ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಕುಸಿತ ಆಘಾತಕಾರಿ: ರಾಜನ್

Last Updated 7 ಸೆಪ್ಟೆಂಬರ್ 2020, 16:28 IST
ಅಕ್ಷರ ಗಾತ್ರ

ನವದೆಹಲಿ: ಹಾಲಿ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಶೇಕಡ 23.9ರಷ್ಟು ಕುಸಿದಿರುವುದು ಆಘಾತಕಾರಿ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಅಧಿಕಾರಶಾಹಿಯು ಈ ಸಂದರ್ಭದಲ್ಲಿ ತೃಪ್ತಿ ಮನೋಭಾವದಿಂದ ಹೊರಬಂದು, ಅರ್ಥಪೂರ್ಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ಈಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಹೆಚ್ಚು ಸಕ್ರಿಯವಾದ ಸರ್ಕಾರ ಬೇಕು. ಆದರೆ, ದುರದೃಷ್ಟದ ಸಂಗತಿಯೆಂದರೆ ಆರಂಭದಲ್ಲಿ ಒಂದಿಷ್ಟು ಸಕ್ರಿಯವಾಗಿದ್ದನ್ನು ಹೊರತುಪಡಿಸಿದರೆ, ಸರ್ಕಾರವು ಚಿಪ್ಪಿನೊಳಕ್ಕೆ ಅವಿತುಕೊಂಡಿರುವಂತೆ ಭಾಸವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಆರ್ಥಿಕ ಬೆಳವಣಿಗೆಯಲ್ಲಿನ ತೀವ್ರ ಕುಸಿತವು ನಮ್ಮೆಲ್ಲರನ್ನೂ ಎಚ್ಚರಿಸಬೇಕು. ಮುಂದುವರಿದ ರಾಷ್ಟ್ರಗಳ ಪೈಕಿ ಅಮೆರಿಕದ ಜಿಡಿಪಿ ಶೇ 12.4ರಷ್ಟು, ಇಟಲಿಯ ಜಿಡಿಪಿ ಶೇ 9.5ರಷ್ಟು ಕುಸಿದಿವೆ. ಈ ದೇಶಗಳ ಜಿಡಿಪಿ ಕುಸಿತವನ್ನು ಭಾರತದ ಜಿಡಿಪಿ ಕುಸಿತದ ಜೊತೆ ಹೋಲಿಸಬೇಕು’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋವಿಡ್–19 ಸಾಂಕ್ರಾಮಿಕವು ದೇಶದಲ್ಲಿ ಈಗಲೂ ಹರಡುತ್ತಿದೆ. ಹಾಗಾಗಿ, ಜನ ರೆಸ್ಟಾರೆಂಟ್‌ಗಳಿಗೆ ಹೋಗಿ ಖರ್ಚು ಮಾಡುವುದಕ್ಕೆ ಹಿಂದೇಟು ಹಾಕುತ್ತಾರೆ. ಅಗತ್ಯವಸ್ತುಗಳ ಮೇಲಿನ ವೆಚ್ಚ ಹೊರತುಪಡಿಸಿದರೆ, ಇತರ ವೆಚ್ಚಗಳನ್ನು ಹೆಚ್ಚಾಗಿ ಮಾಡುವುದಿಲ್ಲ ಎಂದು ಅವರು ತಮ್ಮ ಲಿಂಕ್ಡ್‌ಇನ್‌ ಪುಟದಲ್ಲಿ ಬರೆದಿದ್ದಾರೆ. ‘ಈ ಸಂದರ್ಭದಲ್ಲಿ ಸರ್ಕಾರವು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳದಿರುವುದನ್ನು ಗಮನಿಸಿದರೆ, ಅದು ತನ್ನ ಸಂಪನ್ಮೂಲಗಳನ್ನು ಈಗ ಹಾಗೇ ಇರಿಸಿಕೊಂಡು ಭವಿಷ್ಯದಲ್ಲಿ ಒಂದು ಆರ್ಥಿಕ ಉತ್ತೇಜನ ಪ್ಯಾಕೇಜ್‌ ಪ್ರಕಟಿಸುವ ಉದ್ದೇಶ ಹೊಂದಿರಬಹುದು. ಆದರೆ, ಇಂತಹ ಕ್ರಮವು ಆತ್ಮಘಾತುಕ’ ಎಂದು ಅವರು ಹೇಳಿದ್ದಾರೆ.

ಈಚಿನ ದಿನಗಳಲ್ಲಿ ಆಟೊಮೊಬೈಲ್‌ನಂತಹ ವಲಯಗಳಲ್ಲಿ ಚೇತರಿಕೆ ಕಂಡುಬಂದಿರುವುದನ್ನು ಆಧರಿಸಿ ಭಾರತದ ಅರ್ಥವ್ಯವಸ್ಥೆಯು ತಕ್ಷಣವೇ ಸುಧಾರಿಸಿಕೊಳ್ಳಲಿದೆ ಎಂದು ಹೇಳಲು ಆಗುವುದಿಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ಖರೀದಿಸಲು ಸಾಧ್ಯವಾಗದಿದ್ದವರು ಈಗ ಖರೀದಿಸುತ್ತಿರುವುದುಈಗ ಕಂಡುಬಂದಿರುವ ಚೇತರಿಕೆಗೆ ಕಾರಣ. ಈ ಬೇಡಿಕೆಗಳು ಕಡಿಮೆ ಆಗುತ್ತವೆ ಎಂದು ಅವರು ಹೇಳಿದ್ದಾರೆ.

ಭಾರತವು ದೃಢ ಬೆಳವಣಿಗೆಯನ್ನು ಕಾಣಬೇಕು. ಆದರೆ, ಕೆಲವು ರಾಜ್ಯಗಳಲ್ಲಿ ಕಾರ್ಮಿಕ ಕಾಯ್ದೆಗಳನ್ನು ಅಮಾನತಿನಲ್ಲಿ ಇರಿಸಿರುವಂತೆ ತಾತ್ಕಾಲಿಕ ಹಾಗೂ ಅರೆಬೆಂದ ಕ್ರಮಗಳನ್ನು ಕೈಗೊಳ್ಳುವುದರಿಂದ ಕೈಗಾರಿಕೆಗಳು ಹಾಗೂ ಕಾರ್ಮಿಕರಿಗೆ ಉತ್ತೇಜನ ನೀಡಲು ಹೆಚ್ಚಿನದೇನನ್ನೂ ಮಾಡಿದಂತೆ ಆಗುವುದಿಲ್ಲ. ಇದು ಸುಧಾರಣೆಗಳಿಗೆ ಕೆಟ್ಟ ಹೆಸರು ತರುತ್ತದೆ ಎನ್ನುವುದು ರಾಜನ್ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT