ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಥೆನಾಲ್ ಬಳಸುವ ವಾಹನಗಳ ಮೇಲಿನ ಜಿಎಸ್‌ಟಿ ತಗ್ಗಿಸಿ: ಗಡ್ಕರಿ

Published 2 ಸೆಪ್ಟೆಂಬರ್ 2024, 13:52 IST
Last Updated 2 ಸೆಪ್ಟೆಂಬರ್ 2024, 13:52 IST
ಅಕ್ಷರ ಗಾತ್ರ

ನವದೆಹಲಿ: ಎಥೆನಾಲ್ ಬಳಸುವ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ 12ಕ್ಕೆ ಇಳಿಸುವ ಕುರಿತು ಜಿಎಸ್‌ಟಿ ಮಂಡಳಿಯಲ್ಲಿ ರಾಜ್ಯಗಳ ಹಣಕಾಸು ಸಚಿವರು ಚರ್ಚಿಸಬೇಕಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಪಳೆಯುಳಿಕೆ ಇಂಧನದ ಆಮದು ಕಡಿಮೆ ಮಾಡುವ ಮತ್ತು ಜೈವಿಕ ಇಂಧನ ಬಳಕೆಯನ್ನು ಉತ್ತೇಜಿಸುವ ಅವಶ್ಯವಿದೆ ಎಂದು ಸೋಮವಾರ ನಡೆದ ಜೈವಿಕ–ಇಂಧನ ಮತ್ತು ಟೆಕ್‌ ಎಕ್ಸ್‌ಪೋ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮಗೆ ವಿವಿಧ ರಾಜ್ಯಗಳ ಹಣಕಾಸು ಸಚಿವರಿಂದ ಬೆಂಬಲ ಬೇಕಿದೆ. ನಾವು ಎಲ್ಲಾ ಹಣಕಾಸು ಸಚಿವರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಕೇಂದ್ರ ಹಣಕಾಸು ಸಚಿವರು ನನಗೆ ಭರವಸೆ ನೀಡಿದ್ದಾರೆ ಎಂದರು.

ಎಥೆನಾಲ್‌ ಬಳಸುವ ಕಾರುಗಳು ಮತ್ತು ಸ್ಕೂಟರ್‌ ಮೇಲೆ ಜಿಎಸ್‌ಟಿಯನ್ನು ಕಡಿತಗೊಳಿಸುವ ಪ್ರಸ್ತಾವವನ್ನು ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಮಾಡುವಂತೆ ಈಗಾಗಲೇ ಮಹಾರಾಷ್ಟ್ರದ ಹಣಕಾಸು ಸಚಿವರು ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಜೊತೆ ಪ್ರತ್ಯೇಕವಾಗಿ ಮಾತನಾಡಿದ್ದೇನೆ. ಇದರ ಯಶಸ್ಸಿಗೆ ಎಲ್ಲ ರಾಜ್ಯಗಳ ಸಹಕಾರ ಅಗತ್ಯ ಎಂದರು.

ಭಾರತವು ಪ್ರತಿ ವರ್ಷ ₹22 ಲಕ್ಷ ಕೋಟಿ ಮೌಲ್ಯದ ಪಳೆಯುಳಿಕೆ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಸಮಸ್ಯೆ ಮಾತ್ರವಲ್ಲದೆ ಆರ್ಥಿಕ ಸಮಸ್ಯೆಯೂ ಆಗಿದೆ. ಆದ್ದರಿಂದ, ತೈಲ ಆಮದು ಪ್ರಮಾಣ ಕಡಿಮೆ ಮಾಡಬೇಕು ಮತ್ತು ಜೈವಿಕ ಇಂಧನ ಬಳಕೆಗೆ ಉತ್ತೇಜನ ನೀಡಬೇಕು ಎಂದರು.  

ಈ ವಾಹನಗಳಲ್ಲಿ ಪೆಟ್ರೋಲ್‌ಗೆ ಎಥೆನಾಲ್ ಅಥವಾ ಮಿಥೆನಾಲ್‌ ಮಿಶ್ರಣ ಮಾಡಿ, ಇಂಧನವಾಗಿ ಬಳಸಲಾಗುತ್ತದೆ. ಪ್ರಸ್ತುತ ಹೈಬ್ರಿಡ್‌ ವಾಹನಗಳು ಸೇರಿ ಇಂಟರ್‌ನಲ್‌ ಕಂಬಷನ್‌ ಎಂಜಿನ್‌ (ಆಂತರಿಕ ದಹನಕಾರಿ ಎಂಜಿನ್‌) ವಾಹನಗಳ ಮೇಲೆ ಶೇ 28ರಷ್ಟು ಜಿಎಸ್‌ಟಿ ವಿಧಿಸುತ್ತಿದ್ದರೆ, ವಿದ್ಯುತ್ ಚಾಲಿತ ವಾಹನಗಳ ಮೇಲೆ ಶೇ 5ರಷ್ಟು ಜಿಎಸ್‌ಟಿ ಇದೆ.

Highlights -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT