಗೆಟುಕುವ ಬೆಲೆಗೆ ಮಾರಾಟ ಮಾಡಲಿದೆ. ಇಂತಹ ಉತ್ಪನ್ನಗಳಿಗೆ ಗುಣಮಟ್ಟದ ಭರವಸೆಯನ್ನೂ ನೀಡಿದೆ.

‘ಮಾರಾಟ ನಂತರದ 3 ರಿಂದ 12 ತಿಂಗಳವರೆಗಿನ ವಾರಂಟಿ ಅವಧಿಯಲ್ಲಿ ಗ್ರಾಹಕರ ಅಗತ್ಯಗಳನ್ನು ಈಡೇರಿಸಲು ಸೇವಾಕೇಂದ್ರಗಳ ಸೌಲಭ್ಯ ಕಲ್ಪಿಸಲಾಗಿದೆ. ಗುಣಮಟ್ಟದ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಗೆ ಖರೀದಿಸಲು ಇಲ್ಲಿ ಅವಕಾಶ ಇದೆ’ ಎಂದು ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಹೇಳಿದರು.

400 ಉತ್ಪನ್ನಗಳು

ಮುಂಬರುವ ದಿನಗಳಲ್ಲಿ ಸ್ಪೀಕರ್‌, ಪವರ್ ಬ್ಯಾಂಕ್‌, ಹೇರ್‌ ಡೈಯರ್‌, ಟಿವಿ ಸೇರಿದಂತೆ 400 ಬಗೆಯ ಉತ್ಪನ್ನಗಳನ್ನು ಮಾರಾಟ ಮಾಡಲಿದೆ. ಈ ಹೊಸ ಇ–ಕಾಮರ್ಸ್‌ ತಾಣದಲ್ಲಿ ಬಳಸದ, ಗ್ರಾಹಕರು ಮರಳಿಸಿದ ಅಥವಾ ಬಳಸಿದ ಸರಕುಗಳಿಗೆ ಹೊಸ ರೂಪ ನೀಡಲಾಗಿರುತ್ತದೆ. ಪ್ರತಿಯೊಂದು ಸರಕು ಪ್ರಮಾಣಪತ್ರ ಮತ್ತು ಶ್ರೇಯಾಂಕ ಹೊಂದಿರುತ್ತದೆ. ಇಂತಹ ಸರಕುಗಳ ಬಗ್ಗೆ ಮಾರುಕಟ್ಟೆಯಲ್ಲಿ ಇರುವ ವಿಶ್ವಾಸಾರ್ಹತೆ ಕೊರತೆಯನ್ನು ಫ್ಲಿಪ್‌ಕಾರ್ಟ್‌ ದೂರ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT