ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶಿ ವಿನಿಮಯ ಮೀಸಲು ಸಂಗ್ರಹ ₹1.20 ಲಕ್ಷ ಕೋಟಿ ಹೆಚ್ಚಳ

Last Updated 19 ನವೆಂಬರ್ 2022, 17:54 IST
ಅಕ್ಷರ ಗಾತ್ರ

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ನವೆಂಬರ್‌ 11ಕ್ಕೆ ಕೊನೆಗೊಂಡ ವಾರದಲ್ಲಿ ₹1.20 ಲಕ್ಷ ಕೋಟಿಯಷ್ಟು ಏರಿಕೆ ಕಂಡಿದೆ. 2021ರ ಆಗಸ್ಟ್‌ ತಿಂಗಳ ನಂತರ ವಾರವೊಂದರಲ್ಲಿ ಆಗಿರುವ ಗರಿಷ್ಠ ಏರಿಕೆ ಇದಾಗಿದೆ. ಈ ಹಿಂದೆ 2021ರ ಆಗಸ್ಟ್‌ 27ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ಸಂಗ್ರಹವು ₹1.36 ಲಕ್ಷ ಕೋಟಿ ಹೆಚ್ಚಾಗಿತ್ತು.

ಆದರೆ, ಜಾಗತಿಕ ಅಸ್ಥಿರತೆಯ ಮಧ್ಯೆ ರೂಪಾಯಿ ಮೌಲ್ಯ ಕುಸಿಯುವುದನ್ನು ತಡೆಯಲು ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಮಧ್ಯಪ್ರವೇಶ ಮಾಡುತ್ತಿರುವುದರಿಂದ ಮಾರ್ಚ್ ತಿಂಗಳಿನಿಂದ ಈಚೆಗೆ ಮೀಸಲು ಸಂಗ್ರಹದಲ್ಲಿ ₹9.02 ಲಕ್ಷ ಕೋಟಿ ಕರಗಿದೆ.

ಆರ್‌ಬಿಐ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ನವೆಂಬರ್‌ 11ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ಸಂಗ್ರಹವು ₹44.66 ಲಕ್ಷ ಕೋಟಿಗೆ ಏರಿಕೆ ಆಗಿದೆ. ನವೆಂಬರ್‌ 4ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ಸಂಗ್ರಹವು ₹43.45 ಲಕ್ಷ ಕೋಟಿ ಇತ್ತು.

ಒಟ್ಟು ಮೊತ್ತದಲ್ಲಿ ವಿದೇಶಿ ಕರೆನ್ಸಿಗಳ ಸಂಗ್ರಹದ ಪಾಲು ದೊಡ್ಡ ಮಟ್ಟದಲ್ಲಿ ಇದೆ. ನವೆಂಬರ್ 11ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ಕರೆನ್ಸಿಗಳ ಸಂಗ್ರಹವು ₹96,760 ಕೋಟಿಯಷ್ಟು ಏರಿಕೆ ಆಗಿದ್ದು, ₹39.56 ಲಕ್ಷ ಕೋಟಿಗೆ ತಲುಪಿದೆ. ಇದರಿಂದಾಗಿ ಒಟ್ಟು ಮೀಸಲು ಸಂಗ್ರಹದಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಚಿನ್ನದ ಮೀಸಲು ಸಂಗ್ರಹದಲ್ಲಿ ₹21,648 ಕೋಟಿ ಹೆಚ್ಚಾಗಿ ₹3.25 ಲಕ್ಷ ಕೋಟಿಗೆ ಏರಿಕೆ ಆಗಿದೆ.

ಅಕ್ಟೋಬರ್ 21ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ಸಂಗ್ರಹವು ₹9.67 ಲಕ್ಷ ಕೋಟಿ ಇಳಿಕೆ ಕಂಡು ₹43.45 ಲಕ್ಷ ಕೋಟಿಗೆ ತಲುಪಿತ್ತು.

ಟ್ರಷರಿ ಮುಖ್ಯಸ್ಥರ ಪ್ರಕಾರ, ಆರ್‌ಬಿಐ ಈಚೆಗಷ್ಟೇ ₹65,600 ಕೋಟಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಖರೀದಿ ಮಾಡಿರುವುದೇ ಮೀಸಲು ಸಂಗ್ರಹದಲ್ಲಿ ಭಾರಿ ಏರಿಕೆಗೆ ಪ್ರಮುಖ ಕಾರಣ.

ಉಕ್ರೇನ್‌ ಸಮರ ಆರಂಭ ಆದಾಗಿನಿಂದ ರೂಪಾಯಿ ಮೌಲ್ಯ ಭಾರಿ ಕುಸಿತ ಕಾಣುವುದನ್ನು ತಡೆಯಲು ಆರ್‌ಬಿಐ ಮೀಸಲು ಸಂಗ್ರಹದಲ್ಲಿ ಒಂದು ಭಾಗವನ್ನು ಮಾರಾಟ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT