ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ20: ಕ್ರಿಯಾಶೀಲ ಕಾರ್ಯಸೂಚಿ

Last Updated 12 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಜಗತ್ತು ನೀತಿ ನಿರೂಪಣೆಗೆ ಸಂಬಂಧಿಸಿದ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ಸನ್ನಿವೇಶದಲ್ಲಿ ಭಾರತವು ಜಿ–20ರ ಅಧ್ಯಕ್ಷತೆ ವಹಿಸಿಕೊಂಡಿದೆ. ಜಾಗತಿಕವಾಗಿ ಪ್ರಗತಿ ಮತ್ತು ವ್ಯಾಪಾರ ಕುಂಠಿತಗೊಂಡಿದೆ, ಹಣದುಬ್ಬರ ಏರಿಕೆಯಾಗಿದೆ, ಹಣಕಾಸು ನೀತಿಯನ್ನು ಆಕ್ರಮಣಶೀಲವಾಗಿ ಬಿಗಿಗೊಳಿಸಲಾಗಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಇತರ ಸಮಸ್ಯೆಗಳೂ ತಲೆದೋರಿವೆ. ಭೌಗೋಳಿಕ–ರಾಜಕೀಯ ತಿಕ್ಕಾಟಗಳು, ಸಾಲ ಬಿಕ್ಕಟ್ಟು, ಹವಾಮಾನ ಬದಲಾವಣೆ ತಂದಿರುವ ಸಮಸ್ಯೆಗಳು, ಸಾಂಕ್ರಾಮಿಕದ ಹೊಡೆತಗಳೆಲ್ಲವೂ ಸೇರಿದ ಮಹಾ ಬಿಕ್ಕಟ್ಟನ್ನು ಜಿ–20 ದೇಶಗಳು ಎದುರಿಸುತ್ತಿವೆ.

ವಿವಿಧ ಶಕ್ತಿಗಳು ಜಾಗತೀಕರಣದ ಹೆಣಿಗೆಗಳನ್ನು ವಿವಿಧ ಭಾಗಗಳತ್ತ ಎಳೆದಾಡುತ್ತಿರುವ ಈ ಹೊತ್ತಿನಲ್ಲಿ, ಜಾಗತಿಕ ನೀತಿ ಸಹಕಾರಕ್ಕೆ ಉತ್ತೇಜನ ನೀಡುವಲ್ಲಿ ಜಿ20ರ ಪಾತ್ರವು ನಿರ್ಣಾಯಕ.

ಭಾರತದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) 2023ರಲ್ಲಿ ಶೇ 6.1ರ ದರದಲ್ಲಿ ಏರಿಕೆ ಕಾಣಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯು ಅಂದಾಜಿಸಿದೆ. ಇದು ಜಿ20 ರಾಷ್ಟ್ರಗಳಲ್ಲಿಯೇ ಅತ್ಯಧಿಕ. ಹೊಣೆಗಾರಿಕೆ ಮತ್ತು ಮಹತ್ವಾಕಾಂಕ್ಷೆಯ ನಡುವೆ ಸಮತೋಲನ, ಏಕತೆ ಮತ್ತು ಅಂತರಸಂಬಂಧವನ್ನು ಸಾಧಿಸುವುದುಜಿ20ಯ ಭಾರತದ ಅಧ್ಯಕ್ಷತೆಯ ಅವಧಿಯ ಮುನ್ನೋಟವಾಗಿದೆ.

ಡಿಜಿಟಲ್‌ ತಂತ್ರಜ್ಞಾನದಲ್ಲಿ ನಾವು ಬಹಳಷ್ಟನ್ನು ಸಾಧಿಸಿದ್ದೇವೆ ಮತ್ತು ನಮ್ಮಲ್ಲಿ ಅತ್ಯಂತ ಚಲನಶೀಲವಾದ ಹಣಕಾಸು ತಂತ್ರಜ್ಞಾನ ವ್ಯವಸ್ಥೆ ಇದೆ. ಹೀಗಾಗಿ, ಆರ್ಥಿಕ ಒಳಗೊಳ್ಳುವಿಕೆಯ ವಿಸ್ತರಣೆ, ಉತ್ಪಾದಕತೆ ಹೆಚ್ಚಳ ಮತ್ತು ಆರ್ಥಿಕ ಸಮನ್ವಯಕ್ಕಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಮಾಡಲು ಸಾಧ್ಯವಿರುವ ಸ್ಥಿತಿಯಲ್ಲಿ ಭಾರತ ಇದೆ. ಹವಾಮಾನ ಬದಲಾವಣೆಯ ದುಷ್ಪರಿಣಾಮ ಗಳನ್ನು ಕಡಿಮೆ ಮಾಡಲು ಅಭಿವೃದ್ಧಿಶೀಲ ದೇಶಗಳಿಗೆ ನೆರವಾಗಲು ಸಾಧ್ಯವಾಗುವ ಸ್ಥಿತಿಯಲ್ಲಿಯೂ ಭಾರತವು ಇದೆ.

ಹಣಕಾಸು ವಿಭಾಗದ ಮೊದಲ ಸಭೆಯು ಬೆಂಗಳೂರಿನಲ್ಲಿ ಇದೇ ಮಂಗಳವಾರದಿಂದ ಗುರುವಾರದ ವರೆಗೆ ನಡೆಯಲಿದೆ. ಭಾರತದ ಆದ್ಯತೆಗಳೇನು ಮತ್ತು ಏನೆಲ್ಲವನ್ನು ಮಾಡಲು ಸಾಧ್ಯವಿದೆ ಎಂಬುದನ್ನು ಈ ಸಭೆಯಲ್ಲಿ ವಿವರಿಸ ಲಾಗುವುದು. ಅಂತರರಾಷ್ಟ್ರೀಯ ಹಣಕಾಸು, ಜಾಗತಿಕ ಅರ್ಥವ್ಯವಸ್ಥೆ, ಮೂಲಸೌಕರ್ಯ ಹೂಡಿಕೆ, ಸುಸ್ಥಿರ ಹಣಕಾಸು, ಅಂತರರಾಷ್ಟ್ರೀಯ ತೆರಿಗೆ, ಆರೋಗ್ಯ ಮತ್ತು ಹಣಕಾಸು, ಹಣಕಾಸು ಕ್ಷೇತ್ರದ ಮೇಲೆ ನಿಯಂತ್ರಣ, ಹಣಕಾಸು ಒಳಗೊಳ್ಳುವಿಕೆ ಎಂಬ ಎಂಟು ವಿಚಾರಗಳಲ್ಲಿ ಚರ್ಚೆ ನಡೆಯಲಿದೆ.

ಜಾಗತಿಕ ಹಣಕಾಸು ಸುರಕ್ಷತಾ ಜಾಲಗಳನ್ನು ಬಲಪಡಿಸುವುದು, ಜಾಗತಿಕ ಸಾಲ ಸಮಸ್ಯೆಗಳ ನಿರ್ವಹಣೆ, ಆಹಾರ ಮತ್ತು ಇಂಧನ ಅಸುರಕ್ಷತೆಯ ಆರ್ಥಿಕ ಪರಿಣಾಮಗಳ ಅಂದಾಜು, ಭವಿಷ್ಯದ ನಗರಗಳಿಗೆ ಸುಸ್ಥಿರ ಹಣಕಾಸು ಮುಂತಾದ ವಿಚಾರಗಳು ನಮ್ಮ ಆದ್ಯತೆಗಳಲ್ಲಿ ಸೇರಿವೆ. ಹವಾಮಾನ ಬದಲಾವಣೆ ತಡೆಗೆ ಬೇಕಾದಷ್ಟು ಮತ್ತು ಸಕಾಲದಲ್ಲಿ ಹಣಕಾಸು ಸಂಪನ್ಮೂಲ ಒದಗಿಸುವ ದಿಸೆಯಲ್ಲಿಯೂ ಭಾರತವು ಕೆಲಸ ಮಾಡಲಿದೆ. ಅಂತರರಾಷ್ಟ್ರೀಯ ತೆರಿಗೆ ವಿಚಾರದಲ್ಲಿ ಜಿ20 ಮಾಡಿರುವ ಕೆಲಸಗಳನ್ನು ಇನ್ನಷ್ಟು ಮುಂದಕ್ಕೆ ಒಯ್ಯಲಾಗುವುದು. ಸಾಂಕ್ರಾಮಿಕದ ಅಪಾಯಗಳು ಮತ್ತು ಅದರಿಂದಾದ ದೌರ್ಬಲ್ಯಗಳು ಹಾಗೂ ಹೊಸ ಸಾಂಕ್ರಾಮಿಕ ಒಡ್ಡಬಹುದಾದ ಬೆದರಿಕೆಗಳ ಸ್ಪಂದನೆಗಾಗಿ ಜಿ20 ನೇತೃತ್ವದ ಹಣಕಾಸು ಮತ್ತು ಆರೋಗ್ಯ ಸಮನ್ವಯ ವ್ಯವಸ್ಥೆ ರೂಪಿಸಲಾಗುವುದು.

ಡಿಜಿಟಲ್‌ ಹಣಕಾಸು ಸೇವೆಗಳ ಹೆಚ್ಚಳ ಮತ್ತು ಮೂರನೇ ಸೇವಾ ಸಂಸ್ಥೆ ಮೇಲಿನ ಅವಲಂಬನೆ ಹೆಚ್ಚಳವು ಹಣಕಾಸು ವ್ಯವಸ್ಥೆಯನ್ನು ವಿವಿಧ ರೀತಿಯ ಅಪಾಯಗಳಿಗೆ ತೆರೆದಿಟ್ಟಿವೆ. ಈ ಅಪಾಯಗಳನ್ನು ತಗ್ಗಿಸಲು ಅಂತರರಾಷ್ಟ್ರೀಯ ಸಹಕಾರಕ್ಕೆ ನಾವು ಪ್ರೋತ್ಸಾಹ ನೀಡಲಿದ್ದೇವೆ.

ಜಾಗತಿಕ ಸಮಸ್ಯೆಗಳಿಗೆ ಜಾಗತಿಕ ಮಟ್ಟದಲ್ಲಿ ಸಮನ್ವಯಗೊಂಡ ಪರಿಹಾರಗಳು ಅಗತ್ಯ ಎಂಬ ಬದ್ಧತೆಯು ಜಿ20ಯ ನೆಲೆಗಟ್ಟಾಗಿದೆ. ಪ್ರಬಲ, ಸುಸ್ಥಿರ, ಸಮತೋಲಿತ ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿಯನ್ನು ಸಾಧಿಸುವುದಕ್ಕಾಗಿ ಜಗತ್ತಿನ ಎಲ್ಲ ಪ್ರಮುಖ ಅರ್ಥ
ವ್ಯವಸ್ಥೆಗಳನ್ನು ಜೊತೆಗೂಡಿಸುವ ಭರವಸೆ ಈಗ ನಮ್ಮ ಮುಂದೆ ಇದೆ. ಪ್ರತಿಯೊಂದು ಬಿಕ್ಕಟ್ಟು ಕೂಡ ಅವಕಾಶವನ್ನು ಮುಂದಿಡುತ್ತದೆ. ಹಾಗಾಗಿಯೇ, ಈಗ ನಮ್ಮ ಮುಂದೆ ಇರುವ ಮಹಾಬಿಕ್ಕಟ್ಟು ಮುಂದಿರುವ ಸವಾಲುಗಳನ್ನು ಎದುರಿಸಲು ಜಾಗತಿಕ ನೀತಿ ಸಹಕಾರವು ಪುನಶ್ಚೇತನಗೊಳ್ಳಲಿದೆ. ಸಮಾನ ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿ ಎಂದರೆ ವಸುಧೈವ ಕುಟುಂಬಕಂ, ಅಂದರೆ, ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ.

ಲೇಖಕರು: ಅಜಯ್ ಸೇಠ್, ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಇಲಾಖೆ, ಹಣಕಾಸು ಸಚಿವಾಲಯ; ಡಾ. ಮೈಕೆಲ್ ಡಿ ಪಾತ್ರಾ, ಡೆಪ್ಯುಟಿ ಗವರ್ನರ್‌, ಭಾರತೀಯ ರಿಸರ್ವ್ ಬ್ಯಾಂಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT