ಶನಿವಾರ, ಜೂನ್ 19, 2021
23 °C
ವಿಶ್ವಸಂಸ್ಥೆ ವರದಿ

ವಿದೇಶಿ ನೇರ ಬಂಡವಾಳ ಹೂಡಿಕೆ: 9ನೇ ಸ್ಥಾನದಲ್ಲಿ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: 2019–20ನೇ ಹಣಕಾಸು ವರ್ಷದಲ್ಲಿ ಭಾರತವು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಆಕರ್ಷಿಸುವಲ್ಲಿ ವಿಶ್ವದ 9ನೇ ಅತಿದೊಡ್ಡ ದೇಶವಾಗಿದೆ.

₹ 3.82 ಲಕ್ಷ ಕೋಟಿ ಮೊತ್ತದ ಬಂಡವಾಳ ಆಕರ್ಷಿಸಿದೆ. ಭಾರತದ ಅತಿದೊಡ್ಡ ಮಾರುಕಟ್ಟೆಯು ಕೋವಿಡ್‌ ಪಿಡುಗಿನ ನಂತರವೂ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿ ಇರಲಿದೆ ಎಂದು ವ್ಯಾಪಾರ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಸಮ್ಮೇಳನವು ಸಿದ್ಧಪಡಿಸಿದ ಜಾಗತಿಕ ಬಂಡವಾಳ ಹೂಡಿಕೆ ವರದಿಯಲ್ಲಿ ತಿಳಿಸಲಾಗಿದೆ.

2018ರಲ್ಲಿ ₹ 3.15 ಲಕ್ಷ ಕೋಟಿ ಬಂಡವಾಳ ಆಕರ್ಷಿಸಿ 12ನೇ ಸ್ಥಾನದಲ್ಲಿತ್ತು. ಅಭಿವೃದ್ಧಿ ಹೊಂದುತ್ತಿರುವ ಏಷ್ಯಾ ವಲಯದಲ್ಲಿ ‘ಎಫ್‌ಡಿಐ’ ಆಕರ್ಷಿಸುವಲ್ಲಿ ಭಾರತ 5ನೇ ಸ್ಥಾನದಲ್ಲಿ ಇದೆ.

ಡಿಜಿಟಲ್‌ ಆರ್ಥಿಕತೆಯು ಕೋವಿಡ್‌ ಪಿಡುಗಿನ ನಂತರವೂ ನಿರಂತರವಾಗಿ ಹೂಡಿಕೆ ಆಕರ್ಷಿಸಲಿದೆ. ಐ.ಟಿ ಮತ್ತು ನಿರ್ಮಾಣ ಉದ್ದಿಮೆಯಲ್ಲಿ ವಿದೇಶಿ ಬಂಡವಾಳದ ಹರಿವು ಇರಲಿದೆ.

2019ರಲ್ಲಿನ ₹ 115.5 ಲಕ್ಷ ಕೋಟಿ ಮೊತ್ತದ ‘ಎಫ್‌ಡಿಐ’ಗೆ ಹೋಲಿಸಿದರೆ, 2020ರಲ್ಲಿ ಜಾಗತಿಕ ‘ಎಫ್‌ಡಿಐ’ ಹರಿವು ಶೇ 40ರಷ್ಟು ಕಡಿಮೆಯಾಗಲಿದೆ. 2005ರಿಂದೀಚೆಗೆ ಜಾಗತಿಕ ‘ಎಫ್‌ಡಿಐ’ ₹ 75 ಲಕ್ಷ ಕೋಟಿಗಿಂತ ಕಡಿಮೆ ಆಗಲಿರುವುದು ಇದೇ ಮೊದಲ ಬಾರಿಯಾಗಿದೆ.

ಸ್ಪರ್ಧಾತ್ಮಕ ಸೂಚ್ಯಂಕ: 43ನೇ ಸ್ಥಾನ

ವಾರ್ಷಿಕ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತವು 43ನೇ ಶ್ರೇಯಾಂಕವನ್ನು ಉಳಿಸಿಕೊಂಡಿದೆ.

ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಡೆವಲಪ್‌ಮೆಂಟ್‌ (ಐಎಂಡಿ) ಸಿದ್ಧಪಡಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ.

ಕಳಪೆ ಮೂಲ ಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬಂಡವಾಳ ಹೂಡಿಕೆ ಮಾಡದಿರುವ ಕಾರಣಕ್ಕೆ ಭಾರತದ ಶ್ರೇಯಾಂಕ ಕೆಳಮಟ್ಟದಲ್ಲಿ ಇದೆ ಎಂದು ಇಂಟರ್‌ನ್ಯಾಷನಲ್‌ ಬಿಸಿನೆಸ್‌ ಸ್ಕೂಲ್‌ ತಿಳಿಸಿದೆ.

63 ದೇಶಗಳ ಪಟ್ಟಿಯಲ್ಲಿ ಸಿಂಗಪುರ ಮೊದಲ ಸ್ಥಾನದಲ್ಲಿ ಇದೆ. ಅಮೆರಿಕವು 3ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಮತ್ತು ಚೀನಾ 14 ರಿಂದ 20ನೇ ಸ್ಥಾನಕ್ಕೆ ಕುಸಿದಿದೆ.

ಭಾರತದ ಸ್ಥಾನಮಾನ ಬದಲಾಗಿರದಿದ್ದರೂ, ದೀರ್ಘಾವಧಿ ಉದ್ಯೋಗಾವಕಾಶ ಪ್ರಗತಿ, ಚಾಲ್ತಿ ಖಾತೆ ಸಮತೋಲನ, ಅತ್ಯಾಧುನಿಕ ತಂತ್ರ‌ಜ್ಞಾನ ರಫ್ತು, ವಿದೇಶಿ ವಿನಿಮಯ ಸಂಗ್ರಹ, ರಾಜಕೀಯ ಸ್ಥಿರತೆ ಮತ್ತು ಒಟ್ಟಾರೆ ಉತ್ಪಾದನೆಯಲ್ಲಿ ಸುಧಾರಣೆ ಕಂಡಿದೆ ಎಂದು ’ಐಎಂಡಿ’ ತಿಳಿಸಿದೆ.

***

ವರ್ಷ; ಹೂಡಿಕೆ ( ₹ ಲಕ್ಷ ಕೋಟಿಗಳಲ್ಲಿ)

2019; 3.82

2018; 3.15 

***

₹ 115.5 ಲಕ್ಷ ಕೋಟಿ: 2019ರಲ್ಲಿನ ಜಾಗತಿಕ ‘ಎಫ್‌ಡಿಐ’ ಹರಿವು

40 %: 2020ರಲ್ಲಿನ ’ಎಫ್‌ಡಿಐ’ ಹರಿವಿನಲ್ಲಿನ ಕುಸಿತ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು