ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1 ಲಕ್ಷ ಕೋಟಿ ದಾಟಿದ ಎಫ್‌ಪಿಐ ಹೊರ ಹರಿವು

ರಷ್ಯಾ–ಉಕ್ರೇನ್‌ ಬಿಕ್ಕಟ್ಟು, ಹಣದುಬ್ಬರ ಏರಿಕೆ ಪರಿಣಾಮ
Last Updated 27 ಮಾರ್ಚ್ 2022, 12:26 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ರಾಜಕೀಯ ಬಿಕ್ಕಟ್ಟು ಮತ್ತು ಹಣದುಬ್ಬರದ ಕಾರಣಗಳಿಂದಾಗಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಈ ವರ್ಷದಲ್ಲಿ ಇದುವರೆಗೆ ₹ 1.14 ಲಕ್ಷ ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ಮಾರ್ಚ್‌ ತಿಂಗಳಿನಲ್ಲಿ ಈವರೆಗೆ ₹ 48,262 ಕೋಟಿ ಮೌಲ್ಯದ ದೇಶಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಹೀಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟಾರೆ ಬಂಡವಾಳ ಹೊರಹರಿವು ₹ 1 ಲಕ್ಷ ಕೋಟಿಯನ್ನು ದಾಟುವಂತಾಗಿದೆ.

ರಷ್ಯಾ–ಉಕ್ರೇನ್‌ ಸಂಘರ್ಷದಿಂದ ಜಾಗತಿಕ ಆರ್ಥಿಕತೆಯ ಮೇಲೆ ಆಗುತ್ತಿರುವ ಪರಿಣಾಮ ಮತ್ತು ಹಣದುಬ್ಬರದ ಒತ್ತಡದಿಂದಾಗಿ ಬಂಡವಾಳ ಹೊರಹರಿವು ಆಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಹೂಡಿಕೆದಾರರು ಸತತ ಆರನೇ ತಿಂಗಳಿನಲ್ಲಿಯೂ ಭಾರತದ ಷೇರುಪೇಟೆಯಿಂದ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ಭಾರತವು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ತೈಲ ದರ ಏರಿಕೆಯು ಸರಕುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿ ದೇಶದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು ಎಂದು ಹೂಡಿಕೆದಾರರು ಆತಂಕಗೊಂಡಿದ್ದಾರೆ.

‘ಕಚ್ಚಾ ತೈಲ ದರದಲ್ಲಿ ಶೇಕಡ 10ರಷ್ಟು ಏರಿಕೆ ಆದಲ್ಲಿ ಅದರಿಂದ ಚಾಲ್ತಿ ಖಾತೆ ಕೊರತೆಯು ಶೇ 0.30ರಷ್ಟು ಹೆಚ್ಚಾಗಲಿದೆ. ಗ್ರಾಹಕ ದರ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 0.40ರಷ್ಟು ಹೆಚ್ಚಾಗಲಿದೆ’ ಎಂದು ಕೋಟಕ್‌ ಮಹೀಂದ್ರ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಶಿವಾನಿ ಕುರಿಯನ್‌ ಹೇಳಿದ್ದಾರೆ.

‘ಜಾಗತಿಕ ರಾಜಕೀಯ ಬಿಕ್ಕಟ್ಟು ಮತ್ತು ಸರಕುಗಳ ಬೆಲೆ ಏರಿಕೆಯಿಂದಾಗಿ ಬೇಡಿಕೆ ಮತ್ತು ಲಾಭದ ಮೇಲೆ ಪರಿಣಾಮ ಉಂಟಾಗಲಿದೆ. ಇದರಿಂದಾಗಿ ಬೆಳವಣಿಗೆ ಮತ್ತು ಗಳಿಕೆಯ ಅಂದಾಜು ತಗ್ಗಿಸಬೇಕಾಗಿ ಬರಲಿದೆ’ ಎಂದು ಜೂಲಿಯಸ್ ಬೇರ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮಿಲಿಂದ್ ಮುಚ್ಚಾಲಾ ಹೇಳಿದ್ದಾರೆ.

ಬಂಡವಾಳ ಹೊರಹರಿವು

ಜನವರಿ;₹ 28,526

ಫೆಬ್ರುವರಿ;₹ 38,068

ಮಾರ್ಚ್‌;₹ 48,262

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT