ಬುಧವಾರ, ಏಪ್ರಿಲ್ 14, 2021
31 °C

ಕುಸಿತದಿಂದ ಚೇತರಿಕೆಯ ಹಾದಿಗೆ ಮರಳಿದ ಅರ್ಥ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ತಯಾರಿಕೆ, ಕಟ್ಟಡ ನಿರ್ಮಾಣ ಮತ್ತು ಕೃಷಿ ವಲಯಗಳಲ್ಲಿ ಚೇತರಿಕೆ ಕಂಡುಬಂದ ಕಾರಣದಿಂದಾಗಿ ದೇಶದ ಅರ್ಥ ವ್ಯವಸ್ಥೆಯು ಡಿಸೆಂಬರ್‌ ತ್ರೈಮಾಸಿಕದಲ್ಲಿ ಬೆಳವಣಿಗೆಯ ಹಾದಿಗೆ ಮರಳಿದೆ. ಹಿಂಜರಿತದ ಸ್ಥಿತಿಯಿಂದ ಹೊರಬಂದಿದೆ. ಇದಕ್ಕೂ ಹಿಂದಿನ ಸತತ ಎರಡು ತ್ರೈಮಾಸಿಕಗಳಲ್ಲಿ ದೇಶದ ಅರ್ಥ ವ್ಯವಸ್ಥೆಯು ಹಿಂಜರಿತ ಅನುಭವಿಸಿತ್ತು.

ತಯಾರಿಕೆ, ಕಟ್ಟಡ ನಿರ್ಮಾಣ ಮತ್ತು ಕೃಷಿ ವಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಗಾರರ ಅಗತ್ಯವಿದೆ. ಈ ಮೂರು ವಲಯಗಳು ದೇಶದಲ್ಲಿ ಉದ್ಯೋಗ ಸೃಷ್ಟಿಗೆ ನೀಡುವ ಕೊಡುಗೆ ದೊಡ್ಡದು. ಲಾಕ್‌ಡೌನ್‌ ನಂತರ ಆರ್ಥಿಕ ಚಟುವಟಿಕೆಗಳಿಗೆ ಹಂತಹಂತವಾಗಿ ಅವಕಾಶ ಕಲ್ಪಿಸಿದ್ದು, ಸರ್ಕಾರ ಮಾಡುವ ವೆಚ್ಚಗಳು ಹೆಚ್ಚಾಗಿದ್ದು, ಹಬ್ಬಗಳ ಸಂದರ್ಭದಲ್ಲಿ ಕಂಡುಬಂದ ಬೇಡಿಕೆಯು ಜಿಡಿಪಿ ಶೇ 0.4ರಷ್ಟು ಬೆಳವಣಿಗೆ ಕಾಣಲು ನೆರವಾದವು. ದೇಶದ ಅರ್ಥ ವ್ಯವಸ್ಥೆಯು ಜೂನ್‌ ತ್ರೈಮಾಸಿಕದಲ್ಲಿ ಶೇ (–)24.4ರಷ್ಟು, ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ (–)7.3ರಷ್ಟು ಕುಸಿತ ದಾಖಲಿಸಿತ್ತು.

ಸರ್ಕಾರ ಕೈಗೊಂಡ ಆರ್ಥಿಕ ಚೇತರಿಕೆಯ ಕ್ರಮಗಳಿಂದಾಗಿ, ಕೋವಿಡ್–19 ಸಾಂಕ್ರಾಮಿಕಕ್ಕೆ ಅಭಿವೃದ್ಧಿಪಡಿಸಿರುವ ಲಸಿಕೆಯು ತಂದಿರುವ ಆಶಾಭಾವನೆಯಿಂದಾಗಿ ಅರ್ಥ ವ್ಯವಸ್ಥೆಯು ತ್ವರಿತ ಗತಿಯಲ್ಲಿ ಬೆಳವಣಿಗೆಯ ಹಳಿಗೆ ಮರಳಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಆದರೆ, ಬೆಳವಣಿಗೆಯ ಗತಿಯನ್ನು ಕಾಯ್ದುಕೊಳ್ಳಬೇಕು ಎಂದಾದರೆ ಸಾಂಕ್ರಾಮಿಕ ಮತ್ತೆ ಹರಡುವುದನ್ನು ತಡೆಯಬೇಕು ಎಂದು ಹೇಳಿದ್ದಾರೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ಕೃಷಿ ವಲಯವು ಶೇ 3.9ರಷ್ಟು ಬೆಳವಣಿಗೆ ದಾಖಲಿಸಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇದು ಶೇ 3.4ರಷ್ಟು ಬೆಳವಣಿಗೆ ಕಂಡಿತ್ತು. ಡಿಸೆಂಬರ್‌ ತ್ರೈಮಾಸಿಕದಲ್ಲಿ ತಯಾರಿಕಾ ವಲಯವು ಶೇ 1.6ರಷ್ಟು ಬೆಳವಣಿಗೆ ಕಂಡಿದೆ. ಸರಿಸುಮಾರು ಆರು ಕೋಟಿ ಜನರಿಗೆ ಉದ್ಯೋಗ ಕಲ್ಪಿಸಿರುವ ನಿರ್ಮಾಣ ಕ್ಷೇತ್ರವು ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 6.2ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಸಾಂಕ್ರಾಮಿಕ ಅಪ್ಪಳಿಸುವವರೆಗೂ ದೇಶದ ಅರ್ಥ ವ್ಯವಸ್ಥೆಯ ಮುಖ್ಯ ಸ್ತಂಭಗಳಲ್ಲಿ ಒಂದಾಗಿದ್ದ ಸೇವಾ ವಲಯವು, ನಕಾರಾತ್ಮಕ ಬೆಳವಣಿಗೆಯ ಹಾದಿಯಲ್ಲಿ ಮುಂದುವರಿದಿದ್ದು, ಶೇ 7.7ರಷ್ಟು ಕುಸಿತ ದಾಖಲಿಸಿದೆ.

‘ಅಂತೂ ಆರ್ಥಿಕತೆಯು ಚೇತರಿಕೆಯ ಹಾದಿಗೆ ಮರಳಿದೆ. ಆದರೆ, ಈ ಬೆಳವಣಿಗೆಯು ಎಷ್ಟು ಸ್ಥಿರ ಎಂಬುದು ಕೊರೊನಾ ಎರಡನೆಯ ಅಲೆಯನ್ನು ಹೇಗೆ ನಿಯಂತ್ರಿಸಲಾಗುತ್ತದೆ ಎಂಬುದನ್ನು ಆಧರಿಸಿದೆ. ಶಿಕ್ಷಣ, ಹೋಟೆಲ್ ಮತ್ತು ರೆಸ್ಟಾರೆಂಟ್‌, ಪ್ರವಾಸ ಮತ್ತು ಪ್ರಯಾಣ ವಲಯಗಳು ಇನ್ನೂ ಪೂರ್ತಿಯಾಗಿ ತೆರೆದುಕೊಳ್ಳಬೇಕಿವೆ. ಈಗಿನ ಸಂದರ್ಭದಲ್ಲಿ ಕೆಲವೆಡೆ ಕಿರು ಅವಧಿಯ ಲಾಕ್‌ಡೌನ್‌ ಕ್ರಮಗಳು ಜಾರಿಯಲ್ಲಿ ಇವೆ. ಇಂತಹ ಕ್ರಮಗಳು ತೀವ್ರಗೊಂಡರೆ ನಾಲ್ಕನೆಯ ತ್ರೈಮಾಸಿಕದ ಬೆಳವಣಿಗೆ ದರದ ಮೇಲೆ ಪರಿಣಾಮ ಉಂಟಾಗಬಹುದು’ ಎಂದು ಎಮ್‌ಕೆ ವೆಲ್ತ್‌ ಸಂಸ್ಥೆಯ ಸಂಶೋಧನಾ ವಿಭಾಗದ ಮುಖ್ಯಸ್ಥ ಜೋಸೆಫ್‌ ಥಾಮಸ್ ಅಭಿಪ್ರಾಯ ವ್ಯಕ್ತಪಡಿಸಿದರು.

2020–21 ಹಣಕಾಸು ವರ್ಷವನ್ನು ಪೂರ್ತಿಯಾಗಿ ಪರಿಗಣಿಸಿದರೆ ಅರ್ಥ ವ್ಯವಸ್ಥೆಯು ಶೇ (–)8ರಷ್ಟು ಕುಸಿಯಲಿದೆ ಎಂದು ಶುಕ್ರವಾರ ಬಿಡುಗಡೆ ಮಾಡಲಾದ ಎರಡನೆಯ ಅಂದಾಜಿನಲ್ಲಿ ಹೇಳಲಾಗಿದೆ. ಮೊದಲನೆಯ ಅಂದಾಜಿನಲ್ಲಿ, ಕುಸಿತವು ಶೇ (–)7.7ರಷ್ಟು ಇರಲಿದೆ ಎಂದು ಹೇಳಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು