ಶುಕ್ರವಾರ, ಸೆಪ್ಟೆಂಬರ್ 17, 2021
24 °C

ಮೂಲಸೌಕರ್ಯ ಅಭಿವೃದ್ಧಿಗೆ ಆರ್‌ಬಿಐನ ಹೆಚ್ಚುವರಿ ಮೀಸಲು ನಿಧಿ: ಗಡ್ಕರಿ ಇಂಗಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹೆಚ್ಚುವರಿ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಸ್ತೆ ನಿರ್ಮಾಣ ಯೋಜನೆಗಳಿಗೆ ಬಳಸುವ ನೀತಿಯೊಂದನ್ನು ರೂಪಿಸುವ ಅಗತ್ಯವಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘವು (ಸಿಐಐ) ಆಯೋಜಿಸಿದ್ದ ವರ್ಚುವಲ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾವು ಹೆಚ್ಚಿನ ಪ್ರಮಾಣದ ಮೀಸಲು ನಿಧಿಯನ್ನು ಹೊಂದಿದ್ದೇವೆ. ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆ ಹೆಚ್ಚುವರಿ ಮೀಸಲು ನಿಧಿಯನ್ನು ಹೇಗೆ ಬಳಸಬಹುದು ಎನ್ನುವ ಕುರಿತು ನೀತಿಯೊಂದನ್ನು ರೂಪಿಸಲು ಆರ್‌ಬಿಐ ಗವರ್ನರ್‌ ಜೊತೆ ಮಾತನಾಡಲು ನಿರ್ಧರಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಆರ್‌ಬಿಐನ ಮಾಹಿತಿಯ ಪ್ರಕಾರ, ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯು ಜುಲೈ 30ರ ಅಂತ್ಯಕ್ಕೆ ₹ 69,759 ಕೋಟಿಗಳಷ್ಟು ಹೆಚ್ಚಾಗಿ  ಒಟ್ಟಾರೆ ಮೀಸಲು ನಿಧಿಯು ₹ 45.95 ಲಕ್ಷ ಕೋಟಿಗಳಿಗೆ ಏರಿಕೆ ಕಂಡಿದೆ.

ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯುಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ದೀರ್ಘಾವಧಿಯ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸಲು ಈ ಹೆಚ್ಚುವರಿ ನಿಧಿಯನ್ನು ಬಳಸಿಕೊಳ್ಳುವ ಸಾಧ್ಯತೆಗಳನ್ನು ಪರಿಗಣಿಸಬಹುದು ಎಂದು ಸಂಸದೀಯ ಸಮಿತಿಯು ಈಚೆಗಷ್ಟೇ ಸಲಹೆ ನೀಡಿತ್ತು.

‘ಭಾರತದಲ್ಲಿ ಮೂಲಸೌಕರ್ಯ ನಿಧಿ ಸ್ಥಾಪಿಸುವ ಕುರಿತಾಗಿ ವಿಶ್ವಬ್ಯಾಂಕ್‌, ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಮತ್ತು ನ್ಯೂ ಡೆವಲಪ್‌ಮೆಂಟ್‌ ಬ್ಯಾಂಕ್‌ ಜೊತೆ ಮಾತುಕತೆ ನಡೆಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಮೂಲಸೌಕರ್ಯ ಯೋಜನೆಗಳಿಗೆ ಕಡಿಮೆ ಬಡ್ಡಿದರಕ್ಕೆ ನೆರವು ನೀಡುವಂತಹಾ ಹಣಕಾಸು ಸಂಸ್ಥೆಗಳ ಅಗತ್ಯ ಇದೆ’ ಎಂದು ಗಡ್ಕರಿ ಹೇಳಿದ್ದಾರೆ.

ಭಾರತೀಯ ರೈಲ್ವೆಯು ‘ಐಆರ್‌ಎಫ್‌ಸಿ’, ಇಂಧನ ಸಚಿವಾಲಯವು ಪವರ್‌ ಫೈನಾನ್ಸ್‌ ಕಾರ್ಪೊರೇಷನ್‌ (ಪಿಎಫ್‌ಸಿ) ಹೊಂದಿರುವಂತೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ (ಎನ್‌ಎಚ್‌ಎಐ) ಒಂದು ಹಣಕಾಸು ಸಂಸ್ಥೆಯ ಅಗತ್ಯ ಇದೆ ಎಂದು ಸಚಿವ ಗಡ್ಕರಿ ಪ್ರತಿಪಾದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು